ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್

|

Updated on: Sep 10, 2023 | 12:13 PM

International Corridor From India: ಜಗತ್ತಿನ 65 ದೇಶಗಳನ್ನು ಸಂಪರ್ಕಿಸುವ ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಪ್ರಾಜೆಕ್ಟ್ ಅನ್ನ ಜಿ20 ಸಭೆಯಲ್ಲಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತ, ಅದಕ್ಕೆ ಪರ್ಯಾಯವಾದ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್ ಅನ್ನು ಘೋಷಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ಮಾತನಾಡುತ್ತಾ ಹೊಸ ಆರ್ಥಿಕ ಕಾರಿಡಾರ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್
ನರೇಂದ್ರ ಮೋದಿ
Follow us on

ನವದೆಹಲಿ, ಸೆಪ್ಟೆಂಬರ್ 10: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ ಜಿ20 ಶೃಂಗಸಭೆ (G20 Summit) ನಾನಾ ಕಾರಣಗಳಿಗೆ ಐತಿಹಾಸಿಕ ಎನಿಸಿದೆ. ಜಗತ್ತಿನ ಬಲಾಢ್ಯ ದೇಶಗಳು ಇದೇ ಮೊದಲ ಬಾರಿಗೆ ಭಾರತವನ್ನು ಜಾಗತಿಕ ನಾಯಕನ ಸ್ಥಾನದಲ್ಲಿ ಗುರುತಿಸಿವೆ. ಜಿ20 ಸಭೆಯ ಅಧ್ಯಕ್ಷನಾಗಿ ಭಾರತ ನೈಜ ನಾಯಕನಾಗಿ ಸ್ಪಷ್ಟ ರೂಪು ಪಡೆದಿದೆ. ಹೆಚ್ಚು ಅಂಶಗಳಿಗೆ ಒಮ್ಮತ ಸಿಕ್ಕಿದ್ದು, ಅಂತಾರಾಷ್ಟ್ರೀಯ ಜೈವಿಕ ಅನಿಲಗಳ ಕೂಟ ಘೋಷಿಸಿದ್ದು, ಆಫ್ರಿಕನ್ ಯೂನಿಯನ್​ಗೆ ಜಿ20 ಸದಸ್ಯತ್ವ ಕೊಟ್ಟಿದ್ದು ಇವೇ ಮುಂತಾದ ಸಂಗತಿಗಳು ಭಾರತದ ಪ್ರಭಾವಳಿಗೆ ಕನ್ನಡಿ ಹಿಡಿದಂತಿವೆ. ಹಾಗೆಯೇ, ಜಿ20 ಗುಂಪಿನೊಳಗೆಯೇ ಚೀನಾ ಏಕಾಂಗಿಯಾಗುವ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಈ ನಿಟ್ಟಿನಲ್ಲಿ ಚೀನಾದ ಬಹಳ ಮಹತ್ವಾಂಕ್ಷಿ ಒನ್ ಬೆಲ್ಟ್, ಒನ್ ರೋಡ್ (ಸಿಲ್ಕ್ ರೋಡ್) ಯೋಜನೆಗೆ ಪ್ರತಿಯಾಗಿ ಭಾರತ ಹೊಸ ಆರ್ಥಿಕ ರಹದಾರಿ ಯೋಜನೆಯನ್ನು ಘೋಷಿಸಿದೆ.

ಪಶ್ಚಿಮ ಏಷ್ಯಾ ಮೂಲಕ ಭಾರತ ಮತ್ತು ಯೂರೋಪ್ ನಡುವೆ ಆರ್ಥಿಕ ಕಾರಿಡಾರ್ ನಿರ್ಮಿಸುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಜಂಟಿಯಾಗಿ ಪ್ರಸ್ತಾಪ ಮಾಡಿದ್ದಾರೆ.

‘ಹಲವು ದಕ್ಷಿಣ ದೇಶಗಳಲ್ಲಿ, ಅವರುಗಳ ವಿಶ್ವಾಸಾರ್ಹ ಸಹವರ್ತಿಯಾಗಿ ನಾವು ಇಂಧನ, ರೈಲ್ವೆ, ನೀರು, ಟೆಕ್ನಾಲಜಿ ಪಾರ್ಕ್ ಇತ್ಯಾದಿ ಕ್ಷೇತ್ರಗಳಲ್ಲಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬೇಡಿಕೆಗೆ ಅನುಗುಣವಾಗಿ ಮತ್ತು ಪಾರದರ್ಶಕವಾಗಿ ನಾವು ಈ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದ ಪ್ರಧಾನಿ ಮೋದಿ ಅವರು, ಗ್ಲೋಬಲ್ ಸೌತ್​ನ ದೇಶಗಳ ಮಧ್ಯೆ ಸೌಕರ್ಯ ವ್ಯವಸ್ಥೆಯಲ್ಲಿರುವ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಈ ಫೋರಂಗೆ ಇದೆ ಎಂದಿದ್ದಾರೆ.

ಇದನ್ನೂ ಓದಿ: 5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ

ಇದೇ ವೇಳೆ ಪ್ರಧಾನಿ ಮೋದಿ ಚೀನಾ ಹಾಗೂ ಅದರ ಸಿಲ್ಕ್ ರೋಡ್ ಪ್ರಾಜೆಕ್ಟ್ ಅನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದು, ಯೋಜನೆ ಹೆಸರಿನಲ್ಲಿ ವಿವಿಧ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಿ ಅಂಕೆಗೆ ತೆಗೆದುಕೊಳ್ಳುವ ವರ್ತನೆ ಆಗುತ್ತಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಮೊದಲಾದ ದೇಶಗಳು ಸಾಲದ ಸುಳಿಗೆ ಸಿಲುಕಿರುವುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

ಏನಿದು ಚೀನಾದ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್?

ಚೀನಾದ ಒನ್ ಬೆಲ್ಟ್ ಒನ್ ರೋಡ್ (OBOR) ಪ್ರಾಜೆಕ್ಟ್ ಪೂರ್ವ ಏಷ್ಯಾದಿ, ಪೂರ್ವ ಆಫ್ರಿಕಾ ಮತ್ತು ಮಧ್ಯ ಯೂರೋಪ್​ನ 65 ದೇಶಗಳನ್ನು ಬೆಸೆಯುತ್ತದೆ. ಇದರ ಯೋಜನೆಗಳು ಚಾಲ್ತಿಯಲ್ಲಿದ್ದು, 2049ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಅಂದಾಜು ವೆಚ್ಚ 4ರಿಂದ 5 ಟ್ರಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ 300ರಿಂದ 500 ಲಕ್ಷಕೋಟಿ ರುಪಾಯಿ ವೆಚ್ಚ ಆಗಬಹುದು. ಆಯಾ ದೇಶಗಳಲ್ಲಿ ಇದರ ಯೋಜನೆಗಳನ್ನು ಜಾರಿಗೊಳಿಸಲು ಆಯಾ ದೇಶವೇ ವೆಚ್ಚ ಭರಿಸಬೇಕು. ಅಗತ್ಯಬಿದ್ದರೆ ಚೀನಾ ಸಾಲ ಕೊಡುತ್ತದೆ.

ಇದನ್ನೂ ಓದಿ: ಜಿ20 ಶೃಂಗಸಭೆಯು ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ: ಜೋ ಬೈಡನ್

ಈ ದುಬಾರಿ ಯೋಜನೆಗಳನ್ನು ಜಾರಿಗೊಳಿಸಲು ಹಣ ಇಲ್ಲದ ಪಾಕಿಸ್ತಾನದಂಥ ದೇಶಗಳು ಚೀನಾದಿಂದ ಸಾಲ ಪಡೆಯುತ್ತಿವೆ. ಪಾಕಿಸ್ತಾನದ ಇತ್ತೀಚಿನ ಹಣಕಾಸು ಬಿಕಟ್ಟಿಗೆ ಚೀನಾ ಸಾಲ ಒಂದು ಪ್ರಮುಖ ಕಾರಣವಾಗಿದೆ. ಸಾಲ ತೀರಿಸದ ದೇಶಗಳ ಕೆಲ ಆಸ್ತಿಗಳನ್ನು ಚೀನಾ ವಶಕ್ಕೆ ತೆಗೆದುಕೊಳ್ಳುತ್ತದೆ. ಈ ರೀತಿ ಸಾಲ ತಂತ್ರಗಾರಿಕೆ ಮೂಲಕ ಚೀನಾ ವಿವಿಧ ದೇಶಗಳನ್ನು ಹತೋಟಿಗೆ ತೆಗೆದುಕೊಳ್ಳಲು ಹೊರಟಿದೆ ಎನ್ನುವ ಆರೋಪಗಳಿವೆ.

ಭಾರತ ಜಿ20 ಸಭೆಯಲ್ಲಿ ಈ ಸಂಗತಿಯನ್ನು ಸೂಕ್ಷ್ಮವಾಗಿ ಉಲ್ಲೇಖಿಸಿ ಮಾತನಾಡಿದ್ದು ವಿಶೇಷವಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ