EPFO: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ

Employee Provident Fund Interest Rate Updated: ಇಪಿಎಫ್ ಖಾತೆಗಳಲ್ಲಿರುವ ಠೇವಣಿಗೆ 2023-24ರ ಸಾಲಿನ ವರ್ಷದಲ್ಲಿ ಬಡ್ಡಿದರವನ್ನು ಶೇ. 8.25ಕ್ಕೆ ಏರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿ ದರ ಶೇ. 8.15ರಷ್ಟು ಇತ್ತು. 2011-12ರ ವರ್ಷದಲ್ಲಿ ಬಡ್ಡಿದರ ಶೇ. 8.25ರಷ್ಟು ಇತ್ತು. 2023-24ರ ವರ್ಷದಲ್ಲೂ ಅಷ್ಟೇ ಬಡ್ಡಿ ದರ ನಿಗದಿ ಮಾಡಲಾಗಿದೆ. ಆರು ಕೋಟಿ ಇಪಿಎಫ್ ಸದಸ್ಯರ ಖಾತೆಗಳಲ್ಲಿ 13 ಲಕ್ಷ ಕೋಟಿ ರೂನಷ್ಟಿದೆ. ಸರ್ಕಾರ ಈಗ ಒಂದು ಲಕ್ಷ ಕೋಟಿ ರೂನಷ್ಟು ಬಡ್ಡಿಹಣ ವರ್ಗಾಯಿಸಲಿದೆ.

EPFO: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2024 | 10:52 AM

ನವದೆಹಲಿ, ಫೆಬ್ರುವರಿ 11: ಉದ್ಯೋಗಿ ಭವಿಷ್ಯ ನಿಧಿ ಅಥವಾ ಪಿಎಫ್ ಸೌಲಭ್ಯ (EPF) ಇರುವ ಉದ್ಯೋಗಿಗಳಿಗೆ ಖುಷಿ ಸುದ್ದಿ ಇದು. ಇಪಿಎಫ್​ಒಗೆ ಬಡ್ಡಿದರ ಇನ್ನಷ್ಟು ಹೆಚ್ಚಿಸಲಾಗಿದೆ. 2023-24ರ ಸಾಲಿನ ವರ್ಷದಲ್ಲಿ ಇಪಿಎಫ್ ಠೇವಣಿಗಳಿಗೆ (deposits) ಬಡ್ಡಿದರವನ್ನು ಶೇ. 8.25ಕ್ಕೆ ನಿಗದಿ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ, ಅಂದರೆ 2022-23ರ ಸಾಲಿನ ವರ್ಷಕ್ಕೆ ಇಪಿಎಫ್ ಬಡ್ಡಿದರ ಶೇ. 8.15ಕ್ಕೆ ನಿಗದಿ ಮಾಡಲಾಗಿದೆ. 2023-24ಕ್ಕೆ ನಿಗದಿ ಮಾಡಲಾಗಿರುವ ಶೇ. 8.25 ಬಡ್ಡಿದರ ಕಳೆದ ಮೂರು ವರ್ಷದಲ್ಲೇ ಗರಿಷ್ಠ ದರವಾಗಿದೆ.

ನಿನ್ನೆ ಶನಿವಾರ ಫೆ. 10ರಂದು ನಡೆದ ಇಪಿಎಫ್​ಒನ ಕೇಂದ್ರೀಯ ಟ್ರಸ್ಟೀ ಮಂಡಳಿಯ (ಸಿಬಿಟಿ) 235ನೇ ಸಭೆಯಲ್ಲಿ ಬಡ್ಡಿದರ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ. ಕೇಂದ್ರ ಕಾನೂನು ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸದ್ಯ ಇಪಿಎಫ್​ಒ ನಿಗದಿ ಮಾಡಲಾಗಿರುವ ಈ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತ ಬಳಿಕ ಸರ್ಕಾರೀ ಗೆಜೆಟ್​ನಲ್ಲಿ ಅಧಿಕೃತವಾಗಿ ನೋಟಿಫೈ ಮಾಡಲಾಗುತ್ತದೆ. ಅದಾದ ಬಳಿಕ ಇಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿಹಣ ಜಮೆಯಾಗುತ್ತದೆ. ಯಾವಾಗ ಬೇಕಾದರೂ ಹಣ ಜಮೆ ಆಗಬಹುದು. ಸದ್ಯ ಆರು ಕೋಟಿಗೂ ಹೆಚ್ಚು ಇಪಿಎಫ್ ಖಾತೆಗಳಿವೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಲಕ್ಷ ಕೋಟಿ ರೂ ವರ್ಗಾವಣೆ

ಕಾರ್ಮಿಕ ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ 2023-24ರ ವರ್ಷ ಸಾಲಿನಲ್ಲಿ ಇಪಿಎಫ್​ನ ಠೇವಣಿಗಳ ಮೊತ್ತ 13 ಲಕ್ಷ ಕೋಟಿ ರೂ ಇದೆ. ಸದಸ್ಯರ ಈ ಠೇವಣಿಗಳಿಗೆ ಒಟ್ಟು 1,07,000 ರೂ ಹಣವನ್ನು ಇಪಿಎಫ್​ಒ ಸಂದಾಯ ಮಾಡಲು ನಿರ್ಧರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿಗಳ ಮೊತ್ತ 11.03 ಲಕ್ಷ ಕೋಟಿ ರೂ ಇತ್ತು. ಅದಕ್ಕೆ 91,151.66 ಕೋಟಿ ರೂ ಬಡ್ಡಿಹಣ ಹಾಕಲಾಗಿತ್ತು. 2023-24ರ ಸಾಲಿನಲ್ಲಿ ಹಾಕಲಾಗಿರುವ ಬಡ್ಡಿ ಹಣ ಇದುವರೆಗಿನ ಗರಿಷ್ಠ ಮೊತ್ತ ಎನಿಸಿದೆ.

ಇಪಿಎಫ್​ಒದಲ್ಲಿರುವ ಬಡ್ಡಿಹಣ ಸಾಮಾನ್ಯವಾಗಿ ಬೇರೆ ಉಳಿತಾಯ ಸ್ಕೀಮ್​ಗಳಿಗಿಂತ ಹೆಚ್ಚು ಇರುತ್ತದೆ. ಇದಕ್ಕೆ ಕಾರಣ, ಇಪಿಎಫ್​ಒ ತನ್ನಲ್ಲಿರುವ ಠೇವಣಿ ಹಣವನ್ನು ಇಟಿಎಫ್ ಫಂಡ್ ಇತ್ಯಾದಿ ಸೂಕ್ತ ಹೂಡಿಕೆಗಳಿಗೆ ವಿನಿಯೋಗಿಸುತ್ತದೆ. ಇದರಿಂದ ಸಿಗುವ ಆದಾಯಕ್ಕೆ ಅನುಗುಣವಾಗಿ ಆ ವರ್ಷದ ಬಡ್ಡಿಹಣ ನಿಗದಿ ಮಾಡಲಾಗುತ್ತದೆ.

ಇದನ್ನೂ ಓದಿ: ಬಿಟ್ಸಿಲಾವನ್ನು ಖರೀದಿಸಿದ ಪೇಟಿಎಂ ಇ-ಕಾಮರ್ಸ್; ಹೆಸರೂ ಕೂಡ ಪೈ ಪ್ಲಾಟ್​ಫಾರ್ಮ್ಸ್ ಎಂದು ಬದಲು

ಹಿಂದಿನ ವರ್ಷಗಳಲ್ಲಿ ಇಪಿಎಫ್​ಗೆ ವಿಧಿಸಲಾಗಿದ್ದ ಬಡ್ಡಿದರ ಇದು…

  • 2011-12ರಲ್ಲಿ: ಶೇ. 8.25
  • 2012-13ರಲ್ಲಿ: ಶೇ. 8.5
  • 2013-14ರಲ್ಲಿ: ಶೇ. 8.75
  • 2014-15ರಲ್ಲಿ: ಶೇ. 8.75
  • 2015-16ರಲ್ಲಿ: ಶೇ. 8.80
  • 2016-17ರಲ್ಲಿ: ಶೇ. 8.65
  • 2017-18ರಲ್ಲಿ: ಶೇ. 8.55
  • 2018-19ರಲ್ಲಿ: ಶೇ. 8.65
  • 2019-20ರಲ್ಲಿ: ಶೇ. 8.50
  • 2020-21ರಲ್ಲಿ: ಶೇ. 8.50
  • 2021-22ರಲ್ಲಿ: ಶೇ. 8.10
  • 2022-23ರಲ್ಲಿ: ಶೇ. 8.15
  • 2023-24ರಲ್ಲಿ: ಶೇ. 8.25

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ