EPFO; ಲೋಕ ಚುನಾವಣೆಗೂ ಮುನ್ನ ಭವಿಷ್ಯ ನಿಧಿ ಬಡ್ಡಿ ದರ ಭಾರೀ ಏರಿಕೆ! ಇದು 3 ವರ್ಷದಲ್ಲೇ ಗರಿಷ್ಠ
EPF: ಇಪಿಎಫ್‌ಒ 2023-24 ಸಾಲಿಗೆ ಸಂಬಂಧಿಸಿದಂತೆ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ ಶೇಕಡಾ 8.25ರಷ್ಟು ಬಡ್ಡಿ ದರವನ್ನು ಹೆಚ್ಚಿಸಿದೆ. ಇಂದು ನಡೆದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ನಂತರ ಇಪಿಎಫ್ಒನ ಆರು ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಸಿಬಿಟಿ ಹೇಳಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organization) ( ಇಪಿಎಫ್‌ಒ ) 2023-24 ಸಾಲಿನ ಉದ್ಯೋಗಿಗಳ ಭವಿಷ್ಯ ನಿಧಿಯ (Employees Provident Fund) ಮೇಲೆ ಶೇಕಡಾ 8.25ರಷ್ಟು ಬಡ್ಡಿ ದರವನ್ನು ಹೆಚ್ಚಿಸಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಇಂದು ನಡೆದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಪಿಎಫ್‌ಒ 2021-22 ರಲ್ಲಿ 8.10 ಪ್ರತಿಶತದಷ್ಟಿತ್ತು, ಆದರೆ ಇದಕ್ಕೆ ಹೋಲಿಸಿದರೆ 2022-23 ಇಪಿಎಫ್ ಮೇಲಿನ ಬಡ್ಡಿ ದರವನ್ನು 8.15 ಶೇಕಡಾಕ್ಕೆ ಹೆಚ್ಚಿಸಿತ್ತು. ಮಾರ್ಚ್ 2022ರಲ್ಲಿ 2021-22 ಸಾಲಿಗೆ ಸಂಬಂಧಿಸಿದಂತೆ EPF ಮೇಲಿನ ಬಡ್ಡಿದರವನ್ನು ಶೇಕಡಾ 8.1ಕ್ಕೆ ಇಳಿಸಿತು, 1977-78 ರಿಂದ EPF ಬಡ್ಡಿ ದರವು ಶೇಕಾಡ 8 ಪ್ರತಿಶತದಷ್ಟು ಕಡಿಮೆಯಾಗಿದೆ.
ಇನ್ನು ಪ್ರಸ್ತುತ ಸಾಲಿನ ಅಂದರೆ 2023-2024ರಲ್ಲಿ ಇಪಿಎಫ್‌ಒ ಬಡ್ಡಿದರವನ್ನು ಶೇಕಡಾ 8.25ರಷ್ಟು ಹೆಚ್ಚಿಸಲು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) ಇಂದು ತನ್ನ ಪ್ರಮುಖ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆ. ಇನ್ನು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಸಿಬಿಟಿ ಹೇಳಿದೆ. ಸರ್ಕಾರದ ಅನುಮೋದನೆಯ ನಂತರ, 2023-24ರ ಇಪಿಎಫ್ ಮೇಲಿನ ಬಡ್ಡಿ ದರವನ್ನು ಇಪಿಎಫ್ಒನ ಆರು ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಇಟಿಎಫ್ನಲ್ಲಿನ ಹೂಡಿಕೆಯಿಂದ ಬಂದ ಶೇ. 50ರಷ್ಟು ಲಾಭದ ಹಣ ಈಕ್ವಿಟಿಗಳಲ್ಲಿ ಮರುಹೂಡಿಕೆ: ಇಪಿಎಫ್‌ಒ ಚಿಂತನೆ
ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ 2018-19ರಲ್ಲಿ 8.65 ಪ್ರತಿಶತದಷ್ಟಿತ್ತು, ಅದನ್ನು 2019-20ರಲ್ಲಿ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತ್ತು. 2016-17ರಲ್ಲಿ ತನ್ನ ಚಂದಾದಾರರಿಗೆ ಶೇ 8.65ರಷ್ಟು ಹಾಗೂ 2017-18ರಲ್ಲಿ ಶೇ 8.55ರಷ್ಟು ಬಡ್ಡಿ ದರವನ್ನು ಒದಗಿಸಿದೆ. ಇನ್ನು ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ 8.75 ಶೇಕಾಡದಷ್ಟು ಬಡ್ಡಿದರವನ್ನು ನೀಡಿದೆ. ಇದು 2012-13ರ ಬಡ್ಡಿದರ 8.5 ಶೇಕಡಾಕ್ಕಿಂತ ಹೆಚ್ಚಾಗಿದೆ. ಇನ್ನು ಈ ಬಾರಿಯ ಬಡ್ಡಿ ದರ ಹೆಚ್ಚಳವನ್ನು ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Sat, 10 February 24