India’s exports: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು
India's exports hit record high: 2024ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಪೆಟ್ರೋಲಿಮೇತರ ಉತ್ಪನ್ನಗಳ ರಫ್ತು ಮಲ್ಯ 34 ಬಿಲಿಯನ್ ಡಾಲರ್ ಇದೆ. ಇದು ಹೊಸ ದಾಖಲೆಯಾಗಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಅವಧಿಯಲ್ಲಿ ಈ ಉತ್ಪನ್ನಗಳ ರಫ್ತು ಮೌಲ್ಯ ಹೊಸ ದಾಖಲೆ ಬರೆದಿದೆ. ಜಾಗತಿಕವಾಗಿ ವ್ಯಾಪಾರ ಪ್ರಮಾಣ ಕಡಿಮೆ ಆಗಿರುವ ನಡುವೆಯೂ ಭಾರತದಿಂದ ರಫ್ತು ದಾಖಲೆಯಾಗಿರುವುದು ಗಮನಾರ್ಹ.
ನವದೆಹಲಿ, ಜನವರಿ 27: ಭಾರತದಿಂದ ರಫ್ತು ಪ್ರಮಾಣ ಸಾಕಷ್ಟು ಏರಿಕೆ ಆಗುತ್ತಿದೆ. 2024ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಸರಕು ರಫ್ತಿನ ದತ್ತಾಂಶ ಗಮನಾರ್ಹ ಎನಿಸಿದೆ. ಹತ್ತು ಪ್ರಮುಖ ಉತ್ಪನ್ನಗಳ ರಫ್ತು ಮೌಲ್ಯ ಭಾರತೀಯ ವ್ಯಾಪಾರ ಇತಿಹಾಸದಲ್ಲೇ ಅತಿ ಹೆಚ್ಚು ಎನಿಸಿದೆ. ಪೆಟ್ರೋಲಿಯಮೇತರ ಉತ್ಪನ್ನಗಳ ರಫ್ತು ಮೌಲ್ಯ ಕೂಡ ಅತ್ಯಧಿಕ ಎನಿಸಿದೆ. ಗಮನಾರ್ಹ ಸಂಗತಿ ಎಂದರೆ ಜಾಗತಿಕವಾಗಿ ರಫ್ತು ಮಾರುಕಟ್ಟೆ ಇಳಿಮುಖವಾದರೂ ಭಾರತ ದಾಖಲೆಗಳನ್ನು ಮಾಡಿದೆ.
‘ಪೆಟ್ರೋಲಿಯಮೇತರ ಉತ್ಪನ್ನಗಳ ರಫ್ತು ಮೌಲ್ಯ ಅಕ್ಟೋಬರ್ ತಿಂಗಳಲ್ಲಿ 34.61 ಬಿಲಿಯನ್ ಡಾಲರ್ ಇದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಅವಧಿಯಲ್ಲೂ ನಾನ್ ಪೆಟ್ರೋಲಿಯಂ ಪ್ರಾಡಕ್ಟ್ಗಳ ರಫ್ತಿನಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ. ಒಟ್ಟಾರೆ ರಫ್ತು ಉತ್ತಮವಾಗಿ ಆಗುತ್ತಿದೆ. ಈ ವರ್ಷ (ಮಾರ್ಚ್ವರೆಗೆ) ನಮ್ಮ ರಫ್ತು 800 ಬಿಲಿಯನ್ ಡಾಲರ್ ದಾಟಬಹುದು’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನೀಲ್ ಬರ್ತವಾಲ್ ಹೇಳಿದ್ದಾರೆ.
2024ರ ಅಕ್ಟೋಬರ್ ತಿಂಗಳಲ್ಲಿ ಎಂಜಿನಿಯರಿಂಗ್ ಸರಕುಗಳ ರಫ್ತು ಶೇ. 39.37ರಷ್ಟು ಹೆಚ್ಚಿದೆ. ಎಲೆಕ್ಟ್ರಾನಿಕ್ ಸರಕು ಶೇ. 45.69; ಸಾವಯವ ಮತ್ತು ನಿರಯವ ರಾಸಾಯನಿಕಗಳು ಶೇ. 27.35; ಹಾಗೂ ಸಿದ್ಧ ಉಡುಪುಗಳ ರಫ್ತು ಶೇ. 35ರಷ್ಟು ಹೆಚ್ಚಿವೆ.
ಜಾಗತಿಕವಾಗಿ ಸರಕು ವ್ಯಾಪಾರ ಕುಂಠಿತ…
ಭಾರತ ತನ್ನ ರಫ್ತಿನಲ್ಲಿ ಹೊಸ ದಾಖಲೆ ಬರೆದಿರುವುದು ಮಾತ್ರವಲ್ಲ, ಅದು ಆಗಿರುವ ಸಂದರ್ಭ ಕೂಡ ಗಮನಾರ್ಹವಾದುದು. ಜಾಗತಿಕವಾಗಿ ಸರಕು ವ್ಯಾಪಾರ ಬಹಳ ಮಂದಗೊಂಡಿದೆ. 2023ರಲ್ಲಿ ಒಟ್ಟಾರೆ ಸರಕು ವ್ಯಾಪಾರ ಮೌಲ್ಯ ಶೇ. 5ರಷ್ಟು ಕುಸಿದಿತ್ತು. 2024ರಲ್ಲಿ ಶೇ. 2ರಷ್ಟು ಮಾತ್ರವೇ ಏರಿಕೆ ಆಗಿದೆ. 2025ರಲ್ಲಿ ಸ್ಪಷ್ಟತೆ ಇಲ್ಲ. ಅನಿಶ್ಚಿತ ಸ್ಥಿತಿ ಇದೆ. ಇವುಗಳ ನಡುವೆಯೂ ಭಾರತದ ಸರಕು ರಫ್ತು ಉತ್ತಮ ರೀತಿಯಲ್ಲಿ ಆಗಿದೆ.
ಇದನ್ನೂ ಓದಿ: ಐಫೋನ್ ಬಿಡಿಭಾಗಗಳ ತಯಾರಿಕೆ; ಭಾರತ್ ಫೋರ್ಜ್ನೊಂದಿಗೆ ಆ್ಯಪಲ್ ಮಾತುಕತೆ
ಪಕ್ಕಾ ವ್ಯಾಪಾರ ತಂತ್ರ ಅನುಸರಿಸುತ್ತಿದೆಯಾ ಭಾರತ?
ಜಾಗತಿಕವಾಗಿ ಶೇ. 60ರಷ್ಟು ಆಮದುಗಳನ್ನು ಮಾಡುತ್ತಿರುವ 20 ದೇಶಗಳತ್ತ ಸರ್ಕಾರ ಗಮನ ಹರಿಸಿದೆ. ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಪ್ಲಾಸ್ಟಿಕ್, ಔಷಧ, ಜವಳಿ ಇತ್ಯಾದಿ ಆರು ಪ್ರಮುಖ ಸೆಕ್ಟರ್ಗಳನ್ನು ಗುರುತಿಸಿ ರಫ್ತುಗಳನ್ನು ಹೆಚ್ಚಿಸುವತ್ತ ಸರ್ಕಾರ ಸೂಕ್ತ ಉತ್ತೇಜನ ಮತ್ತು ನೀತಿಗಳನ್ನು ರೂಪಿಸಿದೆ. ಇದು ಭಾರತದ ರಫ್ತು ಹೆಚ್ಚಳಕ್ಕೆ ಕಾರಣ ಎಂದು ಭಾವಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ