ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ
EPFO Investments In ETFs: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ಗಳಲ್ಲಿನ ಹಣದಲ್ಲಿ ಎರಡೂವರೆ ಲಕ್ಷಕೋಟಿ ರೂಗೂ ಹೆಚ್ಚು ಮೊತ್ತವನ್ನು ಇಟಿಎಫ್ಗಳಲ್ಲಿ ಹೂಡಿಕೆ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಇಪಿಎಫ್ ಹೂಡಿಕೆ ಬಗ್ಗೆ ಡಿಸೆಂಬರ್ 11ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇಪಿಎಫ್ಒ ಸಂಸ್ಥೆ ತನ್ನಲ್ಲಿರುವ ಹಣವನ್ನು ಡೆಟ್ ಮಾರುಕಟ್ಟೆ ಮತ್ತು ಇಟಿಎಫ್ಗಳಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 15ರಷ್ಟು ಹೂಡಿಕೆ ಮಾಡುತ್ತದೆ.
ನವದೆಹಲಿ, ಡಿಸೆಂಬರ್ 12: ಇಪಿಎಫ್ ಖಾತೆಗಳಲ್ಲಿ ಜಮೆ ಆಗುವ ಹಣವನ್ನು ಇಪಿಎಫ್ಒ ಎಲ್ಲಿ ಹೂಡಿಕೆ ಮಾಡುತ್ತದೆ? ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ರಾಮೇಶ್ವರ್ ತೇಲಿ (Rameshwar Teli) ಕಳೆದ ವರ್ಷ ನೀಡಿರುವ ಮಾಹಿತಿ ಪ್ರಕಾರ ಇಪಿಎಫ್ನ ಶೇ. 85ರಷ್ಟು ಹಣವು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಆಗುತ್ತದೆ. ಶೇ. 15ರಷ್ಟು ಹಣವು ಇಟಿಎಫ್ಗಳಲ್ಲಿ ಹೂಡಿಕೆ ಆಗುತ್ತದೆ. ನಿನ್ನೆ (ಡಿ. 11) ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಕಳೆದ ಏಳಕ್ಕೂ ಹೆಚ್ಚು ವರ್ಷಗಳಿಂದ ಇಟಿಎಫ್ಗಳಲ್ಲಿ (ETF- Exchange Traded Fund) ಹೂಡಿಕೆ ಆಗಿರುವ ಪಿಎಫ್ ಹಣ ಎರಡೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.
ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್ವರೆಗೂ ಇಟಿಎಫ್ಗಳಲ್ಲಿ ಇಪಿಎಫ್ಒದಿಂದ ಆಗಿರುವ ಹೂಡಿಕೆಯ ಮೊತ್ತ 27,105 ಕೋಟಿ ರೂ. ಇನ್ನು, 2021-22ರಲ್ಲಿ 43,568 ಕೋಟಿ ರೂ ಮೊತ್ತದ ಇಪಿಎಫ್ ಹಣ ಹೂಡಿಕೆ ಅಗಿತ್ತು. ಮರುವರ್ಷ, ಅಂದರೆ 2022-23ರಲ್ಲಿ ಹೂಡಿಕೆಯು 53,081 ರುಪಾಯಿಗೆ ಹೆಚ್ಚಿತ್ತು.
ವಿವಿಧ ವರ್ಷಗಳಲ್ಲಿ ಇಟಿಎಫ್ನಲ್ಲಿ ಆದ ಇಪಿಎಫ್ ಹೂಡಿಕೆಗಳು
- 2023-24 (ಮೊದಲ ಏಳು ತಿಂಗಳು): 27,105 ಕೋಟಿ ರೂ
- 2022-23ರಲ್ಲಿ: 53,081 ಕೋಟಿ ರೂ
- 2021-22ರಲ್ಲಿ: 43,568 ಕೋಟಿ ರೂ
- 2020-21ರಲ್ಲಿ: 32,071 ಕೋಟಿ ರೂ
- 2019-20ರಲ್ಲಿ: 31,501 ಕೋಟಿ ರೂ
- 2018-19ರಲ್ಲಿ: 27,974 ಕೋಟಿ ರೂ
- 2017-18ರಲ್ಲಿ: 24,790 ಕೋಟಿ ರೂ
- 2016-17ರಲ್ಲಿ: 14,983 ಕೋಟಿ ರೂ
ಏನಿದು ಇಟಿಎಫ್ ಮತ್ತು ಡೆಟ್ ಮಾರ್ಕೆಟ್?
ಇಟಿಎಫ್ ಎಂದರೆ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್. ಮ್ಯುಚುವಲ್ ಫಂಡ್ನಂತೆ ಇದು ಷೇರುಮಾರುಕಟ್ಟೆಯ ವಿವಿಧ ಇಂಡೆಕ್ಸ್ಗಳನ್ನು ಅನುಸರಿಸುತ್ತದೆ. ಷೇರುಗಳನ್ನು ಮಾತ್ರವಲ್ಲ ಬೇರೆ ಬೇರೆ ರೀತಿಯ ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಷೇರುಮಾರುಕಟ್ಟೆಯಲ್ಲಿ ಮ್ಯುಚುವಲ್ ಫಂಡ್ಗಳನ್ನು ವಹಿವಾಟು ಮಾಡಲು ಆಗುವುದಿಲ್ಲ. ಆದರೆ, ಇಟಿಎಫ್ಗಳನ್ನು ಟ್ರೇಡಿಂಗ್ ಮಾಡಬಹುದು.
ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?
ಇನ್ನು, ಡೆಟ್ ಫಂಡ್ಗಳು ಸರ್ಕಾರಿ ಸಾಲಪತ್ರ ಸೇರಿ ವಿವಿಧ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುತ್ತವೆ. ಕಾರ್ಪೊರೇಟ್ ಕಂಪನಿಗಳ ಬಾಂಡ್ಗಳ ಮೇಲೂ ಹೂಡಿಕೆ ಆಗಬಹುದು.
ಇಪಿಎಫ್ಒ ಮತ್ತು ಹೂಡಿಕೆ
ಇಪಿಎಫ್ಒ 2015ರಿಂದ ಈಚೆ ಇಟಿಎಫ್ಗಳಲ್ಲಿ ಹೂಡಿಕೆ ನಡೆಸುತ್ತಾ ಬಂದಿದೆ. ಮೊದಲಿಗೆ ಅದರ ಶೇ. 5ರಷ್ಟು ಹಣವನ್ನು ಇಟಿಎಫ್ಗಳಲ್ಲಿ ಹಾಕಲು ಮಿತಿ ಇತ್ತು. ಇದೀಗ ಆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Tue, 12 December 23