ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಲೇಬಲ್ ಮಾಡಿದ ವಸ್ತುಗಳ ಮೇಲೆ ಜುಲೈ 18ರಿಂದ ಜಾರಿಯಾಗಿರುವ ಶೇ 5ರ ಸರಕು ಮತ್ತು ಸೇವಾ ಸುಂಕಕ್ಕೆ (Goods and Service Tax – GST) ರಾಷ್ಟ್ರವ್ಯಾಪಿ ವರ್ತಕರು ಮತ್ತು ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಸ್ತುಗಳನ್ನು ಬಿಡಿಬಿಡಿಯಾಗಿ ಮಾರಾಟಮಾಡಿದರೆ ಅಂಥವುಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಹೇಳಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳಾದ ಅಕ್ಕಿ, ಹಾಲು, ಧಾನ್ಯ ಮೊದಲಾದವುಗಳು ಸದ್ಯ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಿವೆ. 14 ಟ್ವೀಟ್ಗಳ ಸರಣಿ ಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ಡ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಜಿಎಸ್‌ಟಿ ಕೌನ್ಸಿಲ್, ಜಿಎಸ್‌ಟಿ ವಿನಾಯಿತಿ ನೀಡಿರುವ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಈ ವಸ್ತುಗಳನ್ನು ಬಿಡಿಬಿಡಿಯಾಗಿ, ಮೊದಲೇ ಪ್ಯಾಕ್ ಮಾಡದೇ, ಮೊದಲೇ ಲೇಬಲ್ ಮಾಡಿಲ್ಲದಿದ್ದರೆ ಅವುಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಇದು ಒಟ್ಟಾರೆ ಜಿಎಸ್‌ಟಿ ಕೌನ್ಸಿಲ್ವ ನಿರ್ಧಾರವೇ ಹೊರತು ಒಬ್ಬ ಸದಸ್ಯರ ನಿರ್ಧಾರವಲ್ಲ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಬಗ್ಗೆ ಕೆಳಗಿನ 14 ಟ್ವೀಟ್ ಗಳಲ್ಲಿ ವಿವರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇತ್ತೀಚೆಗೆ ಜಿಎಸ್‌ಟಿ ಕೌನ್ಸಿಲ್ ನ 47 ನೇ ಸಭೆಯು ನಿರ್ದಿಷ್ಟ ಆಹಾರ ಪದಾರ್ಥಗಳಾದ ಕಾಳುಗಳು, ಧಾನ್ಯಗಳು, ಹಿಟ್ಟು ಮೊದಲಾದ ನಿರ್ದಿಷ್ಟ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆಯನ್ನು ಮರು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿದ್ದು ಅವುಗಳನ್ನು ಪ್ರಚಾರ ಮಾಡಲಾಗಿದೆ ಎಂದ ನಿರ್ಮಲಾ, ಇಲ್ಲಿದೆ ಸತ್ಯಾಂಶ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
It must also be noted that items specified below in the list, when sold loose, and not pre-packed or pre-labeled, will not attract any GST. (10/14) pic.twitter.com/NM69RbU13I
— Nirmala Sitharaman (@nsitharaman) July 19, 2022
ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಾ? ಅಲ್ಲ. ಜಿಎಸ್‌ಟಿ ಬರುವುದಕ್ಕಿಂತ ಮುನ್ನವೇ ರಾಜ್ಯಗಳು ಆಹಾರ ಧಾನ್ಯಗಳಿಂದ ಇಂತಿಷ್ಟು ಆದಾಯವನ್ನು ಸಂಗ್ರಹಿಸುತ್ತಿತ್ತು. ಖರೀದಿ ತೆರಿಗೆ ಮೂಲಕ ಪಂಜಾಬ್ ಆಹಾರ ಧಾನ್ಯಗಳಿಂದ 2,000 ಕೋಟಿ ಸಂಗ್ರಹಿಸಿತ್ತು. ಉತ್ತರ ಪ್ರದೇಶ 700 ಕೋಟಿ ಸಂಗ್ರಹಿಸಿತ್ತು ಎಂದಿದ್ದಾರೆ ನಿರ್ಮಲಾ.
ಜಿಎಸ್‌ಟಿ ಜಾರಿಗೆ ಬಂದಾಗ ಶೇ 5ರಷ್ಟು ಜಿಎಸ್‌ಟಿ ಬ್ರಾಂಡೆಡ್ ಕಾಳು, ಧಾನ್ಯ ಮತ್ತು ಹಿಟ್ಟಿನ ಮೇಲೆ ಅನ್ವಯಿಸಲಾಯಿತು. ಆಮೇಲೆ ಇದನ್ನು ತಿದ್ದುಪಡಿ ಮಾಡಿದ್ದು, ನೋಂದಣಿ ಮಾಡಿದ ಬ್ರಾಂಡ್ ಅಡಿಯಲ್ಲಿ ಅಥವಾ ಸರಬರಾಜುದಾರರಿಂದ ಜಾರಿಗೊಳಿಸಬಹುದಾದ ಹಕ್ಕನ್ನು ಬಿಟ್ಟುಕೊಡದ ಬ್ರ್ಯಾಂಡ್ಗಳ ಅಡಿಯಲ್ಲಿ ಮಾರಾಟವಾಗುವ ವಸ್ತುಗಳಿಗೆ ಮಾತ್ರ ತೆರಿಗೆ ಅನ್ವಯಿಸಲಾಯಿತು. ಆದಾಗ್ಯೂ, ಇದರ ದುರ್ಬಳಕೆಯಾಗುತ್ತಿದೆ ಎಂದು ಪ್ರಖ್ಯಾತ ಉತ್ಪಾದಕರು ಮತ್ತು ಬ್ರಾಂಡ್ ಮಾಲೀಕರು ಗಮನಿಸಿದ್ದು, ಕ್ರಮೇಣ ಈ ವಸ್ತುಗಳಿಂದ ಬರುವ ಜಿಎಸ್‌ಟಿ ಆದಾಯ ಕುಸಿಯಿತು.
ಬ್ರಾಂಡೆಂಡ್ ಸರಕುಗಳ ಮೇಲೆ ತೆರಿಗೆ ಪಾವತಿ ಮಾಡುತ್ತಿರುವ ಸರಬರಾಜುದಾರರು ಮತ್ತು ಇಂಡಸ್ಟ್ರಿ ಅಸೋಸಿಯೇಷನ್ ಇದನ್ನು ಮತ್ತೆ ಕಳುಹಿಸಿತು. ಈ ರೀತಿಯ ದುರ್ಬಳಕೆ ತಡೆಯುವುದಕ್ಕಾಗಿ ಎಲ್ಲ ಪ್ಯಾಕೇಜ್ಡ್ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಬೇಕು ಎಂದು ಅವರು ಸರ್ಕಾರಕ್ಕೆ ಪತ್ರ ಬರೆದರು. ಈ ರೀತಿ ತೆರಿಗೆ ವಂಚನೆ ರಾಜ್ಯಗಳ ಗಮನಕ್ಕೂ ಬಂದಿತ್ತು. ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಮತ್ತು ಗುಜರಾತಿನ ಅಧಿಕಾರಿಗಳು ಇರುವ ಫಿಟ್ಮೆಂಟ್ ಸಮಿತಿಯು ಹಲವಾರು ಸಭೆ ನಡೆಸಿ ಈ ಸಮಸ್ಯೆಯನ್ನು ಪರಿಶೀಲಿಸಿದ್ದು, ದುರ್ಬಳಕೆ ತಡೆಯುವುದಕ್ಕಾಗಿ ವಿಧಾನಗಳನ್ನು ಬದಲಿಸಬೇಕೆಂದು ಶಿಫಾರಸು ಮಾಡಿತು.
ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕುಗಳನ್ನ ಸರಬರಾಜು ಮಾಡಿದಾಗ ಜಿಎಸ್‌ಟಿ ಅನ್ವಯವಾಗುತ್ತದೆ.
ಈ ಕೆಳಗೆ ನೀಡಲಾದ ಪಟ್ಟಿಯಲ್ಲಿರುವ ನಿರ್ದಿಷ್ಟ ವಸ್ತುಗಳನ್ನು ಬಿಡಿಯಾಗಿ ಮಾರಿದಾಗ, ಮೊದಲೇ ಪ್ಯಾಕ್ ಮಾಡಿಲ್ಲದೆ ಅಥವಾ ಮೊದಲೇ ಲೇಬಲ್ ಮಾಡದೇ ಇದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ
ಬಿಡಿಯಾಗಿ ಮಾರಿದಾಗ ಜಿಎಸ್‌ಟಿ ಅನ್ವಯವಾಗದೇ ಇರುವ ವಸ್ತುಗಳ ಪಟ್ಟಿ
ದ್ವಿದಳ ಧಾನ್ಯ/ ಬೇಳೆ
ಗೋಧಿ
ಸಣ್ಣ ಗೋಧಿ
ಓಟ್ಸ್
ಮೈದಾ
ಅಕ್ಕಿ
ಗೋಧಿ ಹಿಟ್ಟು
ಸೂಜಿ/ ರವಾ
ಕಡಲೆ ಹಿಟ್ಟು
ಮಂಡಕ್ಕಿ
ಮೊಸರು/ ಲಸ್ಸಿ
ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಇದು
ದಿನಬಳಕೆಯ ವಸ್ತುಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸುವುದು ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಎಂದು ವಿತ್ತಸಚಿವೆ ಒತ್ತಿ ಹೇಳಿದ್ದಾರೆ. ಎಲ್ಲ ರಾಜ್ಯಗಳು, ಬಿಜೆಪಿ ಸರ್ಕಾರವಿಲ್ಲದೇ ಇರುವ ರಾಜ್ಯಗಳು (ಪಂಜಾಬ್, ರಾಜಸ್ಥಾನ್, ಛತ್ತೀಸಗಡ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ) ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದವು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Published On - 5:20 pm, Tue, 19 July 22