GST Compensation Cess: ಜಿಎಸ್​ಟಿ ಪರಿಹಾರ ಸೆಸ್ 2026ರ ತನಕ ವಿಸ್ತರಣೆ ಮಾಡಿದ ಹಣಕಾಸು ಸಚಿವಾಲಯ

| Updated By: Srinivas Mata

Updated on: Jun 25, 2022 | 5:25 PM

ಕೇಂದ್ರ ಸರ್ಕಾರದಿಂದ ನೀಡುವ ಜಿಎಸ್​ಟಿ ಪರಿಹಾರ ಸೆಸ್​ ಅನ್ನು 2026ನೇ ಇಸವಿ ತನಕ ವಿಸ್ತರಣೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

GST Compensation Cess: ಜಿಎಸ್​ಟಿ ಪರಿಹಾರ ಸೆಸ್ 2026ರ ತನಕ ವಿಸ್ತರಣೆ ಮಾಡಿದ ಹಣಕಾಸು ಸಚಿವಾಲಯ
ಸಾಂದರ್ಭಿಕ ಚಿತ್ರ
Follow us on

ಜಿಎಸ್​ಟಿ (GST) ಪರಿಹಾರ ಸೆಸ್ ಅನ್ನು 2026ನೇ ಇಸವಿ ತನಕ ಸುಮಾರು 4 ವರ್ಷಗಳವರೆಗೆ ವಿಸ್ತರಿಸಲು ಹಣಕಾಸು ಸಚಿವಾಲಯವು ಜೂನ್ 25ರಂದು ಸೂಚನೆ ನೀಡಿದೆ. “ಪರಿಹಾರ ಸೆಸ್ ಅನ್ನು ಜುಲೈ 1, 2022ರಿಂದ ಮಾರ್ಚ್ 31, 2026 ರವರೆಗೆ ವಿಧಿಸಲಾಗುವುದು,” ಎಂದು ಹಣಕಾಸು ಸಚಿವಾಲಯವು ಸೂಚಿಸಿದೆ. ಸರಕು ಮತ್ತು ಸೇವಾ ತೆರಿಗೆ (ಲೆವಿ ಮತ್ತು ಸೆಸ್ ಸಂಗ್ರಹದ ಅವಧಿ) ನಿಯಮಗಳು, 2022ರ ಪ್ರಕಾರ ಈ ವಿಚಾರ ತಿಳಿಸಿದೆ. ಸೆಸ್ ವಿಧಿಸುವುದು ಜೂನ್ 30ರಂದು ಕೊನೆಗೊಳ್ಳಬೇಕಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಸಮಿತಿ ಮತ್ತು ರಾಜ್ಯ ಹಣಕಾಸು ಸಚಿವನ್ನು ಒಳಗೊಂಡಿದ್ದ ಸಭೆಯಲ್ಲಿ, ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಅವರ ಆದಾಯ ಸಂಗ್ರಹದಲ್ಲಿ ಕೊರತೆ ಆಗಿದ್ದರಿಂದ ಪಡೆದ ಸಾಲವನ್ನು ಮರುಪಾವತಿಸಲು ಮಾರ್ಚ್ 2026ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಏಕರೂಪದ ರಾಷ್ಟ್ರೀಯ ತೆರಿಗೆ ಜಿಎಸ್‌ಟಿಯಲ್ಲಿ ವ್ಯಾಟ್‌ನಂತಹ ತೆರಿಗೆಗಳನ್ನು ಒಳಗೊಳ್ಳುವುದರಿಂದ ಉಂಟಾಗುವ ಆದಾಯದ ಕೊರತೆಗಾಗಿ ರಾಜ್ಯಗಳಿಗೆ ಪರಿಹಾರವನ್ನು ಪಾವತಿಸುವ ಕ್ರಮ ಜೂನ್ 2022ರಲ್ಲಿ ಕೊನೆಗೊಳ್ಳುತ್ತದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಖನೌದಲ್ಲಿ ನಡೆದ 45ನೇ ಜಿಎಸ್‌ಟಿ ಸಮಿತಿ ಸಭೆ ನಂತರ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ರಾಜ್ಯಗಳಿಗೆ ಜಿಎಸ್​ಟಿ ಆದಾಯ ನಷ್ಟವನ್ನು ಸರಿದೂಗಿಸುವುದಕ್ಕೆ 2020-21 ಮತ್ತು 2021-22ರಲ್ಲಿ ಮಾಡಿದ ಸಾಲವನ್ನು ಮರುಪಾವತಿಸಲು ಐಷಾರಾಮಿ ಮತ್ತು ಡಿಮೆರಿಟ್ ಸರಕುಗಳ ಮೇಲೆ ವಿಧಿಸಲಾದ ಪರಿಹಾರ ಸೆಸ್ ಅನ್ನು ಮಾರ್ಚ್ 2026ರ ವರೆಗೆ ಸಂಗ್ರಹಿಸಲಾಗುತ್ತದೆ.

2023-24ರಿಂದ ಅಸಲು ಮರುಪಾವತಿ ಶುರು

ಸೆಸ್ ಸಂಗ್ರಹದಲ್ಲಿ ಕೊರತೆಯಾಗುವ ರಾಜ್ಯಗಳ ಸಂಪನ್ಮೂಲ ಕೊರತೆಯನ್ನು ಪೂರೈಸಲು ಕೇಂದ್ರವು 2020-21ರಲ್ಲಿ ರೂ. 1.1 ಲಕ್ಷ ಕೋಟಿ ಮತ್ತು 2021-22ರಲ್ಲಿ ರೂ. 1.59 ಲಕ್ಷ ಕೋಟಿ ಸಾಲವನ್ನು ಮತ್ತು ಒಂದು ಭಾಗವನ್ನು ಪೂರೈಸಲು ಒಂದರ ಹಿಂದೆ ಒಂದರಂತೆ ಸಾಲವಾಗಿ ಬಿಡುಗಡೆ ಮಾಡಿದೆ. ಕೇಂದ್ರವು 2021-22ರಲ್ಲಿ ಸಾಲಕ್ಕೆ ರೂ. 7,500 ಕೋಟಿಯನ್ನು ಬಡ್ಡಿ ವೆಚ್ಚವಾಗಿ ಮರುಪಾವತಿಸಿದ್ದು, ಈ ಹಣಕಾಸು ವರ್ಷದಲ್ಲಿ ರೂ. 14,000 ಕೋಟಿ ಪಾವತಿಸಬೇಕಿದೆ. 2023-24ರಿಂದ ಅಸಲು ಮೊತ್ತದ ಮರುಪಾವತಿ ಪ್ರಾರಂಭವಾಗುತ್ತದೆ. ಅದು ಮಾರ್ಚ್ 2026ರ ವರೆಗೆ ಮುಂದುವರಿಯುತ್ತದೆ.

ಜುಲೈ 1, 2017ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಪರಿಚಯಿಸಲಾಯಿತು. ಮತ್ತು ಐದು ವರ್ಷಗಳ ಅವಧಿಗೆ ಜಿಎಸ್‌ಟಿ ಅನುಷ್ಠಾನದ ಖಾತೆಯಿಂದ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರವನ್ನು ನೀಡುವುದಾಗಿ ರಾಜ್ಯಗಳಿಗೆ ಭರವಸೆ ನೀಡಲಾಯಿತು. ರಾಜ್ಯಗಳ ಸಂರಕ್ಷಿತ ಆದಾಯವು ಶೇಕಡಾ 14ರಷ್ಟು ಸಂಯೋಜಿತ ಬೆಳವಣಿಗೆ ದರದಲ್ಲಿ ಬೆಳೆಯುತ್ತಿದೆಯಾದರೂ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗಲಿಲ್ಲ. ಮತ್ತು ಕೊವಿಡ್-19 ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ಮಧ್ಯದ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಮೇ 31, 2022ರವರೆಗೆ ರಾಜ್ಯಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಪರಿಹಾರದ ಸಂಪೂರ್ಣ ಮೊತ್ತವನ್ನು ಕೇಂದ್ರವು ಬಿಡುಗಡೆ ಮಾಡಿದೆ.

ಜಿಡಿಪಿ, ಉದ್ಯೋಗದ ಮೇಲೆ ಪರಿಣಾಮ

ಎಎಂಆರ್‌ಜಿ ಮತ್ತು ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳುವಂತೆ, ಪರಿಹಾರದ ಸೆಸ್‌ನ ವಿಸ್ತರಣೆಯೊಂದಿಗೆ ತಂಬಾಕು, ಸಿಗರೇಟ್, ಹುಕ್ಕಾ, ಗಾಳಿ ತುಂಬಿದ ನೀರು, ಅತ್ಯಾಧುನಿಕ ಮೋಟಾರ್‌ಸೈಕಲ್‌ಗಳು, ವಿಮಾನಗಳು, ವಿಹಾರ ನೌಕೆ ಮತ್ತು ಮೋಟಾರು ವಾಹನಗಳಂತಹ ಉತ್ಪನ್ನಗಳು ಹೆಚ್ಚಿನ ತೆರಿಗೆ ದರಗಳೊಂದಿಗೆ ಬರುತ್ತವೆ ಎಂದು ಹೇಳಿದ್ದಾರೆ. ಡೆಲಾಯ್ಟ್ ಇಂಡಿಯಾ ಪಾಲುದಾರ ಎಂ ಎಸ್ ಮಣಿ ಮಾತನಾಡಿ, “ಪರಿಹಾರ ಸೆಸ್‌ನ ವಿಧಿಸುವ ಅವಧಿ ವಿಸ್ತರಣೆಯು ನಿರೀಕ್ಷಿತವಾಗಿದ್ದರೂ ಪ್ರಭಾವಿತ ವ್ಯವಹಾರಗಳ ಮೇಲೆ ಹೊರೆಯನ್ನು ಮುಂದುವರಿಸುತ್ತದೆ. ವಿಶೇಷವಾಗಿ ಆಟೋಮೋಟಿವ್‌ನಂತಹ ವಲಯಗಳು, ಇದು ಹೊಂದಿರುವ ವಲಯಗಳಲ್ಲಿ ಒಂದಾಗಿರುವುದರಿಂದ ಪ್ರೋತ್ಸಾಹಿಸಬೇಕಾಗಿದೆ. ಇಲ್ಲದಿದ್ದರೆ ಅದರ ಗುಣಕದಲ್ಲಿ ಜಿಡಿಪಿ ಮತ್ತು ಉದ್ಯೋಗದ ಮೇಲೆ ಪರಿಣಾಮ ಆಗುತ್ತದೆ.”

ಭಾರತದಲ್ಲಿ KPMG ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್ ಜೈನ್, “ರಾಜ್ಯಗಳಿಗೆ 5 ವರ್ಷಗಳ ನಂತರ ಪರಿಹಾರವನ್ನು ನೀಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯವು ಮುಂಬರುವ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಅಂತಿಮವಾಗಿ ನಿರ್ಧರಿಸಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: GST Compensation: ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ 86,912 ಕೋಟಿ ರೂಪಾಯಿ ಜಿಎಸ್​ಟಿ ಪರಿಹಾರ ವಿತರಣೆ

Published On - 5:25 pm, Sat, 25 June 22