Businesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

|

Updated on: Mar 23, 2023 | 1:55 PM

Franchise India Survey on Women: ಫ್ರಾಂಚೈಸಿ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ. 30ರಷ್ಟು ಮಹಿಳೆಯರು ಸ್ವಂತ ಉದ್ದಿಮೆ ನಡೆಸಲು ಆಸಕ್ತಿ ತೋರುತ್ತಿದ್ದಾರೆ. ಇಂದು ಸ್ವಂತ ವ್ಯವಹಾರ ನಡೆಸಲು ವಿಫುಲ ಅವಕಾಶಗಳು ಇವೆ. ಫ್ರಾಂಚೈಸಿ ವ್ಯವಹಾರಗಳಂತೂ ಈಗ ಬಹಳ ಕಡಿಮೆ ವೆಚ್ಚಕ್ಕೆ ಲಭ್ಯ ಇವೆ.

Businesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ
ಮಹಿಳೆ
Follow us on

ನವದೆಹಲಿ: ಭಾರತದ ಆರ್ಥಿಕತೆ ವೇಗವಾಗಿ ಬೆಳೆಯಬೇಕಾದರೆ ಉದ್ಯೋಗಸೃಷ್ಟಿಸುವಂತಹ ಸಣ್ಣಪುಟ್ಟ ಉದ್ದಿಮೆಗಳು ಹೆಚ್ಚೆಚ್ಚು ಬೆಳೆಯಬೇಕು. ದೇಶದ ಯುವ ಸಮುದಾಯದವರಲ್ಲಿ ಉದ್ಯಮಶೀಲತಾ ಮನೋಭಾವ (Entrepreneurship) ಹೆಚ್ಚಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಸ್ವಂತ ಉದ್ದಿಮೆಗೆ (Own Business) ದೇಶದ ಹೆಚ್ಚೆಚ್ಚು ಮಹಿಳೆಯರು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ತಮ್ಮದೇ ಸ್ವಂತ ಉದ್ದಿಮೆ ಸ್ಥಾಪಿಸುವ ಉತ್ಸಾಹವನ್ನು ಮಹಿಳೆಯರು ತೋರುತ್ತಿದ್ದಾರೆ. ಮಹಿಳೆಯರ ಈ ಉದ್ಯಮಶೀಲತೆಯ ಗುಣಕ್ಕೆ ಇಂಬು ಕೊಡಲೋ ಎಂಬಂತೆ ಫ್ರಾಂಚೈಸಿ ಉದ್ದಿಮೆಗಳು (Franchise Industry) ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ. ಕೌಟುಂಬಿಕ ಜವಾಬ್ದಾರಿ ಜೊತೆಗೆ ಸ್ವಂತ ಉದ್ದಿಮೆ ನಡೆಸಲು ಮಹಿಳೆಯರಿಗೆ ಈ ಫ್ರಾಂಚೈಸಿ ವ್ಯವಹಾರಗಳು ಒಳ್ಳೆಯ ಅವಕಾಶ ಕಲ್ಪಿಸಿವೆ ಎಂಬುದು ಸಮೀಕ್ಷೆಯಿಂದ ತಿಳಿದುಬರುತ್ತದೆ.

ಫ್ರಾಂಚೈಸಿ ಇಂಡಿಯಾ (Franchise India) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ. 30ರಷ್ಟು ಮಹಿಳೆಯರು ಸ್ವಂತ ಉದ್ದಿಮೆ ನಡೆಸಲು ಆಸಕ್ತಿ ತೋರುತ್ತಿದ್ದಾರೆ. ಇಂದು ಸ್ವಂತ ವ್ಯವಹಾರ ನಡೆಸಲು ವಿಫುಲ ಅವಕಾಶಗಳು ಇವೆ. ಫ್ರಾಂಚೈಸಿ ವ್ಯವಹಾರಗಳಂತೂ ಈಗ ಬಹಳ ಕಡಿಮೆ ವೆಚ್ಚಕ್ಕೆ ಲಭ್ಯ ಇವೆ. ದೇಶ ವಿದೇಶಗಳ ದೊಡ್ಡ ದೊಡ್ಡ ಬ್ರ್ಯಾಂಡ್​ಗಳು ಭಾರತದ ಪ್ರಮುಖ ನಗರಗಳಾಚೆ ಎರಡನೇ ಮತ್ತು ಮೂರನೇ ಸ್ತರದ ನಗರಗಳತ್ತ ವ್ಯವಹಾರ ವಿಸ್ತರಿಸಲು ಆಸಕ್ತಿ ತೋರುತ್ತಿವೆ. ಇದರಿಂದ ಸಣ್ಣಪುಟ್ಟ ನಗರಗಳಲ್ಲಿನ ವ್ಯವಹಾರಾಸಕ್ತ ಮಹಿಳೆಯರಿಗೆ ಹೆಚ್ಚಿನ ಆಯ್ಕೆಗಳು ಸಿಗುತ್ತಿವೆ.

ಫ್ರಾಂಚೈಸಿ ಇಂಡಿಯಾ ಸಂಸ್ಥೆ ಬೆಂಗಳೂರು, ದೆಹಲಿ, ಗುರುಗ್ರಾಮ್, ಭೋಪಾಲ್, ಲೂಧಿಯಾನ, ಲಕ್ನೋ, ಗುವಾಹಟಿ, ಗೋವಾ, ಜೈಪುರ್, ಪುಣೆ ನಗರಗಳಲ್ಲಿ ಆಯ್ದ 500 ಮಹಿಳೆಯರ ಸಮೀಕ್ಷೆ ಕೈಗೊಂಡಿದೆ. ಈ ಸಮೀಕ್ಷೆಯ ಮುಖ್ಯಾಂಶ ಎಂದರೆ ಫ್ರಾಂಚೈಸಿ ಉದ್ದಿಮೆಯತ್ತ ಹೆಚ್ಚೆಚ್ಚು ಮಹಿಳೆಯರು ಆಸಕ್ತಿ ತೋರುತ್ತಿರುವುದು.

ಇದನ್ನೂ ಓದಿMigrant Workers: ತವರಿಗೆ ಹೋದ ವಲಸೆ ಕಾರ್ಮಿಕರು ವಾಪಸಾಗುತ್ತಿಲ್ಲ; ಭಾರೀ ಸಂಕಷ್ಟದಲ್ಲಿ ತಮಿಳುನಾಡಿನ ಉದ್ಯಮಗಳು

ಪ್ರತೀ 10ರಲ್ಲಿ 3 ಮಹಿಳೆಯರು ಸ್ವಂತ ಉದ್ದಿಮೆ ಸ್ಥಾಪಿಸುವ ಇರಾದೆ ಹೊಂದಿದ್ದಾರೆ. ಸ್ವಂತ ವ್ಯವಹಾರ ಹೊಂದಲು ಆಸಕ್ತಿ ತೋರಿಸಿದ ಮಹಿಳೆಯರಲ್ಲಿ ಶೇ. 57 ಮಂದಿ 26ರಿಂದ 35 ವರ್ಷ ವಯೋಮಾನದವರಾಗಿದ್ದಾರೆ. ಇವರ ಪೈಕಿ ಕನಿಷ್ಠ ಪದವಿ ಪಡೆದ ಸುಶಿಕ್ಷಿತ ಮಹಿಳೆಯರೇ ಹೆಚ್ಚು ಎಂಬುದು ಈ ಸಮೀಕ್ಷೆಯಿಂದ ತಿಳಿದುಬರುತ್ತದೆ.

ಇನ್ನೂ ಒಂದು ಕುತೂಹಲಕಾರಿ ಅಂಶ ಎಂದರೆ ಸ್ವಂತ ಉದ್ದಿಮೆ ಹೊಂದಿದ ಮಹಿಳೆಯರಲ್ಲಿ ಶೇ. 45ರಷ್ಟು ಮಂದಿ ಮದುವೆಯಾಗಿದ್ದು, ತಮ್ಮ ಕೌಟುಂಬಿಕ ಜವಾಬ್ದಾರಿಗಳ ಜೊತೆ ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದಾರೆ.

ಮಹಿಳೆಯರನ್ನು ಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

ಭಾರತದಲ್ಲಿ ಫ್ರಾಂಚೈಸಿ ಉದ್ಯಮ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಇದರಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಹೆಚ್ಚೆಚ್ಚು ಮಹಿಳೆಯರು ಸ್ವಂತ ಉದ್ದಿಮೆ ಆರಂಭಿಸುವುದನ್ನು ಕಾಣುತ್ತಿದ್ದೇವೆ. ಇದು ಅರ್ಥಿಕತೆಗೆ ಶುಭ ಸೂಚನೆಯಂತಿದೆಎಂದು ಈ ಸಮೀಕ್ಷೆ ನಡೆಸಿದ ಫ್ರಾಂಚೀಸಿ ಇಂಡಿಯಾ ಸಂಸ್ಥೆಯ ಛೇರ್ಮನ್ ಗೌರವ್ ಮಾರ್ಯ ಹೇಳುತ್ತಾರೆ.

ಇದನ್ನೂ ಓದಿMortgage vs Home Loan: ಮನೆ ಕಟ್ಟಲು ಅಥವಾ ಕೊಳ್ಳಲು ಮಾರ್ಟ್​ಗೇಜ್ ಲೋನ್​ಗೆ ಅರ್ಜಿ ಸಲ್ಲಿಸುವುದು ಬೇಡ; ಏನು ಕಾರಣ?

ಬಹಳಷ್ಟು ಕಡಿಮೆ ವೆಚ್ಚದ ಫ್ರಾಂಚೈಸಿ ವ್ಯವಹಾರಗಳು ಸಾಕಷ್ಟು ಸಂಖ್ಯೆಯಲ್ಲಿ ಇವತ್ತು ಲಭ್ಯ ಇವೆ. ಪ್ರತಿಯೊಂದು ಉದ್ದಿಮೆಯಲ್ಲಿ ವಿವಿಧ ರೀತಿಯ ಫ್ರಾಂಚೈಸಿಗಳು ಅಖಾಡದಲ್ಲಿವೆ. ನಂದಿನಿ ಮಿಲ್ಕ್ ಪಾರ್ಲರ್​ನಿಂದ ಹಿಡಿದು ಗೋಲಿ ಸೋಡಾವರೆಗೂ ಥರಹಾವೇರಿ ಫ್ರಾಂಚೈಸಿಗಳು ಲಭ್ಯ ಇವೆ. ಇಂಥ ಫ್ರಾಂಚೈಸಿಗಳು ಬಹಳ ಕಡಿಮೆ ಬೆಲೆಗೂ ಸಿಗುತ್ತವೆ. ಕೆಲವೇ ಲಕ್ಷ ಬಂಡವಾಳ ಇದ್ದರೂ ಉದ್ದಿಮೆ ಆರಂಭಿಸಬಹುದು. ಹೀಗಾಗಿ, ಮಹಿಳೆಯರ ಸ್ವಂತ ಉದ್ದಿಮೆ ಕನಸು ನನಸಾಗಿಸಲು ಫ್ರಾಂಚೈಸಿ ಬ್ಯುಸಿನೆಸ್ ಎಡೆ ಮಾಡಿಕೊಟ್ಟಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ