Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ ಎರಡು ವಾರ ಇಳಿಕೆ; 616 ಬಿಲಿಯನ್ ಡಾಲರ್​ಗೆ ಕುಸಿದ ಸಂಪತ್ತು

|

Updated on: Feb 25, 2024 | 9:30 AM

ಭಾರತದ ಫಾರೆಕ್ಸ್ ರಿಸರ್ವ್ಸ್ ಫೆಬ್ರುವರಿ 16ಕ್ಕೆ ಅಂತ್ಯಗೊಂಡ ವಾರದಲ್ಲಿ 1.13 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿದೆ. ಸತತ ಎರಡು ವಾರ ಇಳಿಕೆಯೊಂದಿಗೆ ಭಾರತದ ವಿದೇಶ ವಿನಿಮಯ ಮೀಸಲು ನಿಧಿ 616.10 ಬಿಲಿಯನ್ ಡಾಲರ್ ಮಟ್ಟ ತಲುಪಿದೆ. ಜಾಗತಿಕವಾಗಿ ಭಾರತದ ಫಾರೆಕ್ಸ್ ನಿಧಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚಿದೆ.

Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ ಎರಡು ವಾರ ಇಳಿಕೆ; 616 ಬಿಲಿಯನ್ ಡಾಲರ್​ಗೆ ಕುಸಿದ ಸಂಪತ್ತು
ಫಾರೆಕ್ಸ್ ಮೀಸಲು ನಿಧಿ
Follow us on

ನವದೆಹಲಿ, ಫೆಬ್ರುವರಿ 23: ಭಾರತದ ವಿದೇಶೀ ವಿನಿಮಯ ಮೀಸಲು ಸಂಪತ್ತು (Foreign Exchange Reserves) ಸತತ ಎರಡನೇ ವಾರ ಕುಸಿದಿದೆ. ಫೆಬ್ರುವರಿ 16ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 616.10 ಬಿಲಿಯನ್ ಡಾಲರ್ ಇದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಮೀಸಲು ನಿಧಿ 1.13 ಬಿಲಿಯನ್ ಡಾಲರ್​ನಷ್ಟು ತಗ್ಗಿದೆ. ಆದರೆ, ಹಿಂದಿನ ವಾರದಲ್ಲಿ ಹೆಚ್ಚು ಕುಸಿತವಾಗಿತ್ತು. ಫೆಬ್ರುವರಿ 9ರಂದು ಅಂತ್ಯಗೊಂಡ ವಾರದಲ್ಲಿ 5.24 ಬಿಲಿಯನ್ ಡಾಲರ್​ನಷ್ಟು ಇಳಿಕೆ ಆಗಿತ್ತು. ಡಿಸೆಂಬರ್ 15ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 615.97 ಬಿಲಿಯನ್ ಡಾಲರ್ ಇತ್ತು. ಅದಾದ ಬಳಿಕ ಕನಿಷ್ಠ ಮಟ್ಟವೆಂದರೆ ಈಗಲೇ ಎನ್ನಲಾಗಿದೆ.

ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ 740 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಗೋಲ್ಡ್ ರಿಸರ್ವ್ಸ್ 362 ಮಿಲಿಯನ್ ಡಾಲರ್ ತಗ್ಗಿದೆ. ಎಸ್​ಡಿಆರ್ 28 ಮಿಲಿಯನ್ ಡಾಲರ್, ಹಾಗೂ ಐಎಂಎಫ್​ನೊಂದಿಗಿನ ಮೀಸಲು ಸಂಪತ್ತು 1 ಮಿಲಿಯನ್ ಡಾಲರ್ ಕಡಿಮೆ ಆಗಿರುವುದು ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ಗೊತ್ತಾಗಿದೆ.

ಫೆ. 16ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ

  • ಒಟ್ಟು ಫಾರೆಕ್ಸ್ ನಿಧಿ: 616.10 ಬಿಲಿಯನ್ ಡಾಲರ್
  • ವಿದೇಶೀ ಕರೆನ್ಸಿ ಆಸ್ತಿ: 545.78 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 47.38 ಬಿಲಿಯನ್ ಡಾಲರ್
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.11 ಬಿಲಿಯನ್ ಡಾಲರ್
  • ಐಎಂಎಫ್​ನೊಂದಿಗಿರುವ ಮೀಸಲು ನಿಧಿ: 4.83 ಬಿಲಿಯನ್ ಡಾಲರ್

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀಆರ್ಡರ್ಡ್ ಫೂಡ್ ಡೆಲಿವರಿ

ಭಾರತದ ಫಾರೆಕ್ಸ್ ಮೀಸಲು ನಿಧಿ 2021ರ ಸೆಪ್ಟೆಂಬರ್ ತಿಂಗಳಲ್ಲಿ 645 ಬಿಲಿಯನ್ ಡಾಲರ್​ನಷ್ಟಿತ್ತು. ಅದು ಸದ್ಯ ಭಾರತದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಅದಾದ ಬಳಿಕ ರುಪಾಯಿ ಮೌಲ್ಯ ಕುಸಿತ ತಡೆಯಲು ಸೇರಿದಂತೆ ವಿವಿಧ ಕಾರಣಗಳಿಗೆ ಫಾರೆಕ್ಸ್ ಸಂಪತ್ತು ಕಡಿಮೆ ಆಗುತ್ತಾ ಬಂದಿದೆ. ಕಳೆದ ಕೆಲ ತಿಂಗಳಿಂದ ಮತ್ತೆ ಏರಿದೆ.

ಜಾಗತಿಕವಾಗಿ ಫಾರೆಕ್ಸ್ ಮೀಸಲು ನಿಧಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ನಂತರದ ಸ್ಥಾನ ಭಾರತದ್ದಾಗಿದೆ. ಭಾರತದ ಫಾರೆಕ್ಸ್ ಮೀಸಲು ಸಂಪತ್ತು ಪಾಕಿಸ್ತಾನದ ಜಿಡಿಪಿಗಿಂತಲೇ ಎರಡು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಪಾಕಿಸ್ತಾನದ ಜಿಡಿಪಿ 339 ಬಿಲಿಯನ್ ಡಾಲರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ