Fortune 500 list: ಫಾರ್ಚೂನ್ ಗ್ಲೋಬಲ್ ಲಿಸ್ಟ್​ನಲ್ಲಿ ಎಲ್​ಐಸಿ, ಷೇರುಪೇಟೆಗೆ ಬಂದ ಮೊದಲ ವರ್ಷವೇ ಜಾಗತಿಕ ಗೌರವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 04, 2022 | 12:27 PM

LIC: ಕೋಟ್ಯಂತರ ಪಾಲಿಸಿದಾರರು ಮತ್ತು ಹೂಡಿಕೆದಾರರ ನೆಚ್ಚಿನ ಕಂಪನಿಯಾಗಿರುವ ಎಲ್​ಐಸಿ ಇದೀಗ ಮತ್ತೊಂದು ದಾಖಲೆ ಬರೆದಿದೆ.

Fortune 500 list: ಫಾರ್ಚೂನ್ ಗ್ಲೋಬಲ್ ಲಿಸ್ಟ್​ನಲ್ಲಿ ಎಲ್​ಐಸಿ, ಷೇರುಪೇಟೆಗೆ ಬಂದ ಮೊದಲ ವರ್ಷವೇ ಜಾಗತಿಕ ಗೌರವ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಭಾರತದ ಅತಿದೊಡ್ಡ ಜೀವವಿಮಾ ಕಂಪನಿಯಾಗಿರುವ ‘ಭಾರತೀಯ ಜೀವ ವಿಮಾ ನಿಗಮ’ (Life Insurance Corporation of India – LIC) ಇತ್ತೀಚೆಗಷ್ಟೇ ಷೇರುಪೇಟೆ ಪ್ರವೇಶಿಸಿ ದಾಖಲೆ ಮೊತ್ತದ ನಿಧಿ ಸಂಗ್ರಹಿಸಿತ್ತು. ನಂತರದ ದಿನಗಳಲ್ಲಿ ಷೇರುಮೌಲ್ಯ ಕುಸಿತ ಕಂಡಿದ್ದರೂ ಹೂಡಿಕೆದಾರರು ಕಂಪನಿಯ ಮೇಲೆ ಭರವಸೆ ಕಳೆದುಕೊಂಡಿರಲಿಲ್ಲ. ಕೋಟ್ಯಂತರ ಪಾಲಿಸಿದಾರರು ಮತ್ತು ಹೂಡಿಕೆದಾರರ ನೆಚ್ಚಿನ ಕಂಪನಿಯಾಗಿರುವ ಎಲ್​ಐಸಿ ಇದೀಗ ಮತ್ತೊಂದು ದಾಖಲೆ ಬರೆದಿದೆ. ಇದೀಗ ಬಿಡುಗಡೆಯಾಗಿರುವ ‘ಫಾರ್ಚೂನ್ ಗ್ಲೋಬಲ್ 500 ಲಿಸ್ಟ್’​ (Fortune Global 500 list) ಪಟ್ಟಿಯಲ್ಲಿ ಎಲ್​ಐಸಿ 100ರ ಒಳಗಿನ ಸ್ಥಾನ ಪಡೆದು ದಾಖಲೆ ಬರೆದಿದೆ. 97.26 ಶತಕೋಟಿ ಅಮೆರಿಕನ್ ಡಾಲರ್​ ಮೊತ್ತದಷ್ಟು ಆದಾಯ ಮತ್ತು 5.53 ಕೋಟಿ ಅಮೆರಿಕನ್ ಡಾಲರ್ ಲಾಭ ಇರುವ ಎಲ್​ಐಸಿ 500 ಕಂಪನಿಗಳ ಪಟ್ಟಿಯಲ್ಲಿ 98ನೇ ಸ್ಥಾನ ಪಡೆದಿದೆ. ಭಾರತದ ಮತ್ತೊಂದು ಪ್ರಮುಖ ಕಂಪನಿ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd – RIL) ಈ ಪಟ್ಟಿಯಲ್ಲಿ 104ನೇ ಸ್ಥಾನಕ್ಕೆ ಏರಿದೆ.

ಫಾರ್ಚೂನ್ 500 ಪಟ್ಟಿಯಲ್ಲಿ ಎಲ್​ಐಸಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ. ಕಂಪನಿಗಳ ಸೇಲ್ಸ್​ ವ್ಯವಹಾರವನ್ನೇ ಈ ಪಟ್ಟಿಯಲ್ಲಿ ಪರಿಗಣಿಸಲು ಮುಖ್ಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ. 93.98 ಶತಕೋಟಿ ಅಮೆರಿಕನ್ ಡಾಲರ್​ನಷ್ಟು ಆದಾಯ ಮತ್ತು 8.15 ಶತಕೋಟಿ ನಿವ್ವಳ ಲಾಭ ಇರುವ ರಿಲಯನ್ಸ್​ ಈ ಪಟ್ಟಿಯಲ್ಲಿ 104ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಿಲಯನ್ಸ್​ನ ಹೆಸರು ಪಟ್ಟಿಯಲ್ಲಿ 51 ಸ್ಥಾನ ಮೇಲೇರಿದೆ.

ಅಮೆರಿಕದ ಬೃಹತ್ ಚಿಲ್ಲರೆ ವ್ಯಾಪಾರ ಮಳಿಗೆ ವಾಲ್​ಮಾರ್ಟ್​ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಭಾರತದ ಒಟ್ಟು 9 ಕಂಪನಿಗಳು ಪಟ್ಟಿಯಲ್ಲಿವೆ. ಈ ಪೈಕಿ ಐದು ಸರ್ಕಾರಿ ಸ್ವಾಮ್ಯದಲ್ಲಿವೆ. ನಾಲ್ಕು ಖಾಸಗಿ ಕಂಪನಿಗಳು. ಭಾರತದ ಕಂಪನಿಗಳ ಪೈಕಿ ಎಲ್​ಐಸಿ ಮಾತ್ರ ರಿಲಯನ್ಸ್​ಗಿಂತಲೂ ಉನ್ನತ ಸ್ಥಾನವನ್ನು ಪಡೆದಿದೆ. ಉಳಿದಂತೆ ಇಂಡಿಯನ್ ಆಯಿಲ್ (Indian Oil Corporation – IOC) 28 ಸ್ಥಾನ ಮೇಲೇರಿ 142ನೇ ಸ್ಥಾನಕ್ಕೆ ಬಂದಿದೆ. ಒಎನ್​ಜಿಸಿ (Oil and Natural Gas Corporation – ONGC) 16 ಸ್ಥಾನ ಮೇಲೇರಿ 190ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಫಾರ್ಚೂನ್ 500 ಪಟ್ಟಿಯಲ್ಲಿ ಟಾಟಾ ಸಮೂಹದ ಎರಡು ಕಂಪನಿಗಳು ಸ್ಥಾನ ಪಡೆದಿವೆ. 370ನೇ ಸ್ಥಾನದಲ್ಲಿ ಟಾಟಾ ಮೋಟಾರ್ಸ್ ಮತ್ತು 435ನೇ ಸ್ಥಾನದಲ್ಲಿ ಟಾಟಾ ಸ್ಟೀಲ್ ಇದೆ. ಸ್ಥಾನ ಪಡೆದಿರುವ ಭಾರತೀಯ ಖಾಸಗಿ ಕಂಪನಿಗಳಲ್ಲಿ ರಾಜೇಶ್ ಎಕ್ಸ್​ಪೋರ್ಟ್​ (437) ಹೆಸರು ಇದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) 17 ಸ್ಥಾನ ಮೇಲೇರಿ 236ನೇ ಸ್ಥಾನದಲ್ಲಿ ಹೆಸರು ಪಡೆದಿದೆ. ಭಾರತ್ ಪೆಟ್ರೋಲಿಯಂ (Bharat Petroleum Corporation Ltd) 19 ಸ್ಥಾನ ಮೇಲೇರಿ 295ನೇ ಸ್ಥಾನ ತಲುಪಿದೆ.

ಮಾರ್ಚ್ 31, 2022ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಅತಿಹೆಚ್ಚು ವಹಿವಾಟು ನಡೆಸಿರುವ ಕಂಪನಿಗಳನ್ನು ಗುರುತಿಸಿ ಫಾರ್ಚೂನ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಜಾಗತಿಕ ದೈತ್ಯ ಕಂಪನಿ ವಾಲ್​ಮಾರ್ಟ್​ ಸತತ 9ನೇ ವರ್ಷ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಅಮೆಜಾನ್ ಇದೆ. ಚೀನಾದ ಸ್ಟೇಟ್ ಗ್ರಿಡ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಮತ್ತು ಸಿನೊಪಿಕ್ ಕಂಪನಿಗಳು ಟಾಪ್-5ರಲ್ಲಿ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿರುವ ಚೀನಾದ ಕಂಪನಿಗಳ ಆದಾಯವು ಅಮೆರಿಕದ ಕಂಪನಿಗಳ ಆದಾಯವನ್ನು ಮೀರಿ ಬೆಳೆದಿವೆ. ಆರ್ಥಿಕ ಇತಿಹಾಸದಲ್ಲಿ ಗಮನಾರ್ಹ ವಿದ್ಯಮಾನ ಎನಿಸಿದೆ.