ಸದ್ದಿಲ್ಲದೆ ಟ್ರಂಪ್‌ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ
ಒಂದೆಡೆ ಅಮೆರಿಕ ಭಾರತದ ಮೇಲೆ ಶೇ. 50ರಷ್ಟು ವ್ಯಾಪಾರ ಸುಂಕ ವಿಧಿಸಿದೆ. ಭಾರತ ಅನೇಕ ಬಾರಿ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದರೂ ಟ್ರಂಪ್ ಭಾರತದ ವಸ್ತುಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿಲ್ಲ. ಹೀಗಾಗಿ, ಭಾರತ ಇದೀಗ ಸದ್ದಿಲ್ಲದೆ ಅಮೆರಿಕಕ್ಕೆ ತಿರುಗೇಟು ನೀಡಿದೆ. ಇಡೀ ಜಗತ್ತು ಅಮೆರಿಕ ಹಾಕುವ ತಾಳಕ್ಕೆ ಕುಣಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಭಾರತ ಅಮೆರಿಕದ ದ್ವಿದಳ ಧಾನ್ಯಕ್ಕೆ ಶೇ. 30ರಷ್ಟು ತೆರಿಗೆ ವಿಧಿಸುವ ಮೂಲಕ ಶಾಕ್ ನೀಡಿದೆ.

ನವದೆಹಲಿ, ಜನವರಿ 17: ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ವಿಧಿಸಿದೆ. ಹೀಗಾಗಿ, ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್‌ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಅಮೆರಿಕದ ರೈತರಿಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ. ಭಾರತದೊಂದಿಗೆ ವ್ಯಾಪಾರ ಮಾತುಕತೆಗಳು ಮುಂದುವರಿದಂತೆ ಅಮೆರಿಕದ ಎರಡು ರಾಜ್ಯಗಳ ಶಾಸಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಸಲಹೆ ನೀಡಿದ್ದಾರೆ. ಅಮೆರಿಕದ ದ್ವಿದಳ ಧಾನ್ಯಗಳ ಆಮದಿನ ಮೇಲೆ ಭಾರತ ವಿಧಿಸುತ್ತಿರುವ ಸುಂಕಗಳನ್ನು ಕಡಿಮೆ ಮಾಡಲು ಮಾತುಕತೆ ನಡೆಸುವಂತೆ ಟ್ರಂಪ್ ಅವರಿಗೆ ಒತ್ತಾಯಿಸಿದ್ದಾರೆ.
ಯುಎಸ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಮೊಂಟಾನಾ ಮತ್ತು ಉತ್ತರ ಡಕೋಟಾ ದ್ವಿದಳ ಧಾನ್ಯಗಳ ಬೆಳೆಗಳ 2 ಪ್ರಮುಖ ಉತ್ಪಾದಕರು ಮತ್ತು ಭಾರತವು ವಿಶ್ವದ ಸೇವನೆಯ ಸುಮಾರು ಶೇ. 27ರಷ್ಟು ಅತಿದೊಡ್ಡ ಗ್ರಾಹಕ ಎಂದು ಸೆನೆಟರ್‌ಗಳು ತಿಳಿಸಿದ್ದಾರೆ. ಅಮೆರಿಕದಿಂದ ರಫ್ತು ಮಾಡುವ ಹಳದಿ ಬಟಾಣಿಗಳ ಮೇಲೆ ಭಾರತ ಶೇ. 30ರಷ್ಟು ಸುಂಕವನ್ನು ಘೋಷಿಸಿದೆ. ಈ ಸುಂಕಗಳು ನವೆಂಬರ್ 2025ರಲ್ಲಿ ಜಾರಿಗೆ ಬಂದಿವೆ. ಇದಕ್ಕೂ ಮೊದಲು ಹಳದಿ ಬಟಾಣಿಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ರಫ್ತು ಮಾಡಲು ಅವಕಾಶವಿತ್ತು.
ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?
ಈ ನಿಯಮ ಮಾರ್ಚ್ 2026ರವರೆಗೆ ಇರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅಗ್ಗದ ಆಮದುಗಳ ಒಳಹರಿವು ಸ್ಥಳೀಯ ಬೆಳೆಗಳ ಬೆಲೆಗಳನ್ನು ನಿಗ್ರಹಿಸುವುದರಿಂದ ದೇಶೀಯ ಭಾರತೀಯ ರೈತರು ಮಧ್ಯಪ್ರವೇಶಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ ನಂತರ ಮೋದಿ ಸರ್ಕಾರ ತನ್ನ ನೀತಿಗಳನ್ನು ಬದಲಾಯಿಸಿಕೊಂಡು ಅಮೆರಿಕದ ಆಮದು ಧಾನ್ಯಗಳ ಮೇಲೆ ಸುಂಕ ಹೇರಿತ್ತು.

ದ್ವಿದಳ ಧಾನ್ಯಗಳ ಸುಂಕಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವಂತೆ ಸೆನೆಟರ್‌ಗಳು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಇದರಿಂದ ಭಾರತದಲ್ಲಿನ ಅಮೇರಿಕನ್ ಉತ್ಪಾದಕರು ಮತ್ತು ಗ್ರಾಹಕರಿಗೆ ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತೀಯ ಸುಂಕಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸುವ ಈ ವಿನಂತಿಯು ಯುಎಸ್ ಭಾರತೀಯ ಆಮದುಗಳ ಮೇಲೆ ಶೇ. 50ರಷ್ಟು ಸುಂಕವುನ್ನು ಜಾರಿ ಮಾಡಿರುವ ಸಮಯದಲ್ಲಿ ಬಂದಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25ರಷ್ಟು ದಂಡದ ರೂಪದಲ್ಲಿ ಸುಂಕ ಹೇರಿದ್ದರು. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ ಶೇ. 50ರಷ್ಟು ಸುಂಕ ಹೇರಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
