ನವದೆಹಲಿ, ನವೆಂಬರ್ 4: ಹಲವು ಪ್ರಮುಖ ಎಫ್ಎಂಸಿಜಿ ಕಂಪನಿಗಳು ತಮ್ಮ ಕೆಲ ಉತ್ಪನ್ನಗಳ ಬೆಲೆ ಏರಿಕೆ ಮಾಡಲು ಸಜ್ಜಾಗಿವೆ. ಅಧಿಕ ಉತ್ಪಾದನಾ ವೆಚ್ಚ, ಅಧಿಕ ಕಚ್ಛಾ ವಸ್ತು ಬೆಲೆ, ಕಡಿಮೆ ಅನುಭೋಗ ಮೊದಲಾದ ಕಾರಣದಿಂದಾಗಿ ಎಫ್ಎಂಸಿಜಿ ಸಂಸ್ಥೆಗಳಿಗೆ ಲಾಭದ ಮಾರ್ಜಿನ್ ಕಡಿಮೆ ಆಗಿದೆ. ತಾಳೆ ಎಣ್ಣಿ, ಕಾಫಿ ಬೀಜ, ಕೊಕೋವಾ ಇತ್ಯಾದಿ ಕೆಲ ಕಚ್ಛಾ ವಸ್ತುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆ ಆಗಿವೆ. ಇದರಿಂದ ಸಹಜವಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ, ಹಿಂದೂಸ್ತಾನ್ ಯುನಿಲಿವರ್ (ಎಚ್ಯುಎಲ್), ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್, ಐಟಿಸಿ ಇತ್ಯಾದಿ ಕೆಲ ಪ್ರಮುಖ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿರುವುದು ತಿಳಿದುಬಂದಿದೆ.
ಎಫ್ಎಂಸಿಜಿ ಕಂಪನಿಗಳ ಬಹುತೇಕ ಆದಾಯವು (ಶೇ. 65) ನಗರ ಭಾಗಗಳಿಂದ ಸಿಗುತ್ತದೆ. ಆದರೆ, ಇತ್ತೀಚಿನ ಕೆಲ ವಾರಗಳಲ್ಲಿ ನಗರಗಳಲ್ಲಿ ದಿನಸಿ ವಸ್ತುಗಳ ಮಾರಾಟ ಕಡಿಮೆ ಆಗಿದೆ ಎಂದು ಪ್ರಮುಖ ಎಫ್ಎಂಸಿಜಿ ಕಂಪನಿಗಳು ಹೇಳುತ್ತಿವೆ.
ಇದನ್ನೂ ಓದಿ: ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ
ಲಾಭ ಕುಂದುತ್ತಿರುವುದನ್ನು ನಿಗ್ರಹಿಸಲು ಎಫ್ಎಂಸಿಜಿ ಕಂಪನಿಗಳು ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ವೆಚ್ಚಗಳನ್ನು ಕಡಿಮೆ ಮಾಡಲು ಯೋಜಿಸಿವೆ. ಹಾಗೆಯೇ, ಕೆಲ ಉತ್ಪನ್ನಗಳ ಬೆಲೆ ಏರಿಕೆ ಮಾಡಲು ಮುಂದಾಗಬಹುದು ಎಂದು ಹೇಳಲಾಗುತ್ತಿದೆ.
ಆಹಾರವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜನಸಾಮಾನ್ಯರ ದಿನಸಿ ಖರೀದಿಯ ಮೇಲೆ ಪರಿಣಾಮ ಬೀರುತ್ತಿದೆ. ಇದು ನಾವಂದುಕೊಂಡಿದ್ದಕ್ಕಿಂತಲೂ ಹೆಚ್ಚು ಬಾಧೆ ತರುತ್ತಿದೆ ಎಂದು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ನ ಮುಖ್ಯಸ್ಥ ಸುನೀಲ್ ಡಿಸೋಜ ಹೇಳುತ್ತಾರೆ.
ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ಹಿಂದೂಸ್ತಾನ್ ಯೂನಿಲಿವರ್ ಲಿ, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ ಲಿ, ಮಾರಿಕೋ, ಐಟಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಡಾಬರ್ ಇಂಡಿಯಾ, ನೆಸ್ಲೆ, ಬ್ರಿಟಾನಿಯಾ ಇಂಡಸ್ಟ್ರೀಸ್, ವರುಣ್ ಬೆವರೇಜಸ್ ಮೊದಲಾದವು ಭಾರತದ ಪ್ರಮುಖ ಎಫ್ಎಂಸಿಜಿ ಕಂಪನಿಗಳಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ