ನವದೆಹಲಿ, ಡಿಸೆಂಬರ್ 11: ವಿದೇಶೀ ನೇರ ಹೂಡಿಕೆ ಕಳೆದ 24 ವರ್ಷದಲ್ಲಿ ಭಾರತಕ್ಕೆ ಒಂದು ಟ್ರಿಲಿಯನ್ ಡಾಲರ್ ಒಳ ಹರಿವು ಆಗಿದೆ. ಕಳೆದ ಎರಡ್ಮೂರು ದಶಕಗಳಲ್ಲಿ ಜಾಗತಿಕ ಸಂಸ್ಥೆಗಳಿಗೆ ಭಾರತ ಪ್ರಶಸ್ತ ಹೂಡಿಕೆ ಸ್ಥಳ ಆಗಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಉದ್ಯಮ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯಾದ ಡಿಪಿಐಐಟಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2000ರ ಏಪ್ರಿಲ್ನಿಂದ 2024ರ ಸೆಪ್ಟೆಂಬರ್ವರೆಗೆ ಭಾರತದೊಳಗೆ ಆದ ಎಫ್ಡಿಐ ಒಳಹರಿವು 1,033.40 ಬಿಲಿಯನ್ ಡಾಲರ್ ಎನ್ನಲಾಗಿದೆ. ಸುಮಾರು 85 ಲಕ್ಷ ಕೋಟಿ ರೂಗಿಂತಲೂ ಅಧಿಕ ಮೊತ್ತದ ಎಫ್ಡಿಐ ಭಾರತಕ್ಕೆ ಬಂದಿದೆ.
ಈ 24 ವರ್ಷದಲ್ಲಿ ಭಾರತಕ್ಕೆ ಬಂದ ಎಫ್ಡಿಐನಲ್ಲಿ ಅರ್ಧದಷ್ಟು ಭಾಗವು ಮಾರಿಷಸ್ ಮತ್ತು ಸಿಂಗಾಪುರದಿಂದ ಬಂದಿವೆ. ಡಿಪಿಐಐಟಿ ದತ್ತಾಂಶದ ಪ್ರಕಾರ ಮಾರಿಷಸ್ ಮೂಲಕ ಶೇ. 25ರಷ್ಟು ಎಫ್ಡಿಐ ಭಾರತಕ್ಕೆ ಬಂದಿದೆ. ಸಿಂಗಾಪುರದಿಂದ ಶೇ. 25 ಬಂದಿದೆ. ಇದು ಬಿಟ್ಟರೆ ಹೆಚ್ಚಿನ ಎಫ್ಡಿಐ ಒಳಹರಿವು ಅಮೆರಿಕ (ಶೇ. 10), ನೆದರ್ಲ್ಯಾಂಡ್ಸ್ (ಶೇ. 7), ಜಪಾನ್ (ಶೇ. 6), ಯುಕೆ (ಶೇ. 5) ರಾಷ್ಟ್ರಗಳಿಂದ ಆಗಿವೆ. ಯುಎಇ, ಕೇಮನ್ ಐಲ್ಯಾಂಡ್ಡ್, ಜರ್ಮನಿ, ಸೈಪ್ರಸ್ ದೇಶಗಳಿಂದ ಶೇ. 2ರಷ್ಟು ನೇರ ಹೂಡಿಕೆಗಳು ಭಾರತಕ್ಕೆ ಬಂದಿವೆ.
ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ ಕಳೆದ 24 ವರ್ಷದಲ್ಲಿ ಭಾರತಕ್ಕೆ ಬಂದ 1,033 ಬಿಲಿಯನ್ ಡಾಲರ್ ಎಫ್ಡಿಐನಲ್ಲಿ ಅರ್ಧಕ್ಕಿಂತ ಹೆಚ್ಚು ಬಂಡವಾಳ ಕಳೆದ ಹತ್ತು ವರ್ಷದಲ್ಲಿ ಬಂದಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2014-24ರ ಅವಧಿಯಲ್ಲಿ ಭಾರತಕ್ಕೆ 667.4 ಬಿಲಿಯನ್ ಡಾಲರ್ ವಿದೇಶೀ ನೇರ ಬಂಡವಾಳ ಬಂದಿದೆ. ಅದರ ಹಿಂದಿನ ದಶಕಕ್ಕೆ (2004-14) ಹೋಲಿಸಿದರೆ ಎಫ್ಡಿಐ ಶೇ. 119ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ
ಕಳೆದ 10 ವರ್ಷದಲ್ಲಿ ಬಂದ ಈ ವಿದೇಶೀ ನೇರ ಬಂಡವಾಳವು 31 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹರಿದು ಹಂಚಿಕೆಯಾಗಿದೆ. 57 ಸೆಕ್ಟರ್ಗಳಲ್ಲಿ ಹೂಡಿಕೆಗಳು ಸಂದಾಯವಾಗಿವೆ. ಇದರಿಂದ ಭಾರತದಲ್ಲಿ ವಿಸ್ತೃತ ಬೆಳವಣಿಗೆಗೆ ಈ ಹೂಡಿಕೆಗಳು ನೀರೆರೆದು ಪೋಷಿಸಿದಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ