ಬೆಂಗಳೂರಿನ ಐಐಎಂ ಕ್ಯಾಂಪಸ್ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್ಗಳು ಆಫರ್; ಟಾಟಾ ಟ್ರಸ್ಟ್ಸ್ನಿಂದ ಅನುದಾನ
IIM Bangalore starts new undergraduate college backed by Tata Trusts: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂ ಕ್ಯಾಂಪಸ್ನಲ್ಲಿ ಹೊಸ ವಸತಿ ಕಾಲೇಜು ಆರಂಭವಾಗಿದೆ. ಎರಡು ಅಂಡರ್ ಗ್ರಾಜುಯೇಟ್ ಕೋರ್ಸ್ಗಳನ್ನು ಇದು ಆಫರ್ ಮಾಡುತ್ತಿದೆ. ಟಾಟಾ ಟ್ರಸ್ಟ್ಸ್ ಸಂಸ್ಥೆ ಈ ಕಾಲೇಜಿಗೆ ಭಾರೀ ಮೊತ್ತದ ಅನುದಾನ ನೀಡಿದೆ. ಆಗಸ್ಟ್ ತಿಂಗಳಲ್ಲಿ ಎರಡು ಕೋರ್ಸ್‌ಗಳಿಗೆ ಮೊದಲ ಬ್ಯಾಚ್ ಆರಂಭವಾಗುತ್ತದೆ.

ಬೆಂಗಳೂರು, ಜೂನ್ 17: ಬೆಂಗಳೂರಿನ ಪ್ರತಿಷ್ಠಿತ ಐಐಎಂ ಬೆಂಗಳೂರು (IIM Bangalore – IIMB) ಸಂಸ್ಥೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪದವಿ (Undergraduate) ಶಿಕ್ಷಣ ವಿಭಾಗಕ್ಕೆ ಕಾಲಿಡುತ್ತಿದೆ. ಟಾಟಾ ಟ್ರಸ್ಟ್ಸ್ (Tata Trusts) ಬೆಂಬಲದೊಂದಿಗೆ ಐಐಎಂ ಕಾಂಪಸ್‌ನಲ್ಲಿ ಹೊಸ ಪದವಿ ಕಾಲೇಜನ್ನು ಆರಂಭಿಸಲಾಗುತ್ತಿದ್ದು, 2026ರ ಆಗಸ್ಟ್ ತಿಂಗಳಿಂದ ಮೊದಲ ವಸತಿ ಸಹಿತ ಬಿಎಸ್‌ಸಿ (B.Sc.) ಬ್ಯಾಚ್ ಪ್ರಾರಂಭವಾಗಲಿದೆ. ಇದುವರೆಗೆ ಕೇವಲ ಎಂಬಿಎ (MBA), ಪಿಎಚ್‌ಡಿ ಮತ್ತು ಉನ್ನತ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಐಐಎಂ ಬೆಂಗಳೂರು, ಈಗ ಪ್ಲಸ್ ಟು (12ನೇ ತರಗತಿ) ಮುಗಿಸಿದ ವಿದ್ಯಾರ್ಥಿಗಳಿಗಾಗಿ ಮೊದಲ ಬಾರಿಗೆ ಪದವಿ ಶಿಕ್ಷಣವನ್ನು ಪರಿಚಯಿಸುತ್ತಿದೆ.
ಈ ಕಾಲೇಜಿನಲ್ಲಿ ಸದ್ಯಕ್ಕೆ ಎರಡು ಕೋರ್ಸ್ಗಳನ್ನು ಆಫರ್ ಮಾಡಲಾಗುತ್ತಿದೆ:
- ಬಿಎಸ್‌ಸಿ ಎಕನಾಮಿಕ್ಸ್ (ಆನರ್ಸ್)
- ಬಿಎಸ್‌ಸಿ ಡಾಟಾ ಸೈನ್ಸ್ (ಆನರ್ಸ್)
ಬಿಎಸ್‌ಸಿ ಎಕನಾಮಿಕ್ಸ್ನಲ್ಲಿ ಡಾಟಾ ಸೈನ್ಸ್ ಮೈನರ್ ಸಬ್ಜೆಕ್ಟ್ ಇರುತ್ತದೆ. ಬಿಎಸ್‌ಸಿ ಡಾಟಾ ಸೈನ್ಸ್ ಕೋರ್ಸ್ನಲ್ಲಿ ಎಕನಾಮಿಕ್ಸ್ ಮೈನರ್ ಸಬ್ಜೆಕ್ಟ್ ಇರುತ್ತದೆ. ಈ ಎರಡೂ ಕೋರ್ಸ್ಗಳು ತಲಾ ನಾಲ್ಕು ವರ್ಷದ್ದಾಗಿರುತ್ತದೆ. ಈ ಎರಡೂ ಕೋರ್ಸ್ನಲ್ಲಿ ಡಾಟಾ ಸೈನ್ಸ್, ಎಕನಾಮಿಕ್ಸ್ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಷಯಗಳು ವಿವಿಧ ರೀತಿಯಲ್ಲಿ ಮಿಶ್ರವಾಗಿರುತ್ತದೆ. ಇವು 4 ವರ್ಷಗಳ ಸಂಪೂರ್ಣ ವಸತಿ ಸಹಿತ (Residential) ಪದವಿ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಉಳಿದು ಓದಬೇಕಾಗುತ್ತದೆ.
ಟಾಟಾ ಟ್ರಸ್ಟ್ಸ್ ನೀಡಿದ ಬೃಹತ್ ಕೊಡುಗೆ
ಈ ಹೊಸ ಪದವಿ ಶಾಲೆಗೆ (Undergraduate School) ದೇಶದ ಪ್ರತಿಷ್ಠಿತ ಟಾಟಾ ಟ್ರಸ್ಟ್ಸ್ ಸಂಸ್ಥೆ ಭಾರಿ ಧನಸಹಾಯ ನೀಡಿದೆ. ಐಐಎಂ ಬೆಂಗಳೂರು ಸಂಸ್ಥೆಯು ತನ್ನ ಸುವರ್ಣ ಮಹೋತ್ಸವದ (Golden Jubilee) ಅಂಗವಾಗಿ ಹಮ್ಮಿಕೊಂಡಿದ್ದ ನಿಧಿ ಸಂಗ್ರಹಣೆ ಅಭಿಯಾನದಲ್ಲಿ ಟಾಟಾ ಟ್ರಸ್ಟ್ಸ್ ಅತ್ಯಂತ ದೊಡ್ಡ ಮೊತ್ತದ ಕೊಡುಗೆಯನ್ನು ನೀಡುವ ಮೂಲಕ ಈ ಯೋಜನೆಗೆ ಬೆನ್ನೆಲುಬಾಗಿ ನಿಂತಿದೆ.
ಕೋರ್ಸ್‌ನ ವಿಶೇಷತೆಗಳೇನು?
ಬಿಎಸ್‌ಸಿ ಬ್ಯುಸಿನೆಸ್ ಅಂಡ್ ಡೇಟಾ ಸೈನ್ಸ್ ಹೆಸರಿನ ಈ ಕೋರ್ಸ್ ಕೇವಲ ಸಾಂಪ್ರದಾಯಿಕ ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಸೀಮಿತವಾಗಿರದೆ, ಇಂದಿನ ಕಾರ್ಪೊರೇಟ್ ಜಗತ್ತಿಗೆ ಅತ್ಯಗತ್ಯವಾಗಿರುವ ಡೇಟಾ ಸೈನ್ಸ್ (Data Science) ಮತ್ತು ಕೃತಕ ಬುದ್ಧಿಮತ್ತೆಯ (AI) ತತ್ವಗಳನ್ನು ಒಳಗೊಂಡಿರುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯಂತೆ, ವಿದ್ಯಾರ್ಥಿಗಳು 3 ವರ್ಷ ಮುಗಿಸಿ ಡಿಗ್ರಿ ಸರ್ಟಿಫಿಕೇಟ್‌ನೊಂದಿಗೆ ಹೊರಹೋಗಬಹುದು ಅಥವಾ 4 ವರ್ಷಗಳನ್ನು ಪೂರ್ಣಗೊಳಿಸಿ ಆನರ್ಸ್ (Honours) ಪದವಿ ಪಡೆಯಬಹುದು.
ಪ್ರವೇಶ ಪ್ರಕ್ರಿಯೆ ಮತ್ತು ಕ್ಯಾಂಪಸ್ ವಿವರ
- ಸೀಟುಗಳ ಸಂಖ್ಯೆ: ಮೊದಲ ವರ್ಷದ (2026ರ ಬ್ಯಾಚ್) ಕೋರ್ಸ್‌ಗೆ ಕೇವಲ 120 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ.
- ಹೊಸ ಕ್ಯಾಂಪಸ್: ಈ ಹೊಸ ಪದವಿ ಶಾಲೆಯು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿಯ ಪ್ರಮುಖ ಕ್ಯಾಂಪಸ್‌ನಲ್ಲೇ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಹಾಸ್ಟೆಲ್ ಮತ್ತು ಪ್ರಯೋಗಾಲಯದ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ಸಜ್ಜಾಗುತ್ತಿದೆ.
- ಅರ್ಜಿ ಸಲ್ಲಿಕೆ: ಪ್ರವೇಶ ಪರೀಕ್ಷೆ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ಅಧಿಕೃತ ವಿವರಗಳನ್ನು ಶೀಘ್ರದಲ್ಲೇ ಐಐಎಂ ಬೆಂಗಳೂರಿನ ಅಧಿಕೃತ ವೆಬ್‌ಸೈಟ್ (`iimb.ac.in`) ನಲ್ಲಿ ಪ್ರಕಟಿಸಲಾಗುವುದು.
ಐಐಎಂಬಿ ನಿರ್ದೇಶಕ ಪ್ರೊ| ಹೃಷಿಕೇಶ್ ಹೇಳಿಕೆ
ಐಐಎಂ ಬೆಂಗಳೂರು ಸಂಸ್ಥೆಯ ನಿರ್ದೇಶಕರಾದ ಪ್ರೊ. ಹೃಷಿಕೇಶ್ ಟಿ. ಕೃಷ್ಣನ್ ಅವರು, “ಟಾಟಾ ಟ್ರಸ್ಟ್ಸ್ ಬೆಂಬಲದೊಂದಿಗೆ ಆರಂಭವಾಗುತ್ತಿರುವ ಈ ಪದವಿ ಶಾಲೆಯು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ. ಉದ್ಯಮ ರಂಗದ ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಬಲ್ಲ ಯುವ ನಾಯಕರನ್ನು ಸಿದ್ಧಪಡಿಸುವುದು ನಮ್ಮ ಗುರಿ” ಎಂದು ತಿಳಿಸಿದ್ದಾರೆ.
ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಹೇಳಿಕೆ
ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು, “ಟಾಟಾ ಟ್ರಸ್ಟ್ಸ್ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಟಾಟಾ ಮೆಮೋರಿಯಲ್ ಆಸ್ಪತ್ರೆ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಂತಹ ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳನ್ನು ಬೆಂಬಲಿಸುತ್ತಾ ಬಂದಿದೆ. ಐಐಎಂಬಿಯ ಈ ಹೊಸ ಪ್ರಯತ್ನಕ್ಕೆ ನಾವು ನೀಡುತ್ತಿರುವ ಬೆಂಬಲವೂ ಅದೇ ಆಶಯವನ್ನು ಪ್ರತಿಬಿಂಬಿಸುತ್ತದೆ. ಯಾವುದೇ ಒಂದು ಸಂಸ್ಥೆಯು ಆರಂಭಿಕ ಹಾಗೂ ರೂಪುಗೊಳ್ಳುವ ಹಂತದಲ್ಲಿರುವಾಗ ದೊರೆಯುವ ಬಂಡವಾಳವು ಕೇವಲ ಒಂದು ಕಟ್ಟಡ ಅಥವಾ ಬಜೆಟ್ ಅನ್ನು ಮಾತ್ರ ರೂಪಿಸುವುದಿಲ್ಲ; ಬದಲಿಗೆ ಆ ಸಂಸ್ಥೆಯ ಚಾರಿತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನೇ ಸೃಷ್ಟಿಸುತ್ತದೆ. ಅಂತಹ ಶಾಶ್ವತ ಮೌಲ್ಯವುಳ್ಳ ಸಂಸ್ಥೆಗಳನ್ನು ಕಟ್ಟುವುದು ನಮ್ಮ ಉದ್ದೇಶವಾಗಿದೆ” ಎಂದರು.
ಟಾಟಾ ಟ್ರಸ್ಟ್ಸ್ ಕೊಡುಗೆಯನ್ನು ಸ್ವಾಗತಿಸಿದ ಡಾ. ದೇವಿ ಶೆಟ್ಟಿ
ಟಾಟಾ ಟ್ರಸ್ಟ್ಸ್‌ನ ಈ ಮಹತ್ವದ ಕೊಡುಗೆಯನ್ನು ಸ್ವಾಗತಿಸಿದ ಐಐಎಂ ಬೆಂಗಳೂರಿನ ಆಡಳಿತ ಮಂಡಳಿ (ಬೋರ್ಡ್ ಆಫ್ ಗವರ್ನರ್ಸ್) ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, “ಟಾಟಾ ಟ್ರಸ್ಟ್ಸ್ ನೀಡಿರುವಂತಹ ಅಭೂತಪೂರ್ವ ಆರ್ಥಿಕ ನೆರವು, ಐಐಎಂ ಬೆಂಗಳೂರಿನಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ದೃಢವಾಗಿ ಮುನ್ನಡೆಸಲು ಅತ್ಯಗತ್ಯವಾಗಿವೆ. ಪದವಿಪೂರ್ವ ಹಂತದಲ್ಲೇ ಪ್ರತಿಭೆಗಳನ್ನು ಪೋಷಿಸಲು ಮತ್ತು ದತ್ತಾಂಶ ಆಧಾರಿತ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಚಿಂತಕರ ದಂಡನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಈ ಜಂಟಿ ಸಹಭಾಗಿತ್ವದ ಕುರಿತು ಮಾತನಾಡಿದ ಟಾಟಾ ಟ್ರಸ್ಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿದ್ದಾರ್ಥ್ ಶರ್ಮಾ ಅವರು, “ಟಾಟಾ ಟ್ರಸ್ಟ್ಸ್‌ನಲ್ಲಿ ನಾವು ಯಾವಾಗಲೂ ಮಹತ್ವಾಕಾಂಕ್ಷಿ ದೃಷ್ಟಿಕೋನ ಹಾಗೂ ವಾಸ್ತವಿಕ ಸವಾಲುಗಳಿಗೆ ಪರಿಹಾರ ನೀಡುವಂತಹ ಯೋಜನೆಗಳನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಐಐಎಂ ಬೆಂಗಳೂರು ಸಂಸ್ಥೆಯು ತನ್ನ ಶೈಕ್ಷಣಿಕ ಶಿಸ್ತು ಮತ್ತು ಉತ್ಕೃಷ್ಟತೆಯನ್ನು ಪದವಿಪೂರ್ವ ಶಿಕ್ಷಣಕ್ಕೂ ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಈ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಜ್ಞಾನದ ಮೇಲೆ ಹಾಗೂ ಭಾರತದ ಭವಿಷ್ಯವನ್ನು ರೂಪಿಸುವ ಯುವ ಪೀಳಿಗೆಯ ಮೇಲೆ ಹೂಡಿಕೆ ಮಾಡುವುದು ನಾವು ಮಾಡಬಹುದಾದ ಅತ್ಯಂತ ಅರ್ಥಪೂರ್ಣ ಕೆಲಸಗಳಲ್ಲಿ ಒಂದಾಗಿದೆ” ಎಂದು ಅಭಿಪ್ರಾಯಪಟ್ಟರು.
ನೂತನ ಪಠ್ಯಕ್ರಮದ ವಿನ್ಯಾಸದ ಕುರಿತು ವಿವರಿಸಿದ ಐಐಎಂ ಬೆಂಗಳೂರಿನ ಪ್ರಭಾರ ನಿರ್ದೇಶಕ ಪ್ರೊ. ಯು. ದಿನೇಶ್ ಕುಮಾರ್ ಅವರು, “ನಾವು ರೂಪಿಸಿರುವ ಕೋರ್ಸ್ ಗಳು ವಿದ್ಯಾರ್ಥಿಗಳಿಗೆ ಕೇವಲ ತಾಂತ್ರಿಕ ನೈಪುಣ್ಯತೆಯನ್ನು ನೀಡುವುದಷ್ಟೇ ಅಲ್ಲದೆ, ಯುವ ಮನಸ್ಸುಗಳು ಸೂಕ್ತ ಪ್ರಶ್ನೆಗಳನ್ನು ಕೇಳುವಂತೆ, ಸಂಕೀರ್ಣತೆಗಳನ್ನು ಅರ್ಥೈಸಿಕೊಳ್ಳುವಂತೆ ಮತ್ತು ಪುರಾವೆಗಳ ಆಧಾರದ ಮೇಲೆ ಮುನ್ನಡೆಯುವಂತೆ ಸಜ್ಜುಗೊಳಿಸುತ್ತವೆ. ಟಾಟಾ ಟ್ರಸ್ಟ್ಸ್ ನೀಡಿರುವ ಈ ಬೆಂಬಲವು ನಮಗೆ ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧನಾ ಮೂಲಸೌಕರ್ಯ ಮತ್ತು ಕ್ಯಾಂಪಸ್ ವಾತಾವರಣದ ಮೇಲೆ ಬಂಡವಾಳ ಹೂಡಲು ಅನುವು ಮಾಡಿಕೊಡುತ್ತದೆ. ಇದು ಭಾರತದ ಅಭಿವೃದ್ಧಿಯ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುವ ಮತ್ತು ಜಾಗತಿಕ ಸಾಮರ್ಥ್ಯಗಳನ್ನು ಬಲಪಡಿಸಲು ಬದ್ಧವಾಗಿರುವ ಅತ್ಯಾಧುನಿಕ ಕಲಿಕಾ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗಲಿದೆ” ಎಂದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Wed, 17 June 26




