ನಿಮ್ಮ ಪಿಎಫ್ ಖಾತೆಗೆ ಬಡ್ಡಿಹಣ ಯಾವಾಗ ಕ್ರೆಡಿಟ್ ಆಗುತ್ತೆ? ಇಲ್ಲಿದೆ ಇಪಿಎಫ್​ಒ ಅಪ್​ಡೇಟ್ಸ್

|

Updated on: Aug 07, 2023 | 5:52 PM

EPF Interest: ಕೇಂದ್ರ ಸರ್ಕಾರ 2022-23ರ ಹಣಕಾಸು ವರ್ಷಕ್ಕೆ ಪಿಎಫ್ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಕೊಡಲಿದೆ. ಇದು ಯಾವಾಗ ಕ್ರೆಡಿಟ್ ಆಗುತ್ತದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಇದಕ್ಕೆ ಇಪಿಎಫ್​​ಒ ಸ್ಪಂದಿಸಿದೆ.

ನಿಮ್ಮ ಪಿಎಫ್ ಖಾತೆಗೆ ಬಡ್ಡಿಹಣ ಯಾವಾಗ ಕ್ರೆಡಿಟ್ ಆಗುತ್ತೆ? ಇಲ್ಲಿದೆ ಇಪಿಎಫ್​ಒ ಅಪ್​ಡೇಟ್ಸ್
ಇಪಿಎಫ್​ಒ
Follow us on

ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಗೆ ಉದ್ಯೋಗಿಯ ಸಂಬಳ ಹಾಗೂ ಉದ್ಯೋಗನೀಡುಗ (Employer) ಸಂಸ್ಥೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣ ತುಂಬಿಸುತ್ತಾರೆ. ಈ ಹಣಕ್ಕೆ ಸರ್ಕಾರ ವರ್ಷಕ್ಕೊಮ್ಮೆ ಬಡ್ಡಿಹಣ ಸೇರಿಸುತ್ತದೆ. ಈ ಬಡ್ಡಿಹಣವನ್ನು (PF Interest) ಪ್ರತೀ ವರ್ಷವೂ ಸರ್ಕಾರವೇ ನಿಗದಿ ಮಾಡುತ್ತದೆ. 2022-23ರ ಹಣಕಾಸು ವರ್ಷಕ್ಕೆ ಇಪಿಎಫ್ ನಿಧಿ ಮೇಲೆ ಶೇ. 8.15ರಷ್ಟು ಬಡ್ಡಿ ಕೊಡಲೆಂದು ನಿರ್ಧರಿಸಲಾಗಿದೆ. ಇಪಿಎಫ್​ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಮಂಡಳಿ (CBT- Central Board of Trustees) ಈ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ನೀಡಬೇಕೆಂದು ಮಾಡಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಜುಲೈ 24ರಂದು ಒಪ್ಪಿಗೆ ಕೊಟ್ಟಿದೆ. ಅದಾದ ಬಳಿಕ ಪಿಎಫ್ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಜಮೆ ಆಗುತ್ತದೆಂದು ಕಾಯುತ್ತಿದ್ದಾರೆ. ಇಲ್ಲಿಯವರೆಗೂ ಆಗಿಲ್ಲ.

ಟ್ವಿಟ್ಟರ್​ನಲ್ಲಿ ಹಲವು ಇಪಿಎಫ್ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇಪಿಎಫ್​ಒ ಸಂಸ್ಥೆ ಮಾಡಿದ ವಿಡಿಯೋ ಪೋಸ್ಟ್​ವೊಂದಕ್ಕೆ ಪ್ರತಿಕ್ರಿಯೆಯಾಗಿ ಕೆಲ ಸದಸ್ಯರು ಇಪಿಎಫ್ ಬಡ್ಡಿ ಹಣ ಯಾವಾಗ ಕ್ರೆಡಿಟ್ ಆಗುತ್ತೆ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ಇಪಿಎಫ್​ಒ, ಯಾವಾಗ ಬಡ್ಡಿಹಣ ಕೊಟ್ಟರೂ ಅದರಲ್ಲಿ ವ್ಯತ್ಯಯ ಆಗಲ್ಲ ಎಂದಿದೆ.

ಇದನ್ನೂ ಓದಿ: ಭರ್ಜರಿಯಾಗಿ ಬಡ್ಡಿದರ ಹೆಚ್ಚಿಸಿದ ಸೂರ್ಯೋದಯ್ ಬ್ಯಾಂಕ್; ಎಫ್​​ಡಿಗೆ ಶೇ. 9.10ರವರೆಗೂ ಬಡ್ಡಿ

‘ಈ ಪ್ರಕ್ರಿಯೆ (ಬಡ್ಡಿಹಣ ವಿಲೇವಾರಿ ಮಾಡುವ) ಚಾಲನೆಯಲ್ಲಿದೆ. ಬಹಳ ಶೀಘ್ರದಲ್ಲಿ ಇದು ಸೇರಬಹುದು. ಯಾವಾಗಲೇ ಬಡ್ಡಿ ಜಮೆಯಾದರೂ ಪೂರ್ಣಮೊತ್ತ ಕೂಡುತ್ತದೆ. ಬಡ್ಡಿಯಲ್ಲಿ ಏನೂ ಕಡಿಮೆ ಆಗುವುದಿಲ್ಲ. ದಯವಿಟ್ಟು ತಾಳ್ಮೆ ಇರಲಿ’ ಎಂದು ಇಪಿಎಫ್​ಒ ಟ್ವೀಟ್ ಮಾಡಿದೆ.

ಇತರ ಸಮಸ್ಯೆಗಳಿಗೂ ಇಪಿಎಫ್​ಒ ಸ್ಪಂದನೆ

ಹಾಗೆಯೇ, ಮತ್ತೊಬ್ಬರು, ತಮ್ಮ ಪಿಎಫ್ ಕ್ಲೇಮ್ ಅರ್ಜಿಗೆ ಆಗಸ್ಟ್ 1ರಂದು ಅನುಮೋದನೆ ಸಿಕ್ಕಿದೆ. ಆದರೆ, ಹಣ ಇನ್ನೂ ಕ್ರೆಡಿಟ್ ಆಗಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಇಪಿಎಫ್​ಒ, ಪಿಎಫ್ ಹಣ ಬಿಡುಗಡೆ ಆಗಲು 20 ದಿನ ಬೇಕಾಗುತ್ತದೆ ಎಂದಿದೆ.

ಇನ್ನು, ಪಿಎಫ್ ಟ್ರಾನ್ಸ್​ಫರ್ ಸೇರಿದಂತೆ ಏನಾದರೂ ಸಮಸ್ಯೆಗಳು ಕಂಡುಬಂದರೆ epfigms.gov.in ಜಾಲತಾಣಕ್ಕೆ ಹೋಗಿ ದೂರನ್ನು ದಾಖಲು ಮಾಡುವಂತೆಯೂ ಇಪಿಎಫ್ ಮಾರ್ಗದರ್ಶನ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Mon, 7 August 23