ಭಾರತದ ಆರ್ಥಿಕತೆ ಈ ದಶಕ ಮುಗಿಯುವುದರೊಳಗೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಏರುವುದು ನಿಶ್ಚಿತ. ಇನ್ನು ಕೆಲ ದಶಕಗಳ ಬಳಿಕ ಭಾರತ ಆರ್ಥಿಕವಾಗಿ ಅಮೆರಿಕವನ್ನೂ ಮೀರಿಸಿ ಬೆಳೆಯಬಹುದು ಎಂದು ಬಹುತೇಕ ಎಲ್ಲಾ ತಜ್ಞರೂ ಅಂದಾಜು ಮಾಡಿದ್ದಾರೆ. ಆದರೆ, 2100ರಲ್ಲಿ ವಿಶ್ವದ ಆರ್ಥಿಕತೆ ಹೇಗಿರುತ್ತದೆ? ಒಂದು ದೇಶದ ಮುಂದಿನ ಕೆಲ ವರ್ಷಗಳ ಆರ್ಥಿಕತೆಯ ಬೆಳವಣಿಗೆ ಯಾವ ವೇಗದಲ್ಲಿ ಸಾಗುತ್ತದೆ ಎಂದು ಅಂದಾಜಿಸುವುದೇ ಕಷ್ಟ, ಹಾಗಿರುವಾಗ 75 ವರ್ಷದ ನಂತರ ಸ್ಥಿತಿ ಬಗ್ಗೆ ಕಲ್ಪನೆ ಬಹಳ ಕ್ಲಿಷ್ಟಕರ. ಜನಸಂಖ್ಯೆ, ಮಾನವಸಂಪನ್ಮೂಲ, ಜಾಗತಿಕ ರಾಜಕೀಯ ವಿದ್ಯಮಾನ, ಯುದ್ಧ, ನೈಸರ್ಗಿಕ ವಿಕೋಪ, ರಾಜಕೀಯ ಸ್ಥಿರತೆ, ಆರ್ಥಿಕ ನೀತಿ ಇತ್ಯಾದಿ ಹಲವಾರು ಅಂಶಗಳು ಒಂದು ದೇಶದ ಆರ್ಥಿಕ ಓಟದ ಮೇಲೆ ಪರಿಣಾಮ ಬೀರುತ್ತವೆ. ಫ್ಯಾಥಮ್ ಕನ್ಸಲ್ಟಿಂಗ್ (Fathom Consulting) ಎಂಬ ಸಂಸ್ಥೆ ಇಂಥದ್ದೊಂದು ಸಾಹಸ ತೋರಿದ್ದು, 2,100ರವರೆಗೆ ವಿಶ್ವದ ಪ್ರಮುಖ ಆರ್ಥಿಕತೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಗ್ರಾಫಿಕ್ಸ್ ರೂಪದಲ್ಲಿ ತೋರಿಸಿದೆ. ಇದರ ಪ್ರಕಾರ ಚೀನಾ 2,100ರಲ್ಲಿ ವಿಶ್ವದ ನಂಬರ್ ಆರ್ಥಿಕತೆಯ ದೇಶವಾಗಿರಲಿದೆ. ಭಾರತ, ಅಮೆರಿಕ, ರಷ್ಯಾ ನಂತರದ ಸ್ಥಾನದಲ್ಲಿರಲಿವೆ. ಟರ್ಕಿ ಗಮನಾರ್ಹವಾಗಿ ಬೆಳೆದು ಟಾಪ್-5 ಪಟ್ಟಿಗೆ ಸೇರಲಿದೆ. ಪಿಪಿಪಿ ಆಧಾರಿತ ಜಿಡಿಪಿ ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ಇರಲಿದೆ ಎಂಬುದನ್ನು ಈ ಸಂಸ್ಥೆ ಕಟ್ಟಿಕೊಟ್ಟಿದೆ.
ಫ್ಯಾಥಮ್ ಕನ್ಸಲ್ಟಿಂಗ್ ಸಂಸ್ಥೆ ಮಾಡಿರುವ ಈ ಅಂದಾಜಿನಲ್ಲಿ ಟರ್ಕಿ ಮಾತ್ರವಲ್ಲದೆ ಇನ್ನೂ ಹಲವಾರು ಅಚ್ಚರಿಗಳಿವೆ. ಸದ್ಯ ಆರ್ಥಿಕ ಅಧಃಪತನದಲ್ಲಿರುವ ಪಾಕಿಸ್ತಾನ ಇನ್ನು 75 ವರ್ಷದಲ್ಲಿ ವಿಶ್ವದ 25ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಅದರ ಜಿಡಿಪಿ 4 ಟ್ರಿಲಿಯನ್ ಡಾಲರ್ ಸಮೀಪಕ್ಕೆ ಹೋಗಲಿದೆ. ಇನ್ನೂ ಅಚ್ಚರಿ ಎಂದರೆ ಬಾಂಗ್ಲಾದೇಶ 13ನೇ ಸ್ಥಾನ ಪಡೆಯುವುದು. ಆಸ್ಟ್ರೇಲಿಯಾದಂಥ ದೇಶಗಳಿಗಿಂತ ಬಾಂಗ್ಲಾದೇಶದ ಆರ್ಥಿಕತೆ ದೊಡ್ಡದಿರಲಿದೆ.
ಇದನ್ನೂ ಓದಿ: ಮುಂದಿನ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ8 ರಷ್ಟು ಪ್ರಗತಿ ಕಾಣಲಿದೆ: ಅಶ್ವಿನಿ ವೈಷ್ಣವ್
ಇದನ್ನೂ ಓದಿ: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ
1990ರ ಬಳಿಕ ಜಗತ್ತಿನ ದೇಶಗಳ ಆರ್ಥಿಕತೆ ಹೇಗೆ ಬೆಳೆದಿದೆ ಎನ್ನುವ ಅಂಶವನ್ನು ಗ್ರಾಫಿಕ್ಸ್ನಲ್ಲಿ ಬಿಂಬಿಸಲಾಗಿದೆ. ಇದರ ಪ್ರಕಾರ 2060ರವರೆಗೂ ಭಾರತದ ಜಿಡಿಪಿ ಭರ್ಜರಿಯಾಗಿ ಬೆಳೆಯಲಿದೆ. ಚೀನಾವನ್ನೂ ಅದು ಹಿಂದಿಕ್ಕಬಹುದು ಎನ್ನುವ ಸೂಚನೆ ಕಾಣುತ್ತದೆ. ಆದರೆ, ಅಲ್ಲಿಂದಾಚೆ ಚೀನಾ ಬೆಳವಣಿಗೆ ವೇಗ ಪಡೆದುಕೊಳ್ಳುತ್ತದೆ.
ಇನ್ನೊಂದು ಮುಖ್ಯ ಅಂಶ ಎಂದರೆ ಚೀನಾದ ಜನಸಂಖ್ಯೆ 2,100ರಲ್ಲಿ 80 ಕೋಟಿಗಿಂತಲೂ ಕಡಿಮೆಗೆ ಇಳಿಯುತ್ತದೆ. ಭಾರತದ ಜನಸಂಖ್ಯೆ 152 ಕೋಟಿಗೆ ಸೀಮಿತಗೊಳ್ಳುತ್ತದೆ.
ಫ್ಯಾಥಮ್ ಕನ್ಸಲ್ಟಿಂಗ್ನ ಈ ರಿಪೋರ್ಟ್ನಲ್ಲಿರುವ ಮತ್ತೊಂದು ಮುಖ್ಯ ಅಂಶ ಎಂದರೆ 22ನೇ ಶತಮಾನದ ಆರಂಭದ ಹೊತ್ತಿಗೆ ಏಷ್ಯಾ ಮತ್ತು ಆಫ್ರಿಕನ್ ದೇಶಗಳು ಜಗತ್ತಿನ ಆರ್ಥಿಕತೆಯಲ್ಲಿ ಸಿಂಹಪಾಲು ಹೊಂದಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sun, 25 February 24