Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Mazumdar Shah: ಇನ್ಫೋಸಿಸ್ ಬೋರ್ಡ್​ನಿಂದ ಕಿರಣ್ ಮಜುಮ್ದಾರ್ ನಿವೃತ್ತಿ; ಡಿ ಸುಂದರಂ ನೂತನ ಮುಖ್ಯ ನಿರ್ದೇಶಕ

Kiran Mazumdar Shah Retires From Infosys Board: 2014ರಿಂದಲೂ ಇನ್ಫೋಸಿಸ್ ನಿರ್ದೇಶಕರ ಮಂಡಳಿಯಲ್ಲಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಇದೀಗ ಲೀಡ್ ಇಂಡಿಪೆಂಡೆಂಟ್ ಡೈರೆಕ್ಟರ್ ಆಗಿ 2018ರಿಂದಲೂ ಕಾರ್ಯನಿರ್ವಹಿಸಿದ್ದರು.

Kiran Mazumdar Shah: ಇನ್ಫೋಸಿಸ್ ಬೋರ್ಡ್​ನಿಂದ ಕಿರಣ್ ಮಜುಮ್ದಾರ್ ನಿವೃತ್ತಿ; ಡಿ ಸುಂದರಂ ನೂತನ ಮುಖ್ಯ ನಿರ್ದೇಶಕ
ಕಿರಣ್ ಮಜುಮ್ದಾರ್ ಷಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 23, 2023 | 5:31 PM

ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah) ಅವರು ಇನ್ಫೋಸಿಸ್​ನ ನಿರ್ದೇಶಕರ ಮಂಡಳಿಯಿಂದ (Infosys Board) ನಿವೃತ್ತರಾಗಿದ್ದಾರೆ. ಬೆಂಗಳೂರು ಮೂಲದ ಇನ್ಫೋಸಿಸ್​ನ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿ (Lead Independent Director) ಕಿರಣ್ ಮಜುಮ್ದಾರ್ ಷಾ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರು ನಿವೃತ್ತರಾಗಿದ್ದಾರೆ. ಈ ವಿಚಾರವನ್ನು ಇನ್ಫೋಸಿಸ್ ಮಾರ್ಚ್ 23, ಗುರುವಾರ ಪ್ರಕಟಿಸಿದೆ. ಇದೇ ವೇಳೆ, ಡಿ ಸುಂದರಮ್ ಅವರನ್ನು ಇನ್ಫೋಸಿಸ್​ನ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿರುವ ವಿಚಾರವನ್ನೂ ಇನ್ಫೋಸಿಸ್ ಪ್ರಕಟಿಸಿದೆ. ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (Nomination and Remuneration Committee) ಕೊಟ್ಟ ಶಿಫಾರಸಿನ ಆಧಾರದ ಮೇಲೆ ಸುಂದರಂ ಅವರನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ. ಸುಂದರಂ ಅವರು ಮಾರ್ಚ್ 23ರಿಂದಲೇ ಹೊಸ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ.

ಡಿ. ಸುಂದರಮ್ ಅವರು 2017ರಿಂದಲೂ ಇನ್ಫೋಸಿಸ್​ನ ನಿರ್ದೇಶಕರ ಮಂಡಳಿಯಲ್ಲಿ ಇದ್ದಾರೆ. ಇನ್ನು, ಕಿರಣ್ ಮಜುಮ್ದಾರ್ ಷಾ ಅವರು 2014ರಲ್ಲೇ ಇನ್ಫೋಸಿಸ್ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿದ್ದರು. 2018ರಲ್ಲಿ ಮುಖ್ಯ ಸ್ವತಂತ್ರ ನಿರ್ದೇಶಕಿಯಾಗಿ ಬಡ್ಡಿ ಪಡೆದಿದ್ದರು. ಅಲ್ಲದೇ ಅವರು ಇನ್ಫೋಸಿಸ್ ಮಂಡಳಿಯ ವಿವಿಧ ಸಮಿತಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿ, ಎಸ್​ಜಿ ಕಮಿಟಿ, ಸಿಎಸ್​ಆರ್ ಕಮಿಟಿ, ನಾಮಿನೇಶನ್ ಅಂಡ್ ರೆಮ್ಯೂನರೇಶನ್ ಕಮಿಟಿ ಮೊದಲಾದವಕ್ಕೆ ಕಿರಣ್ ಮಜುಂದಾರ್ ಷಾ ಮುಖ್ಯಸ್ಥೆಯಾಗಿ ಕಾರ್ಯ ನಿಭಾಯಿಸಿದ್ದರು.

ಇದನ್ನೂ ಓದಿ: Businesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

ಕಿರಣ್ ಮಜುಮ್ದಾರ್ ಷಾ ಸೇವೆಯನ್ನು ಶ್ಲಾಘಿಸಿದ ನಂದನ್ ನಿಲೇಕಣಿ

ಇನ್ಫೋಸಿಸ್ ನಿರ್ದೆಶಕರ ಮಂಡಳಿಯಿಂದ ನಿವೃತ್ತರಾಗಿರುವ ಕಿರಣ್ ಮಜುಮ್ದಾರ್ ಷಾ ಅವರ ಸೇವೆಯನ್ನು ಛೇರ್ಮನ್ ನಂದನ್ ನಿಲೇಕಣಿ ಶ್ಲಾಘಿಸಿದ್ದಾರೆ. “ಇನ್ಫೋಸಿಸ್ ಕುಟುಂಬದ ಅವಿಭಾಜ್ಯ ಸದಸ್ಯೆಯಾಗಿದ್ದುಕೊಂಡು ವರ್ಷಗಳಿಂದ ಮಂಡಳಿಗೆ ಮಾರ್ಗದರ್ಶನ ಮತ್ತು ನಾಯಕತ್ವ ನೀಡಿದ ಕಿರಣ್​ಗೆ ನಾವು ಬಹಳ ಧನ್ಯವಾದ ಹೇಳಲೇಬೇಕು. ವೈಯಕ್ತಿಕವಾಗಿ ನಾವು ಆಕೆಗೆ ಬಹಳ ಕೃತಜ್ಞನಾಗಿದ್ದೇನೆ. 2017ರ ಆಗಸ್ಟ್​ನಲ್ಲಿ ನಾನು ಇನ್ಫೋಸಿಸ್​ಗೆ ಮರಳಿ ಸೇರಿದಾಗಿನಿಂದಲೂ ಮಂಡಳಿಯಲ್ಲಿ ಅವರೊಬ್ಬರ ಅದ್ಭುತ ಸಹವರ್ತಿಯಾಗಿ ಸೇವೆ ನೀಡಿದ್ದಾರೆಎಂದು ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿM3M Hurun’s Rich List 2023: ವಿಶ್ವ ಶ್ರೀಮಂತರಲ್ಲಿ ಅಂಬಾನಿ 9ನೇ ಸ್ಥಾನ; ಅದಾನಿ ಶ್ರೀಮಂತಿಕೆ ಎಷ್ಟು?

ಕಿರಣ್ ಮಜುಮ್ದಾರ್ ಷಾ ಅವರು ಬಯೋಕಾನ್ ಎಂಬ ಬಯೋಟೆಕ್ ಕಂಪನಿಯ ಸಂಸ್ಥಾಪಕಿ. ಬಹಳ ವರ್ಷಗಳ ಕಾಲ ಭಾರತದ ನಂಬರ್ ಒನ್ ಮಹಿಳಾ ಉದ್ಯಮಿ ಎನಿಸಿದ್ದವರು. ಬಯೋಟೆಕ್ ರಾಣಿ ಎಂದೇ ಖ್ಯಾತರಾಗಿರುವ 69 ವರ್ಷದ ಕಿರಣ್ ಮಜುಮ್ದಾರ್ ಷಾ ಇದೀಗ ಭಾರತದ ನಂಬರ್ ಒನ್ ಮಹಿಳಾ ಉದ್ಯಮಿಯಾಗಿ ಉಳಿದಿಲ್ಲ. ನೈಕಾ ಎಂಬ ಫ್ಯಾಷನ್ ಉದ್ಯಮದ ಕಂಪನಿಯ ಒಡತಿ ಫಾಲ್ಗುಣಿ ನಾಯರ್, ರಾಕೇಶ್ ಝುಂಝನವಾಲ ಅವರ ಪುತ್ರಿ ರೇಖಾ ಝುಂಝನವಾಲ ಅವರು ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಕಿರಣ್ ಮಜುಮ್ದಾರ್ ಷಾ ಅವರನ್ನು ಹಿಂದಿಕ್ಕಿದ್ದಾರೆ.

ಕಿರಣ್ ಮಜುಮ್ದಾರ್ ಷಾ ಅವರು ಬೆಂಗಳೂರಿಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅವರು ಬಹಳ ಸಕ್ರಿಯರಾಗಿದ್ದು, ಸರ್ಕಾರದ ನೀತಿಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನೂ ಮಾಡುವುದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Thu, 23 March 23