ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಬಳಸುವಂತಿಲ್ಲ; ಎಷ್ಟು ದಂಡ ಕಾದಿರುತ್ತೆ ಗೊತ್ತಾ?

|

Updated on: Sep 17, 2024 | 3:08 PM

Permanent Account Number: ಪ್ಯಾನ್ ನಂಬರ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಬಹಳ ಅಗತ್ಯ ದಾಖಲೆಗಳಲ್ಲಿ ಒಂದು. ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಈ ಪ್ಯಾನ್ ಕಾರ್ಡ್ ಅನ್ನು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಹೊಂದುವಂತಿಲ್ಲ. ಹಾಗೇನಾದರೂ ಎರಡೆರಡು ಬಳಕೆ ಮಾಡುತ್ತಿದ್ದರೆ ಇಲಾಖೆಯಿಂದ ಭಾರೀ ಮೊತ್ತದ ದಂಡ ವಿಧಿಸಬಹುದು.

ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಬಳಸುವಂತಿಲ್ಲ; ಎಷ್ಟು ದಂಡ ಕಾದಿರುತ್ತೆ ಗೊತ್ತಾ?
ಪ್ಯಾನ್ ನಂಬರ್
Follow us on

ನವದೆಹಲಿ, ಸೆಪ್ಟೆಂಬರ್ 17: ಹಣಕಾಸು ಚಟುವಟಿಕೆಗಳಿಗೆ ಪರ್ಮನೆಂಟ್ ಅಕೌಂಟ್ ನಂಬರ್ ಬಹಳ ಅಗತ್ಯ. ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ ನಂಬರ್ ನೀಡಲಾಗುತ್ತದೆ. ಬ್ಯಾಂಕ್ ಅಕೌಂಟ್ ತೆರೆಯುವುದರಿಂದ ಹಿಡಿದು ಹಲವು ಹಣಕಾಸು ಕಾರ್ಯಗಳಿಗೆ ಪ್ಯಾನ್ ಅವಶ್ಯಕವಾಗಿ ಬೇಕಾಗುತ್ತದೆ. ದೇಶದ ಗುರುತು ದಾಖಲೆಗಳಲ್ಲೂ ಅದು ಒಂದೆನಿಸಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಲವು ಜನರು ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದಿರಬಹುದು. ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ಯಾನ್ ನಂಬರ್ ಮಾತ್ರವೇ ಬಳಸಬಹುದು.

ಕ್ರೆಡಿಟ್ ಕಾರ್ಡ್​ಗಳ ಗಾತ್ರದಲ್ಲಿ ಇರುವ ಪ್ಯಾನ್ ಕಾರ್ಡ್​ನಲ್ಲಿ ವ್ಯಕ್ತಿಯ ಹೆಸರು, ಭಾವಚಿತ್ರ, ಜನ್ಮದಿನಾಂಕ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ ನಮೂದಾಗಿರುತ್ತದೆ. 12 ಅಕ್ಷರ ಮತ್ತು ಅಂಕಿಗಳ ಸಂಯೋಜನೆ ಸಂಖ್ಯೆ ಇರುತ್ತದೆ. ಪ್ಯಾನ್ ನಂಬರ್ ಎಂದರೆ ಇದೇ ಸಂಖ್ಯೆಯೇ. ವ್ಯಕ್ತಿಯ ಹೆಸರಲ್ಲಿ ಎಷ್ಟು ಬ್ಯಾಂಕ್ ಖಾತೆಗಳಿವೆ, ಠೇವಣಿಗಳಿವೆ, ಸಾಲಗಳಿವೆ, ಹೂಡಿಕೆಗಳಿವೆ ಇತ್ಯಾದಿ ಸಮಗ್ರ ಮಾಹಿತಿಯನ್ನು ಪ್ಯಾನ್ ನಂಬರ್ ಮೂಲಕ ಟ್ರ್ಯಾಕ್ ಮಾಡಬಹುದು. ಈ ಕಾರಣಕ್ಕೆ ಪ್ಯಾನ್ ಬಹಳ ಅವಶ್ಯಕ ದಾಖಲೆ ಎನಿಸಿದೆ.

ಮೊದಲೇ ಹೇಳಿದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದುವಂತಿಲ್ಲ. ಎರಡು ಮತ್ತು ಹೆಚ್ಚು ಪ್ಯಾನ್ ನಂಬರ್ ಹೊಂದಿರುವುದು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಆಗುತ್ತದೆ. ಈ ರೀತಿಯ ಅಕ್ರಮ ಕಂಡು ಬಂದಲ್ಲಿ ಆದಾಯ ತೆರಿಗೆ ಇಲಾಖೆ 272ಬಿ ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು. ಈ ಕಾಯ್ದೆ ಪ್ರಕಾರ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 10,000 ರೂ ದಂಡ ವಿಧಿಸಬಹುದು.

ಇದನ್ನೂ ಓದಿ: 1,900 ಕೋಟಿ ರೂಗೆ ಕಟ್ಟಿದ ರಸ್ತೆಗೆ 8,000 ಕೋಟಿ ರೂ ಟೋಲ್? ನಿತಿನ್ ಗಡ್ಕರಿ ಉತ್ತರ ಇದು

ಯಾರಾದರೂ ಕೂಡ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಒಂದನ್ನು ಮಾತ್ರ ಉಳಿಸಿಕೊಂಡು ಮತ್ತೊಂದನ್ನು ಸರೆಂಡರ್ ಮಾಡುವುದು ಒಳ್ಳೆಯದು.

ಅಧಾರ್ ನಂಬರ್​ಗೆ ಪ್ಯಾನ್ ಲಿಂಕ್ ಮಾಡಿ

ಪ್ಯಾನ್ ನಂಬರ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ ಅಸಿಂಧು ಆಗಿರುತ್ತದೆ. ಅದನ್ನು ಬಳಸಲು ಆಗುವುದಿಲ್ಲ. ಎರಡೆರಡು ಪ್ಯಾನ್ ನಂಬರ್ ಹೊಂದಿರುವ ಪ್ರಕರಣಗಳು ಹಲವು ಇದ್ದ ಕಾರಣ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡುವ ಕಾರ್ಯಕ್ಕೆ ಆದಾಯ ತೆರಿಗೆ ಇಲಾಖೆ ಚಾಲನೆಗೆ ಕೊಟ್ಟಿತ್ತು. ಈಗ ಯಾರೇ ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸುತ್ತಿದ್ದರೆ ಆಧಾರ್ ದಾಖಲೆ ಸಲ್ಲಿಸುವುದು ಕಡ್ಡಾಯ. ಹೀಗಾಗಿ ಪ್ಯಾನ್ ಅಲಾಟ್ ಮಾಡುವಾಗಲೇ ಆಧಾರ್ ಲಿಂಕ್ ಆಗಿರುತ್ತದೆ. 2017ಕ್ಕೆ ಮುಂಚೆ ಮಾಡಿಸಿದ್ದ ಪ್ಯಾನ್ ನಂಬರ್​ಗೆ ಆಧಾರ್ ಲಿಂಕ್ ಆಗಿರಲಿಲ್ಲ. ಅಂಥವರು ಲಿಂಕ್ ಮಾಡಬೇಕು. ಈಗ ಉಚಿತವಾಗಿ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗುವುದಿಲ್ಲ. ನಿರ್ದಿಷ್ಟ ಶುಲ್ಕ ಪಾವತಿಸಿ ಲಿಂಕ್ ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ