
ನವದೆಹಲಿ, ಜೂನ್ 18: ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. ಸ್ವಂತ ಬಲದಲ್ಲಿ ಭಾರತ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಗಮನಾರ್ಹ. ತಂತ್ರಜ್ಞಾನ, ಸಾಮರ್ಥ್ಯದಲ್ಲಿ ಬಹಳ ಮುಂಚಿತವಾಗಿ ಹೂಡಿಕೆ ಮಾಡುವ ದೇಶಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಅಂತೆಯೇ, ಭಾರತದ ರಕ್ಷಣಾ ಕ್ಷೇತ್ರದ (India defence) ಕಳೆದ 12 ವರ್ಷಗಳ ಪ್ರಯಾಣ ಇದಕ್ಕೆ ಸಾಕ್ಷಿ. ಭಾರತ ಈಗ ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿದೆ. ವಾಯು, ಜಲ ಮತ್ತು ನೆಲ ಈ ಮೂರೂ ವಿಭಾಗಗಳಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗಿದೆ. ಅದರಲ್ಲೂ ದೇಶೀಯ ತಂತ್ರಜ್ಞಾನ ಮತ್ತು ಉತ್ಪಾದನೆ ಮೂಲಕ ಭಾರತ ಉನ್ನತಿ ಸಾಧಿಸಿರುವುದು ವಿಶೇಷ.
ಸರ್ಕಾರದ ಮೈ ಗವರ್ನ್ಮೆಂಟ್ ವಿಭಾಗವು ಸೋಷಿಯಲ್ ಮೀಡಿಯಾದಲ್ಲಿ ಈ 12 ವರ್ಷದಲ್ಲಿ ತನ್ನ ಕೆಲ ಸಾಧನೆಗಳನ್ನು ವಿವರಿಸುವ ಒಂದು ಥ್ರೆಡ್ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದನ್ನು ರೀಪೋಸ್ಟ್ ಮಾಡಿದ್ದಾರೆ. ಈ 12 ವರ್ಷಗಳ ಮಿಲಿಟರಿ ಸಾಧನೆಯ ಮಾಹಿತಿಯ ಅವಲೋಕನ ಇಲ್ಲಿದೆ:
ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ ಶಸ್ತ್ರಾಸ್ತ್ರಗಳಲ್ಲಿ ಪ್ರಮುಖವಾದುದು ತೇಜಸ್ ಸರಣಿಯ ಯುದ್ಧವಿಮಾನಗಳು. ಫೈಟರ್ ಜೆಟ್ಗಳನ್ನು ಭಾರತದಲ್ಲೇ ಸ್ವಂತವಾಗಿ ವಿನ್ಯಾಸ ಮಾಡಿ ನಿರ್ಮಿಸಬಹುದು ಎಂದು ಮೊದಲು ತೋರಿಸಿಕೊಟ್ಟಿದ್ದು ಹೆಚ್ಎಎಲ್. ತೇಜಸ್ ಎಂಕೆ-1ಎ ಯುದ್ಧವಿಮಾನ ಈಗಾಗಲೇ ಭಾರತೀಯ ವಾಯುಪಡೆಗೆ ನಿಯೋಜಿತವಾಗಿದೆ. ತೇಜಸ್ ಎಂಕೆ-2 ಅಭಿವೃದ್ಧಿಗೊಳ್ಳುತ್ತಿದೆ.
ಪಿಎಂ ನರೇಂದ್ರ ಮೋದಿ ಅವರ ಟ್ವೀಟ್ ಮತ್ತು ಥ್ರೆಡ್
This thread explains how India has strengthened its defence capabilities across air, land and sea, advanced indigenous technologies and built a stronger foundation for self-reliance and national security.#12YearsOfSurakshitBharat https://t.co/vbISH1cTc1
— Narendra Modi (@narendramodi) June 17, 2026
ಭಾರತದ ಏರ್ ಡಿಫೆನ್ಸ್ ಜಾಲದಲ್ಲಿ ಆಕಾಶ್ ಸಿಸ್ಟಂ ಬಹಳ ಮುಖ್ಯ ಭಾಗವಾಗಿದೆ. ಆಪರೇಷನ್ ಸಿಂದೂರ್ ವೇಳೆ ಆಕಾಶ್ ಎಷ್ಟು ಉಪಯುಕ್ತ ಎಂಬುದು ಸಾಬೀತಾಗಿದೆ. ಆಕಾಶ್-ಎನ್ಜಿ ಎನ್ನುವ ಮತ್ತಷ್ಟು ಸುಧಾರಿತ ಮಿಸೈಲ್ ಸಿಸ್ಟಂ ಅನ್ನು ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿದೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಈ ಮಿಸೈಲ್ ಸಿಸ್ಟಂ ಅನ್ನು ತಯಾರಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ
ಭಾರತ ಸ್ವಂತವಾಗಿ ನಿರ್ಮಿಸಿರುವ ಶಸ್ತ್ರಾಸ್ತ್ರಗಳಲ್ಲಿ ಫಿರಂಗಿಗಳು ಇವೆ. ಪಿನಾಕಾ ಸಿಸ್ಟಂ ಇದಕ್ಕೆ ನಿದರ್ಶನ. ಡಿಆರ್ಡಿಒದ ಎಆರ್ಡಿಎ ಲ್ಯಾಬ್ನಲ್ಲಿ ಇದರ ಅಭಿವೃದ್ಧಿಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಭಾರತದ ಆರ್ಟಿಲರಿ ಶಕ್ತಿಯಲ್ಲಿ ಪಿನಾಕಾದ್ದು ಮುಖ್ಯಭಾಗ. ಈ ಅದ್ಭುತ ಫಿರಂಗಿಯಿಂದ ರಾಕೆಟ್ ದಾಳಿ ಮಾಡಬಹುದು.
ಭಾರತದ ಅಗ್ನಿ-5 ವಿಶ್ವದ ಶಕ್ತಿಶಾಲಿ ಕ್ಷಿಪಣಿಗಳ ಸಾಲಿಗೆ ಬರುತ್ತದೆ. ಇದು ಎಂಐಆರ್ವಿ ಟೆಕ್ನಾಲಜಿ ಹೊಂದಿದೆ. ಒಂದೇ ಮಿಸೈಲ್ನಲ್ಲಿ ಹಲವು ವಾರ್ಹೆಡ್ಗಳನ್ನು ಕಳುಹಿಸಬಹುದು. ಬೇರೆ ಬೇರೆ ಗುರಿಗಳಿಗೆ ಇವನ್ನು ಹೊಡೆಯಬಹುದು. ಕೆಲವೇ ದೇಶಗಳಿಗೆ ಈ ಸಾಮರ್ಥ್ಯ ಇರುವುದು.
ಬಹಳ ವೇಗವಾಗಿ ಸಾಗಬಲ್ಲ ಹೈಪರ್ಸಾನಿಕ್ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಹೈಪರ್ಸಾನಿಕ್ ಕ್ಷಿಪಣಿಗಳು ಮ್ಯಾಕ್ 5ಗಿಂತ ಹೆಚ್ಚಿನ ವೇಗದಲ್ಲಿ ಹಾರುತ್ತವೆ. ಮ್ಯಾಕ್ ವೇಗ ಎಂದರೆ ಶಬ್ದದ ವೇಗ. ಮ್ಯಾಕ್ 5 ವೇಗ ಎಂದರೆ ಗಂಟೆಗೆ 6,000 ಕಿಮೀಗೂ ಹೆಚ್ಚು ವೇಗದಲ್ಲಿ ಸಾಗುವುದು.
ಶತ್ರುಗಳ ಜಂಘಾಬಲ ಉಡುಗಿಸಲು ಸಹಾಯವಾಗುವುದು ಪರಮಾಣು ದಾಳಿಯ ಶಕ್ತಿ. ಭಾರತ ಇತ್ತೀಚೆಗೆ ಐಎನ್ಎಸ್ ಅರಿಹಂತ್ ಅನ್ನು ನೌಕಾಪಡೆಗೆ ನಿಯೋಜಿಸಿತು. ಇದು ಪರಮಾಣ ಶಸ್ತ್ರಾಸ್ತ್ರ ದಾಳಿ ಸಾಮರ್ಥ್ಯ ಇರುವ ಯುದ್ಧ ನೌಕೆ. ಇದರೊಂದಿಗೆ ವಾಯು, ಜಲ ಮತ್ತು ನೆಲ ಮಾರ್ಗಗಳಲ್ಲಿ ಭಾರತ ಪರಮಾಣು ದಾಳಿ ಸಾಮರ್ಥ್ಯ ಹೊಂದಿದಂತಾಗಿದೆ. ಶತ್ರುಗಳು ಪರಮಾಣು ದಾಳಿ ಎಸಗುವ ಸಾಹಸ ಮಾಡಿದರೆ ಭಾರತ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿದೆ.
ಯುದ್ಧಗಳಲ್ಲಿ ಹಡಗುಗಳ ಪಾತ್ರ ಬಹಳ ಮಹತ್ವದ್ದು. ಚೋಳರ ಕಾಲದಲ್ಲಿ ಭಾರತದ ನೌಕಾ ಬಲ ಬಹಳ ಉಚ್ಚವಾಗಿತ್ತು. ಈಗ ಭಾರತ ಆ ನಿಟ್ಟಿನಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಐಎನ್ಎಸ್ ವಿಕ್ರಾಂತ್ ಇದಕ್ಕೆ ನಿದರ್ಶನ. ಇದು ಭಾರತದಲ್ಲೇ ಸ್ವಂತವಾಗಿ ನಿರ್ಮಿಸಲಾದ ಹಡಗು. ಇದು ಯುದ್ಧವಿಮಾನಗಳ ವಾಹಕವಾಗಿದೆ. ಜನರನ್ನು ಸಾಗಿಸುವ ಹಡಗುಗಳಿಗಿಂತ ಯುದ್ದವಿಮಾನಗಳನ್ನು ಸಾಗಿಸುವ ಹಡಗುಗಳ ನಿರ್ಮಾಣ ಹೆಚ್ಚು ಸವಾಲಿಂದ ಕೂಡಿರುತ್ತದೆ ಮತ್ತು ಸಂಕೀರ್ಣವಾಗಿರುತ್ತದೆ.
ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್ಗಳು ಆಫರ್; ಟಾಟಾ ಟ್ರಸ್ಟ್ಸ್ನಿಂದ ಅನುದಾನ
ಭಾರತದ ನೌಕಾಪಡೆಯ ಆಧುನೀಕರಣ ಕೆಲಸ ಜೋರಾಗಿ ನಡೆಯುತ್ತಿದೆ. ದೇಶೀಯವಾಗಿ ಅಭಿವೃದ್ಧಿಗೊಂಡ ತಂತ್ರಜ್ಞಾನದಿಂದಲೇ ಆಧುನೀಕರಣ ಮಾಡಲಾಗುತ್ತಿದೆ. ಪ್ರಾಜೆಕ್ಟ್ 17ಎ ಸ್ಟೀಲ್ತ್ ಫ್ರಿಗೇಟ್ಸ್ (ಸಣ್ಣ ಹಡಗು), ಪ್ರಾಜೆಕ್ಟ್ 15ಬಿ ಡೆಸ್ಟ್ರಾಯರ್ಸ್, ಕಲ್ವರಿ ದರ್ಜೆಯ ಸಬ್ಮರೀನ್ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ.
ಭಾರತ ಸ್ವಂತವಾಗಿ ಅದ್ಭುತವಾದ ಮಿಸೈಲ್ ಇಕೋಸಿಸ್ಟಂ ಅಭಿವೃದ್ಧಿಪಡಿಸಿದೆ. ಬ್ರಹ್ಮೋಸ್, ಅಸ್ತ್ರ, ರುದ್ರಂ ಕ್ಷಿಪಣಿಗಳು ಶತ್ರುಗಳ ರಾಡಾರ್ ಕಣ್ತಪ್ಪಿಸಿ ಮಿಂಚಿನ ವೇಗದಲ್ಲಿ ದಾಳಿ ಮಾಡಬಲ್ಲಂತಹ ವಿಶ್ವದರ್ಜೆಯ ಅಸ್ತ್ರಗಳಾಗಿವೆ. ಅತ್ಯಾಧುನಿಕ ಡಿಫೆನ್ಸ್ ಟೆಕ್ನಾಲಜಿಯ ಉತ್ಪನ್ನಗಳುಉ ಇವು.
ದೇಶೀಯವಾಗಿ ವಿಮಾನಗಳನ್ನು ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸ. ಭಾರತ ಸಿ-295 ಪ್ರಾಜೆಕ್ಟ್ಗೆ ಕೈ ಹಾಕಿದೆ. ಆಪತ್ಕಾಲದಲ್ಲಿ ಬೇರೆ ದೇಶಗಳ ಮೇಲೆ ವಿಮಾನಗಳಿಗಾಗಿ ಅವಲಂಬಿತವಾಗುವುದು ತಪ್ಪುತ್ತದೆ. ಈ ಸಿ-295 ವಿಮಾನಗಳು ಯುದ್ಧ ಕಾಲದಲ್ಲಿ ಸೈನಿಕರನ್ನು ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗುತ್ತವೆ.
ಈಗ ಯುದ್ಧದಲ್ಲಿ ಡ್ರೋನ್ ಬಹಳ ಮುಖ್ಯವಾಗಿದೆ. ಶತ್ರುಗಳ ಡಿಫೆನ್ಸ್ ಸಿಸ್ಟಂ ಅನ್ನು ನ್ಯೂಟ್ರಲೈಸ್ ಮಾಡಲು ಡ್ರೋನ್ಗಳ ಗುಂಪನ್ನು ಬಳಸಲಾಗುತ್ತದೆ. ಹೀಗಾಗಿ, ರಷ್ಯಾ ಎದುರು ಉಕ್ರೇನ್ ಇನ್ನೂ ಸೋಲಪ್ಪಿಲ್ಲ. ಅಮೆರಿಕ, ಇಸ್ರೇಲ್ನ ಭೀಕರ ದಾಳಿಗೆ ಇರಾನ್ ಪ್ರತ್ಯುತ್ತರ ಕೊಡಲು ಈ ಡ್ರೋನ್ಗಳ ಪಾತ್ರ ಇದೆ. ಈ ಕಾರಣಕ್ಕೆ ಭಾರತವು ಸಾಕಷ್ಟು ಡ್ರೋನ್ ಸಾಮರ್ಥ್ಯ ವೃದ್ಧಿಸಲು ಖಾಸಗಿ ಕ್ಷೇತ್ರವನ್ನೂ ಬಳಸಿಕೊಳ್ಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ