Nikhil Kamath: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ
Own House vs Rent House: ಸ್ವಂತ ಮನೆ ಕಟ್ಟಿಕೊಂಡು ಇರುವುದು ಉತ್ತಮವಾ, ಬಾಡಿಗೆ ಮನೆಯಲ್ಲಿ ಇರುವುದು ಒಳ್ಳೆಯದಾ ಎಂಬ ಪ್ರಶ್ನೆಗೆ ತಮ್ಮದೇ ಉತ್ತರ ಕೊಟ್ಟಿದ್ದಾರೆ ನಿಖಿಲ್ ಕಾಮತ್. ಸ್ವಂತ ಮನೆಗೆ ಹಾಕುವ ದುಡ್ಡನ್ನು ಬಳಸಿ ಶೇ. 10-12ರಷ್ಟು ಆದಾಯ ಮಾಡಬಹುದಾದರೆ ಬಾಡಿಗೆ ಮನೆ ಉತ್ತಮ ಎನ್ನುವುದು ಅವರ ವಾದ. ನಿಖಿಲ್ ಕಾಮತ್ ಅವರು ಷೇರು ಬ್ರೋಕರೇಜ್ ಕಂಪನಿ ಝೀರೋಧದ ಸಹ-ಸಂಸ್ಥಾಪಕರು. ವಿವಿಧ ಪೋಡ್ಕಾಸ್ಟ್ಗಳಲ್ಲಿ ಅವರು ಪಾಲ್ಗೊಳ್ಳುತ್ತಿರುತ್ತಾರೆ.
ಬಡವರಾದಿಯಾಗಿ ಧನಿಕರವರೆಗೆ ಎಲ್ಲರೂ ಕೂಡ ತಮ್ಮದೇ ಕನಸಿ ಸ್ವಂತ ಸೂರು (own house) ಹೊಂದಲು ಇಚ್ಛಿಸುತ್ತಾರೆ. ಗುಡಿಸಲಿನಿಂದ ಹಿಡಿದು ಮಹಲಿನವರೆಗೆ ತಮ್ಮ ಕೈಲಾದ ಮನೆ ಮಾಡಿಕೊಳ್ಳುತ್ತಾರೆ. ಬಹಳ ಮಂದಿಗೆ ಸ್ವಂತ ಮನೆ ಮಾಡಿಕೊಳ್ಳುವುದೇ ಜೀವನದ ಮುಖ್ಯ ಗುರಿ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಮಾತೂ ಇದೆ. ಮನೆ ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ಕನಸಿನ ಮನೆ ಬೇಕೆಂದರೆ ಅದಕ್ಕೆ ವ್ಯಯಿಸಬೇಕಾದ ಹಣ ಅಷ್ಟಿಷ್ಟಲ್ಲ. ಅದರಲ್ಲೂ ಬೆಂಗಳೂರು, ಮುಂಬೈನಂತಹ ಮಹಾನಗರಿಯಲ್ಲಿ ಭೂಮಿ ಬೆಲೆಯೂ ಹೆಚ್ಚು, ಕಟ್ಟಡ ನಿರ್ಮಾಣ ವೆಚ್ಚವೂ ಹೆಚ್ಚು, ಅಪಾರ್ಟ್ಮೆಂಟ್ ಬೆಲೆಯೂ ಹೆಚ್ಚು. ಆದರೆ, ಮನೆಯ ಕನಸು ಬಿಡಲಾದೀತೆ..! ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಹೇಳೋ ಲಾಜಿಕ್ ಬೇರೆ. ಅವರ ಪ್ರಕಾರ ಭಾರತದಲ್ಲಿ ಸ್ವಂತ ಮನೆಗಿಂತ ಬಾಡಿಗೆ ಮನೆಯೇ ವರ್ಕೌಟ್ ಆಗುತ್ತಂತೆ. ಅಂದಹಾಗೆ, ಅಪ್ಪನ ಊರಿನಲ್ಲಿರುವ ಪೂರ್ವಿಕರ ಮನೆ ಬಿಟ್ಟರೆ ಕಾಮತ್ ಬಳಿ ಸ್ವಂತ ಮನೆ ಎಂಬುದೇ ಇಲ್ಲವಂತೆ. ಅದು ಹೇಗೆ ಸ್ವಂತಕ್ಕಿಂತ ಬಾಡಿಗೆ ಮನೆ ಉತ್ತಮ?
ನಿಖಿಲ್ ಕಾಮತ್ ಪ್ರಕಾರ ಬಾಡಿಗೆ ಮನೆ ಯಾಕೆ ಬೆಸ್ಟ್?
‘ನನ್ನ ಹಣ ಬಳಸಿ ಶೇ. 10ರಿಂದ 12ರಷ್ಟು ಲಾಭ ಮಾಡುತ್ತೇನೆ ಎಂದಿಟ್ಟುಕೊಳ್ಳಿ. ಸ್ವಂತ ಮನೆ ಪಡೆಯಲು ವ್ಯಯಿಸುವ ದುಡ್ಡಿನಿಂದ ನಾನು ಗಳಿಸುವ ಲಾಭದಲ್ಲಿ ಶೇ. 3 ಹಣ ಬಳಸಿ ಬಾಡಿಗೆಗೆ ಮನೆ ಪಡೆಯಬಹುದು,’ ಎನ್ನುತ್ತಾರೆ ನಿಖಿಲ್ ಕಾಮತ್. ಸ್ವಂತ ಮನೆಯ ದುಡ್ಡಿನಿಂದ ಬರುವ ಆದಾಯದಲ್ಲಿ ಮೂರ್ನಾಲ್ಕು ಅಪಾರ್ಟ್ಮೆಂಟ್ಗಳನ್ನು ಬಾಡಿಗೆಗೆ ಪಡೆಯಬಹುದು. ಆದ್ದರಿಂದ ಸ್ವಂತ ಮನೆ ಖರೀದಿಸುವ ಲಾಜಿಕ್ ನನಗೆ ಪ್ರಿಯವಾಗಿಲ್ಲ ಎಂಬುದು ಅವರ ಅನಿಸಿಕೆ.
‘ಇವತ್ತಿನ ಮೌಲ್ಯದಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುವುದು ವೈಯಕ್ತಿಕವಾಗಿ ನನಗೆ ಸರಿಕಾಣುವುದಿಲ್ಲ. ಇವತ್ತಿನ ಬಡ್ಡಿದರ ಪರಿಗಣಿಸಿದರೆ ಮನೆ ಮತ್ತು ಕಚೇರಿಗಳ ಬೆಲೆ ತೀರಾ ದುಬಾರಿ ಆಗಿದೆ,’ ಎಂಬುದು ನಿಖಿಲ್ ಕಾಮತ್ ವಾದ. ಅವರ ಪ್ರಕಾರ, ರಿಯಲ್ ಎಸ್ಟೇಟ್ ಬೆಲೆಗೆ ಹೋಲಿಸಿದರೆ ಬಾಡಿಗೆ ದರ ಬಹಳ ಕಡಿಮೆ.
ಇದನ್ನೂ ಓದಿ: ಬೆಂಗಳೂರಲ್ಲಿ ಶಟಲ್ ಬಸ್ ಹತ್ತಿದ ಊಬರ್ ಸಿಇಒ; ಭಾರತದಲ್ಲಿ ಈಜಿದರೆ ಎಲ್ಲಿಯಾದರೂ ಜೈಸಬಹುದು ಎಂದ ದಾರಾ ಖುಸ್ರೋವಶಾಹಿ
ರಸವತ್ತಾದ ಕಾಮೆಂಟ್ಗಳು..! ಇವರಿಗೆ ಹೆಂಡರಾ, ಮಕ್ಕಳಾ..!
ಸೋನಿಯಾ ಶೆಣೈ ಎಂಬ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈ ಪೋಡ್ಕಾಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 15,000ಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಹಾಗೆಯೇ, ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳೂ ಬಂದಿವೆ.
ರೋಹನ್ ಪಾಂಡೆ ಎಂಬ ಹೆಸರಿನ ವ್ಯಕ್ತಿ ಹೀಗೆ ಕಾಮೆಂಟಿಸಿದ್ದಾರೆ: ‘ಈ ವ್ಯಕ್ತಿಗೆ ಜೀವನವೇ ಇಲ್ಲ. ಮದುವೆ ಬೇಕಿಲ್ಲ, ಮಕ್ಕಳು ಬೇಕಿಲ್ಲ, ಸ್ವಂತ ಮನೆ ಬೇಕಿಲ್ಲ. ಇವರ ಅಸ್ತಿತ್ವ ಯಾಕೆ ಎಂದೇ ಗೊತ್ತಾಗುತ್ತಿಲ್ಲ. ಹಣ ಸಂಪಾದಿಸಿದರೆ ಖರ್ಚೂ ಕೂಡ ಮಾಡಬೇಕಲ್ವ’ ಎಂದಿದ್ದಾರೆ.
View this post on Instagram
ಸ್ವಂತ ಜಾಗದಲ್ಲಿ ಆದಾಯ ಸೃಷ್ಟಿಸಬಹುದಲ್ವಾ?
ಸ್ವಂತ ಮನೆ ಪರವಾಗಿ ಮತ್ತೊಬ್ಬರು ಕಾಮೆಂಟಿಸಿದ್ದಾರೆ: ‘ಹಣದುಬ್ಬರದಿಂದಾಗಿ ಬಡ್ಡಿದರದ ತೂಕ ಕಡಿಮೆ ಆಗುತ್ತದೆ. ಮನೆಗಳನ್ನು ಬಿಸಿನೆಸ್ ಆಗಿ ಪರಿವರ್ತಿಸಬಹುದು. ಆಸ್ತಿ ಮೌಲ್ಯ ಹೆಚ್ಚುತ್ತದೆ. ಹಾಗೆಯೇ, ಸ್ವಂತ ಮನೆ ನಮಗೆ ಸುರಕ್ಷತೆಯ ಭಾವ ತಂದುಕೊಡುತ್ತದೆ,’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್
ನಿಖಿಲ್ ಕಾಮತ್ ಅವರನ್ನು ಸಮರ್ಥಿಸಿಕೊಂಡು, ಈ ಕಾಮೆಂಟುಗಳಿಗೆ ವಿರುದ್ಧವಾಗಿಯೂ ಬಹಳಷ್ಟು ಪ್ರತಿಕ್ರಿಯೆಗಳು ಬಂದಿವೆ. ನಿಖಿಲ್ ಕಾಮತ್ ಅವರಿಗೆ ಹಣ ಮಾಡುವ ಅಭಿಲಾಷೆ ಬಹಳಷ್ಟಿದೆ. ಐಷಾರಾಮಿಯಾಗಿ ಖರ್ಚು ಮಾಡುವ ಲಾಲಸೆ ಎಲ್ಲರಿಗೂ ಖುಷಿ ಕೊಡಲ್ಲ. ಹಣವನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ಅವರು ಸಾಕಷ್ಟು ಬಾರಿ ಹೇಳಿದ್ದಾರೆ. ಅವರ ಐಕ್ಯೂ ನಿಮ್ಮದ್ದಕ್ಕಿಂತ ಕಡಿಮೆ ಇಲ್ಲ,’ ಎಂದು ಒಬ್ಬರು ಹೇಳಿದ್ದಾರೆ.
ನಿಖಿಲ್ ಕಾಮತ್ ಹೇಳಿದ ಲಾಜಿಕ್ ವರ್ಕೌಟ್ ಆಗಬೇಕೆಂದರೆ ಒಬ್ಬ ವ್ಯಕ್ತಿ ತನ್ನಲ್ಲಿರುವ ಹಣವನ್ನು ಶೇ. 10ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆಯುವಂತಹ ಹೂಡಿಕೆಗಳಲ್ಲಿ ತೊಡಗಿಸಬಲ್ಲವರಾಗಿರಬೇಕು ಎನ್ನುವಂತಹ ಅನಿಸಿಕೆಗಳೂ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ