ನವದೆಹಲಿ, ಜನವರಿ 27: ಭಾರತದಲ್ಲಿ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳ ವಿಶ್ವಾದ್ಯಂತ ಸಾಕಷ್ಟು ಜನರ ಕುತೂಹಲ, ಆಸಕ್ತಿಗಳನ್ನು ಕೆರಳಿಸುತ್ತದೆ. ಅದರಲ್ಲೂ ಈ ಬಾರಿಯ ಮಹಾಕುಂಭವಂತೂ ವಿಶ್ವದಲ್ಲೇ ಅತಿದೊಡ್ಡ ಮಾನವ ಸಮೂಹವನ್ನು ಸೇರಿಸಿದೆ. ಭಾರತದ ಎರಡನೇ ಅತಿದೊಡ್ಡ ಶ್ರೀಮಂತ, ಹಾಗೂ ಹಲವು ಉದ್ದಿಮೆಗಳ ಒಡೆಯ ಗೌತಮ್ ಅದಾನಿ ಈ ಕುಂಭಮೇಳ ಕಂಡು ಮೂಕವಿಸ್ಮಿತರಾಗಿದ್ದಾರೆ. ತಮ್ಮ ಲಿಂಕ್ಡ್ಇನ್ ಅಕೌಂಟ್ನಲ್ಲಿ ಕುಂಭಮೇಳದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಆದ್ಮಾತ್ಮಿಕ ಮೂಲಸೌಕರ್ಯ (ಸ್ಪಿರಿಚುವಲ್ ಇನ್ಫ್ರಾಸ್ಟ್ರಕ್ಚರ್) ಎಂದು ಬಣ್ಣಿಸಿದ್ದಾರೆ.
‘ಕುಂಭಮೇಳ ವಿಚಾರದ ಬಗ್ಗೆ ಪ್ರತೀ ಬಾರಿ ನಾನು ಯೋಚಿಸಿದಾಗ, ನಮ್ಮ ಪೂರ್ವಜರ ದೃಷ್ಟಿಕೋನ ನೆನದು ವಿಸ್ಮಿತಗೊಳ್ಳುತ್ತೇನೆ. ಭಾರತದಾದ್ಯಂತ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಜಾಲಗಳನ್ನು ನಿರ್ಮಿಸಿರುವಂತಹ ನನಗೆ ಈ ಆದ್ಮಾತ್ಮಿಕ ಮೂಲಸೌಕರ್ಯದ ಭವ್ಯತೆಯಿಂದ ಆವಾಕ್ಕಾಗುತ್ತದೆ’ ಎಂದು ಗೌತಮ್ ಅದಾನಿ ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.
‘ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನವರು ಕುಂಭಮೇಳದ ವ್ಯವಸ್ಥೆಯನ್ನು ಅಧ್ಯಯನ ಮಾಡುವಾಗ, ಅದರ ಅಗಾಧತೆ ಕಂಡು ಬೆರಗಾಗಿದ್ದರು. ಭಾರತೀಯನಾಗಿ ನಾನು ಇನ್ನೂ ಆಳಕ್ಕೆ ಹೋಗುತ್ತೇನೆ. ಈ ಸಾರ್ವಕಾಲಿಕ ತತ್ವವನ್ನೇ ಅಪ್ಪಿಕೊಳ್ಳಲು ಅದಾನಿ ಗ್ರೂಪ್ ಬಯಸುತ್ತದೆ’ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?
ಪ್ರತೀ 12 ವರ್ಷಕ್ಕೊಮ್ಮೆ ನ್ಯೂಯಾರ್ಕ್ಗಿಂತಲೂ ದೊಡ್ಡದಾದ ತಾತ್ಕಾಲಿಕ ನಗರವೊಂದು ಪವಿತ್ರ ನದಿಗಳಲ್ಲಿ ನಿರ್ಮಾಣವಾಗಿಬಿಡುತ್ತೆ. ಯಾವ ಬೋರ್ಡ್ ಮೀಟಿಂಗ್ ಇರಲ್ಲ, ಪವರ್ ಪಾಯಿಂಟ್ ಪ್ರೆಸೆಂಟೇಶನ್ ಇರಲ್ಲ. ವೆಂಚರ್ ಕ್ಯಾಪಿಟಲ್ ಇರಲ್ಲ. ಶತಮಾನಗಳಿಂದ ಹಂಚಿಕೆಯಾಗಿ ಬಂದ ಅನುಭವವೇ ಈ ಅಗಾಧ ವ್ಯವಸ್ಥೆಯನ್ನು ನಿಭಾಯಿಸುವ ಶಕ್ತಿ ನೀಡಿದೆ ಎಂದು ಅದಾನಿ ಗ್ರೂಪ್ ಸಂಸ್ಥಾಪಕರು ಲಿಂಕ್ಡ್ ಇನ್ನಲ್ಲಿ ಬರೆದಿದ್ದಾರೆ.
ಗೌತಮ್ ಅದಾನಿ ತಮ್ಮ ಬ್ಲಾಗ್ನಲ್ಲಿ ಕುಂಭಮೇಳ ನಾಯಕತ್ವದ ಮೂರು ಪ್ರಬಲ ಸ್ತಂಭಗಳನ್ನು ಹೆಸರಿಸಿದ್ದಾರೆ. ಒಂದು, ಆತ್ಮಗಳ ಸಮ್ಮಿಳನ, ಎರಡನೆಯದು ಸುಸ್ಥಿರತೆ ಮತ್ತು ಮೂರನೆಯದು ಸೇವಾ ನಾಯಕತ್ವ ಎಂದಿದ್ದಾರೆ.
20 ಕೋಟಿ ಜನರು ಸೇವಾ ಮನೋಭಾವದಲ್ಲಿ ಮತ್ತು ಏಕ ಧ್ಯೇಯದೊಂದಿಗೆ ಒಟ್ಟಿಗೆ ಸೇರಿದರೆ ಅದು ಒಂದು ಬೃಹತ್ ಕಾರ್ಯಕ್ರಮ ಎನಿಸುವುದು ಮಾತ್ರವಲ್ಲ, ಆತ್ಮಗಳ ವಿಶೇಷ ಸಮ್ಮಿಳನ ಎನಿಸುತ್ತದೆ ಎಂಬುದು ಅದಾನಿ ಅನಿಸಿಕೆ.
ಕುಂಭಮೇಳವು ನಾಯಕತ್ವ ಹೇಗಿರಬೇಕು ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ. ಆದೇಶ ನೀಡುವುದಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಸಾಮರ್ಥ್ಯವೇ ನೈಜ ನಾಯಕತ್ವ ಎನಿಸುತ್ತದೆ. ಸ್ಥಳೀಯ ಆಡಳಿತಗಳು, ವಿವಿಧ ಅಖಾಡಗಳು ಬಹಳ ಸೌಹಾರ್ದಯುತವಾಗಿ ಕೆಲಸ ಮಾಡಿದವು. ನಾಯಕತ್ವಕ್ಕೆ ಸೇವಾ ಗುಣ ಇರಬೇಕು ಎನ್ನುವುದನ್ನು ಕುಂಭಮೇಳ ಕಲಿಸುತ್ತದೆ ಎಂದು ಗೌತಮ್ ಅದಾನಿ ಕಂಡುಕೊಂಡಿದ್ದಾರೆ.
ಸಮಗ್ರ ಬೆಳವಣಿಗೆ, ಆದ್ಮಾತ್ಮಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿ ವಿಶ್ವಾಸ ಇವು ಕುಂಭ ಮೇಳದಿಂದ ಜಾಗತಿಕ ಬಿಸಿನೆಸ್ಗಳು ಕಲಿಯಬಹುದಾದ ಪಾಠಗಳು ಎಂದು ಗೌತಮ್ ಅದಾನಿ ವ್ಯಾಖ್ಯಾನಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು
ಸಾಧುಗಳಿಂದ ಹಿಡಿದು ಸಿಇಒಗಳವರೆಗೂ, ಹಳ್ಳಿಗರಿಂದ ಹಿಡಿದು ವಿದೇಶೀ ಪ್ರವಾಸಿಗರಿಗೂ ಎಲ್ಲರನ್ನೂ ಕುಂಭಮೇಳ ಸಮಾನವಾಗಿ ಬರಮಾಡಿತು ಎಂದೆನ್ನುವ ಗೌತಮ್ ಅದಾನಿ, ಇದು ಒಳ್ಳೆಯತನದೊಂದಿಗೆ ಪ್ರಗತಿ ಎನ್ನುವ ತಮ್ಮ ಸಂಸ್ಥೆಯ ಧ್ಯೇಯಕ್ಕೆ ಹೋಲಿಸಿದ್ದಾರೆ.
ಭಾರತ ಜಾಗತಿಕ ಸೂಪರ್ ಪವರ್ ದೇಶವಾಗುವತ್ತ ಹೆಜ್ಜೆ ಹಾಕುತ್ತಿದೆ. ಈ ಹೊತ್ತಿನಲ್ಲಿ, ನಾವೇನು ಕಟ್ಟುತ್ತೇವೆ ಎಂಬುದಷ್ಟೇ ಅಲ್ಲ, ನಾವೇನು ಉಳಿಸಿಕೊಂಡು ಹೋಗುತ್ತೇವೆ ಎನ್ನುವುದೇ ನಮ್ಮ ಬಂಡವಾಳವಾಗುತ್ತದೆ. ಕುಂಭವು ಧಾರ್ಮಿಕ ಸಮಾಗಮ ಮಾತ್ರವಲ್ಲ, ಸುಸ್ಥಿರವಾದ ನಾಗರಿಕತೆಗೆ ಒಂದು ಬ್ಲೂಪ್ರಿಂಟ್ ಇದ್ದಂತೆ ಎಂದು ಅದಾನಿ ಗ್ರೂಪ್ ಮುಖ್ಯಸ್ಥರು ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಗೌತಮ್ ಅದಾನಿ ಅವರ ಮೂಲ ಬ್ಲಾಗ್ ಪೋಸ್ಟ್ನ ಲಿಂಕ್ ಇಲ್ಲಿದೆ: linkedin.com/pulse/spiritual-infrastructure-how-kumbh-inspires-indias-leadership-adani-z3lvf/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Mon, 27 January 25