ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ
Davos WEF Summit 2026: ಈ ವರ್ಷದ ಡಾವೊಸ್ ವಾರ್ಷಿಕ ಡಬ್ಲ್ಯುಇಎಫ್ ಸಭೆಯಲ್ಲಿ ಭಾರತದಿಂದ ಪ್ರಬಲ ಉಪಸ್ಥಿತಿ ಇರುತ್ತದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಡಾವೋಸ್ ಸಭೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಪೈಪೋಟೊ ನಡೆಸುತ್ತಿವೆ. ಒಂದೇ ಮಹಡಿಯಲ್ಲಿ ವಿವಿಧ ರಾಜ್ಯಗಳ ಪೆವಿಲಿಯನ್ ನಿರ್ಮಿಸಲಾಗಿದೆ. ಪ್ರಲ್ಹಾದ್ ಜೋಷಿ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಕೇಂದ್ರ ಸಚಿವರು, ಅರಕ್ಕೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಬಹುದು.

ನವದೆಹಲಿ, ಜನವರಿ 18: ಸ್ವಿಟ್ಜರ್ಲ್ಯಾಂಡ್ನ ಡಾವೊಸ್ನಲ್ಲಿ ಸೋಮವಾರದಿಂದ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ (Davos WEF Summit 2026) ಭಾರತ ಸೇರಿದಂತೆ ವಿವಿಧ ದೇಶಗಳ ಆಡಳಿತಗಾರರು, ಉದ್ಯಮಿಗಳು, ಸಂಘ ಸಂಸ್ಥೆಗಳು, ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 3,000ಕ್ಕೂ ಅಧಿಕ ಮಂದಿ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಜನವರಿ 19, ಸೋಮವಾರದಿಂದ ಜನವರಿ 23, ಶುಕ್ರವಾರದವರೆಗೆ ಐದು ದಿನಗಳ ಕಾಲ ಈ ಸಮಿಟ್ ನಡೆಯಲಿದೆ.
ಅಮೆರಿಕ ಈ ಬಾರಿಯ ಸಭೆಯಲ್ಲಿ ವಿಶೇಷ ಅಸ್ಥೆ ವಹಿಸಿದೆ. ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ಅತಿದೊಡ್ಡ ನಿಯೋಗವು ಡಾವೋಸ್ ಸಮಿಟ್ನಲ್ಲಿ ಪಾಲ್ಗೊಳ್ಳಲಿದೆ. ಬೇರೆ ಬೇರೆ ದೇಶಗಳ ವಿದೇಶ ಮಂತ್ರಿಗಳು, ವಿತ್ತ ಮಂತ್ರಿಗಳು, ವಾಣಿಜ್ಯ ಮಂತ್ರಿಗಳು ಪಾಲ್ಗೊಳ್ಳಬಹುದು.
ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ
ಭಾರತದಿಂದ ಪ್ರಬಲ ತಂಡ…
ಡಾವೋಸ್ ಡಬ್ಲ್ಯುಇಎಫ್ 2026 ಸಭೆಯಲ್ಲಿ ಭಾರತದಿಂದ ಪ್ರಬಲ ಪ್ರಾತಿನಿಧ್ಯ ಇರುತ್ತದೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್, ಕೆ ರಾಮಮೋಹನ್ ನಾಯ್ಡು ಪಾಲ್ಗೊಳ್ಳಬಹುದು. ಆರು ರಾಜ್ಯಗಳ ಮುಖ್ಯಮಂತ್ರಿಗಳು ಡಾವೋಸ್ಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ದೆವೇಂದ್ರ ಫಡ್ಣವಿಸ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಸ್ಸಾಂ ಸಿಎಂ ಹಿಮಂತ ಬಸ್ವ ಶರ್ಮಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ಅವರು ಪಾಲ್ಗೊಳ್ಳುತ್ತಿದ್ದಾರೆ. ನೂರಕ್ಕೂ ಅಧಿಕ ಪ್ರಮುಖ ಕಂಪನಿಗಳ ಸಿಇಒಗಳ ಉಪಸ್ಥಿತಿಯೂ ಇರುತ್ತದೆ.
ಡಾವೋಸ್ ಕಾಂಗ್ರೆಸ್ ಸೆಂಟರ್ನ ಕಟ್ಟಡದ ಒಂದೇ ಫ್ಲೋರ್ನಲ್ಲಿ ಭಾರತದ ಎಂಟು ರಾಜ್ಯಗಳ ಪೆವಿಲಿಯನ್ ಇದೆ. ಕರ್ನಾಟಕ ತೆಲಂಗಾಣ, ಗುಜರಾತ್, ಉತ್ತರಪ್ರದೇಶ ಹೀಗೆ ವಿವಿಧ ರಾಜ್ಯಗಳಿಗೆ ವಿಶೇಷ ಮೀಟಿಂಗ್ ಹಾಲ್ಗಳನ್ನು ಒಂದೇ ಫ್ಲೋರ್ನಲ್ಲಿ ಮೀಸಲಿರಿಸಲಾಗಿದೆ.
ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು
ಕರ್ನಾಟಕದಿಂದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ
ಕರ್ನಾಟಕದಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಬೇಕಿತ್ತು. ಆದರೆ, ಕಾರಣಾಂತರದಿಂದ ಅವರು ಹೋಗುತ್ತಿಲ್ಲ. ಸಚಿವರಾದ ಎಂಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ವೆಸ್ಟ್ ಕರ್ನಾಟಕ ಎಂದು ಪ್ರತ್ಯೇಕ ಪೆವಿಲಿಯನ್ ನಿರ್ಮಿಸಲಾಗಿದೆ.
ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ, ಎನ್ ಚಂದ್ರಶೇಖರನ್, ಸಂಜೀವ್ ಬಜಾಜ್, ಹರಿ ಎಸ್ ಭಾರ್ತಿಯಾ, ಸುದರ್ಶನ್ ವೇಣು, ಅನೀಶ್ಶಾ, ನಾದಿರ್ ಗೋದ್ರೇಜ್, ಸಾಜ್ಜನ್ ಜಿಂದಾಲ್, ನಿಖಿಲ್ ಕಾಮತ್, ಸುನೀಲ್ ಭಾರ್ತಿ ಮಿಟ್ಟಲ್, ನಂದನ್ ನಿಲೇಕಣಿ, ಸಲೀಲ್ ಪರೇಖ್, ರಿಷದ್ ಪ್ರೇಮ್ಜಿ ಮೊದಲಾದವರು ಡಾವೋಸ್ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




