
ನವದೆಹಲಿ, ಜನವರಿ 18: ಗ್ರೀನ್ಲ್ಯಾಂಡ್ ಅನ್ನು ಕೊಡಲು ಒಪ್ಪದ ಡೆನ್ಮಾರ್ಕ್ ದೇಶದ ಪರವಾಗಿ ನಿಂತಿರುವ ಕೆಲ ಐರೋಪ್ಯ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 10ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಫೆಬ್ರುವರಿ 1ರಿಂದ ಈ ಟ್ಯಾರಿಫ್ ಜಾರಿಗೆ ಬರುತ್ತದೆ. ಜೂನ್ 1ರಿಂದ ಈ ಟ್ಯಾರಿಫ್ ಶೇ. 25ಕ್ಕೆ ಏರಲಿದೆ. ಗ್ರೀನ್ಲ್ಯಾಂಡ್ ದಕ್ಕುವವರೆಗೂ ಯೂರೋಪಿಯನ್ ದೇಶಗಳ ಮೇಲಿನ ಈ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುಕೆ (ಬ್ರಿಟನ್), ದಿ ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ದೇಶಗಳು ಗ್ರೀನ್ಲ್ಯಾಂಡ್ ವಿಚಾರವಾಗಿ ಅಮೆರಿಕದ ನಿಲುವಿಗೆ ವಿರುದ್ಧವಾಗಿ ನಿಂತಿವೆ. ಈ ಎಂಟು ಯೂರೋಪಿಯನ್ ದೇಶಗಳಿಗೆ ಸದ್ಯ ಟ್ರಂಪ್ ಟ್ಯಾರಿಫ್ ಪ್ರಕಟಿಸಿದ್ದಾರೆ. ಮುಂದೆ ಇದು ಎಲ್ಲಾ ಐರೋಪ್ಯ ದೇಶಗಳಿಗೆ ಜಾರಿಯಾಗಬಹುದು. ಅಮೆರಿಕದ ಈ ಟ್ಯಾರಿಫ್ ಬೆದರಿಕೆ ಕ್ರಮವನ್ನು ಐರೋಪ್ಯ ಒಕ್ಕೂಟದ ಮುಖಂಡರು ಖಂಡಿಸಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ
ಯೂರೋಪಿಯನ್ ಯೂನಿಯನ್ನಲ್ಲಿ 27 ಸದಸ್ಯ ದೇಶಗಳಿವೆ. ಇಂದು ಭಾನುವಾರ ತುರ್ತು ಸಭೆ ಕರೆದು ಚರ್ಚಿಸಲಾಯಿತು. ಐರೋಪ್ಯ ದೇಶಗಳ ಮೇಲೆ ಟ್ಯಾರಿಫ್ ಹಾಕುವ ಅಮೆರಿಕದ ನಿರ್ಧಾರ ತಪ್ಪು. ಟ್ಯಾರಿಫ್ ಬೆದರಿಕೆ ಮೂಲಕ ತಮ್ಮನ್ನು ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದರೆ ಬಗ್ಗುವುದಿಲ್ಲ ಎಂದು ಇಯು ಹಾಗೂ ಯುಕೆ ಸ್ಪಷ್ಟಪಡಿಸಿವೆ. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಸದಸ್ಯ ದೇಶವಲ್ಲ. ಆದರೂ ಗ್ರೀನ್ಲ್ಯಾಂಡ್ ವಿಚಾರವಾಗಿ ಐರೋಪ್ಯ ದೇಶಗಳ ನಿಲುವಿಗೆ ಬ್ರಿಟನ್ ಬೆಂಬಲವಾಗಿ ನಿಂತಿದೆ.
ಡೊನಾಲ್ಡ್ ಟ್ರಂಪ್ ನಾಯಕತ್ವದಲ್ಲಿ ಅಮೆರಿಕ ಸರ್ಕಾರದ ವರ್ತನೆ ಬಹಳ ಅನಿಶ್ಚಿತ ಮತ್ತು ಆಕ್ರಮಣಕಾರಿಯಾಗಿದೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಿದಾಕ್ಷಣ ಎಲ್ಲವೂ ಸರಿಯಾಗಿ ಬಿಡುತ್ತೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಯೂರೋಪ್, ಕೆನಡಾ, ಆಸ್ಟ್ರೇಲಿಯಾ ಇತ್ಯಾದಿ ಮಿತ್ರ ದೇಶಗಳೊಂದಿಗೆ ಟ್ರಂಪ್ ನಡೆದುಕೊಂಡ ರೀತಿಯು ಅಮೆರಿಕದ ಹೊಸ ನೀತಿಗೆ ಕನ್ನಡಿ ಹಿಡಿದಂತಿದೆ.
ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ
ಅಮೆರಿಕದ ಟ್ರೇಡ್ ಡೀಲ್ಗೋಸ್ಕರ ಭಾರತ ತನ್ನ ಹಿತಾಸಕ್ತಿಗಳನ್ನು ಬಲಿಕೊಡಬಾರದು. ಅಮೆರಿಕದ ಒತ್ತಡಕ್ಕೆ ಒಳಗಾಗಿ ಇರಾನ್ನ ಛಾಬಹಾರ್ ಪೋರ್ಟ್ ಪ್ರಾಜೆಕ್ಟ್ನಿಂದ ಹಿಂದಕ್ಕೆ ಸರಿಯಿತು. ತನ್ನ ಇಂಧನ ಆಮದಿನಲ್ಲಿ ವ್ಯತ್ಯಯ ಮಾಡಿಕೊಂಡಿತು. ಬ್ರಿಕ್ಸ್ ಗುಂಪಿನೊಂದಿಗೆ ತನ್ನ ಪಾಲ್ಗೊಳ್ಳುವಿಕೆಯನ್ನು ಮಿತಿಗೊಳಿಸಿತು. ಇಷ್ಟು ರಾಜಿ ಮಾಡಿಕೊಂಡರೂ ಅಮೆರಿಕವು ಭಾರತಕ್ಕೆ ಧಮಕಿ ಹಾಕುವುದು ಮುಂದುವರಿದೇ ಇದೆ. ಹೀಗಾಗಿ, ಭಾರತವು ಸ್ವಾಯತ್ತ ಕಾರ್ಯತಂತ್ರ ನಿಲುವು ಹೊಂದಿರಬೇಕು ಎಂಬುದು ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ