ನವದೆಹಲಿ: ದೇಶದಲ್ಲಿ ಉದ್ಯೋಗದ (Employment) ಪ್ರಮಾಣ ಹೆಚ್ಚುತ್ತಿದ್ದು ವೇಗ ಪಡೆದುಕೊಳ್ಳುತ್ತಿದೆ ಎಂದು ಹಣಕಾಸು (Finance Ministry) ಸಚಿವಾಲಯದ ‘ಅಕ್ಟೋಬರ್ ತಿಂಗಳ ಮಾಸಿಕ ಆರ್ಥಿಕ ಪರಾಮರ್ಶೆ’ ವರದಿಯಲ್ಲಿ ಹೇಳಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನೇಮಕಾತಿಯಲ್ಲಿ ಹೆಚ್ಚಳ ಕಾಣಬಹುದು ಎಂದು ನಿರೀಕ್ಸಿಷಲಾಗಿದೆ. ಕೋವಿಡ್ ಸಾಂಕ್ರಾಮಿಕದ ನಂತರ ತೊಂದರೆಗೆ ಒಳಗಾಗಿದ್ದ ಅನೇಕ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ಆರ್ಥಿಕ ಚಟುವಟಿಕೆಗಳು (Economic Activities) ವೇಗ ಪಡೆದುಕೊಳ್ಳುತ್ತಿವೆ. ಇಪಿಎಫ್ಒ (EPFO) ನೋಂದಣಿಯಲ್ಲಿ ಕಳೆದ ಒಂದು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ನರೇಗಾ ಅಡಿಯಲ್ಲಿ ಕೆಲಸಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು ಸುಧಾರಿಸಿವೆ. ಇದು ಗ್ರಾಮೀಣ ಆರ್ಥಿಕತೆಯ ಚೇತರಿಕೆಯ ಮುನ್ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ನೇಮಕಾತಿಯಲ್ಲಿ ಸತತ ಎಂಟನೇ ತಿಂಗಳು ಚೇತರಿಕೆ
ಉದ್ಯೋಗಾವಕಾಶಗಳ ವಿಚಾರದಲ್ಲಿ ಅಕ್ಟೋಬರ್ನಲ್ಲಿ ಚೇತರಿಕೆ ಕಾಣಿಸಿದೆ. ಇದರೊಂದಿಗೆ ಸತತ ಎಂಟನೇ ತಿಂಗಳು ಬೆಳವಣಿಗೆ ದಾಖಲಾದಂತಾಗಿದೆ. ದೇಶದ ಉತ್ಪಾದನಾ ವಲಯಗಳಲ್ಲಿ ಸತತ ಎಂಟನೇ ತಿಂಗಳು ನೇಮಕಾತಿಯಲ್ಲಿ ಚೆತರಿಕೆ ಕಂಡುಬಂದಿರುವುದು ಉತ್ಪಾದನೆ ಹೆಚ್ಚಳದ ಸುಳಿವು ನೀಡಿದೆ. ಪರಿಣಾಮವಾಗಿ ಉತ್ಪಾದನೆ, ಮಾರಾಟ ಪ್ರಮಾಣ ಹೆಚ್ಚಲಿದೆ. ಸೆಪ್ಟೆಂಬರ್ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉದ್ಯೋಗದಲ್ಲಿ ಶೇಕಡಾ 46ರಷ್ಟು ಹೆಚ್ಚಾಗಿರುವುದು ಇಪಿಎಫ್ಒ ದಾಖಲೆಗಳಿಂದ ತಿಳಿದುಬಂದಿದೆ ಎಂದು ಸಚಿವಾಲಯ ಹೇಳಿದೆ.
ಐಟಿ, ಶಿಕ್ಷಣ ಕ್ಷೇತ್ರದ್ದೇ ಸಿಂಹಪಾಲು
ಜಾಗತಿಕ ಮಟ್ಟದಲ್ಲಿ ಟೆಕ್ ಕ್ಷೇತ್ರದ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಉದ್ಯೋಗಾವಕಾಶ ಚೇತರಿಕೆಯಾಗುತ್ತಿದೆ. ನೇಮಕಾತಿ ವಿಚಾರದಲ್ಲಿ ಐಟಿ ಮತ್ತು ಶಿಕ್ಷಣ ಕ್ಷೇತ್ರಗಳು ಮುನ್ನಡೆ ಕಾಯ್ದುಕೊಂಡಿವೆ. ಇದು ಉದ್ಯೋಗಾವಕಾಶದಲ್ಲಿ ಇನ್ನಷ್ಟು ಹೆಚ್ಚಳ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.
ಕುಸಿದ ನಿರುದ್ಯೋಗ ಪ್ರಮಾಣ; ಸಮೀಕ್ಷಾ ವರದಿ
ದೇಶದ ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ನಡೆಸಿರುವ 16ನೇ ‘ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ’ ವರದಿಯಿಂದ ತಿಳಿದುಬಂದಿದೆ. ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.2ಕ್ಕೆ ಇಳಿಕೆಯಾಗಿರುವುದನ್ನು ಸಮೀಕ್ಷಾ ವರದಿ ಬಹಿರಂಗಪಡಿಸಿದೆ. ಕಳೆದ ವರ್ಷ ಇದು ಶೇಕಡಾ 9.8ರಷ್ಟಿತ್ತು.
ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಮಧ್ಯಮ ವೇಗದಲ್ಲಿ ಬೆಳವಣಿಗೆ ಹೊಂದಲಿದೆ. ಇದಕ್ಕೆ ಸ್ಥೂಲ ಆರ್ಥಿಕತೆಯಲ್ಲಿನ ಸ್ಥಿರತೆ ಪೂರಕವಾಗಲಿದೆ. ದೇಶದ ಹಣದುಬ್ಬರ ಪ್ರಮಾಣವೂ ತಗ್ಗಲಿದೆ. ಜಾಗತಿಕವಾಗಿ ಹಣಕಾಸು ಪರಿಸ್ಥಿತಿ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಸ್ಥೂಲ ಆರ್ಥಿಕತೆಯ ಸ್ಥಿರತೆ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜ ನೀಡಲಿದೆ ಎಂದೂ ಹಣಕಾಸು ಸಚಿವಾಲಯ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ