ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವಧಿ ಫೆ. 28ಕ್ಕೆ ಅಂತ್ಯ; ಮುಂದುವರಿಯುವ ಸಾಧ್ಯತೆ ಇಲ್ಲ; ಸರ್ಕಾರದಿಂದ ಬೇರೆ ಅಭ್ಯರ್ಥಿಗಳಿಗೆ ಹುಡುಕಾಟ
Govt invites applications for SEBI chairman post: ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಸಂಸ್ಥೆಯ ಛೇರ್ಮನ್ ಹುದ್ದೆಗೆ ಸರ್ಕಾರ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗರಿಷ್ಠ ಅಧಿಕಾರಾವಧಿ ಐದು ವರ್ಷಕ್ಕೆ ಈ ಹುದ್ದೆ ಇರಲಿದೆ. ಫೆಬ್ರುವರಿ 17ರೊಳಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಈಗಿನ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಫೆಬ್ರುವರಿ 28ಕ್ಕೆ ಮುಗಿಯಲಿದೆ. ಅವರನ್ನು ಮುಂದುವರಿಸುವ ಸಾಧ್ಯತೆ ಇದ್ದಂತಿಲ್ಲ.
ನವದೆಹಲಿ, ಜನವರಿ 27: ಭಾರತದ ಷೇರು ವಿನಿಮಯ ನಿಯಂತ್ರಕ ಪ್ರಾಧಿಕಾರವಾದ ಸೆಬಿಯ ಮುಖ್ಯಸ್ಥ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಿನ ಛೇರ್ಮನ್ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಫೆಬ್ರುವರಿ 28ಕ್ಕೆ ಮುಗಿಯಲಿದೆ. ಸರ್ಕಾರ ಅವರ ಸ್ಥಾನಕ್ಕೆ ಬೇರೆ ಅಭ್ಯರ್ಥಿಗಳನ್ನು ಹುಡುಕಲು ಅರ್ಜಿಗಳನ್ನು ಅಹ್ವಾನಿಸಿದೆ. ಮಾಧಬಿ ಬುಚ್ ಅವರನ್ನು ಮುಖ್ಯಸ್ಥೆಯಾಗಿ ಮುಂದುವರಿಸುವ ಆಸಕ್ತಿ ಸರ್ಕಾರಕ್ಕೆ ಇದ್ದಂತಿಲ್ಲ.
ಹಣಕಾಸು ಸಚಿವಾಲಯ ಇಂದು ಸೆಬಿ ಛೇರ್ಮನ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರುವರಿ 17ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕೆಂದು ತಿಳಿಸಿದೆ. ಗರಿಷ್ಠ ಐದು ವರ್ಷಗಳಿಗೆ ಈ ಹುದ್ದೆಯ ಅವಧಿ ಇರಲಿದೆ. ತಿಂಗಳಿಗೆ 5,62,500 ರೂ ಸಂಬಳ ಇರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಐಫೋನ್ ಬಿಡಿಭಾಗಗಳ ತಯಾರಿಕೆ; ಭಾರತ್ ಫೋರ್ಜ್ನೊಂದಿಗೆ ಆ್ಯಪಲ್ ಮಾತುಕತೆ
ಕುತೂಹಲ ಎಂದರೆ, ಮಾಧಬಿ ಬುಚ್ ಅವರಿಗಿಂತ ಮುಂಚೆ ಸೆಬಿ ಛೇರ್ಮನ್ಗಳಾಗಿದ್ದ ಅಜಯ್ ತ್ಯಾಗಿ ಹಾಗೂ ಯು.ಕೆ. ಸಿನ್ಹಾ ಇಬ್ಬರೂ ಕೂಡ ಅವಧಿ ವಿಸ್ತರಣೆ ಪಡೆದಿದ್ದರು. ಮಾಧವಿ ಅವರು ವಿವಾದಕ್ಕೆ ಒಳಗಾಗಿದ್ದರಿಂದ ಅವರನ್ನು ಮುಂದುವರಿಸುವುದು ಸರ್ಕಾರಕ್ಕೂ ಮುಜುಗರದ ಸಂಗತಿಯಾಗಿರಬಹುದು. ಅಜಯ್ ತ್ಯಾಗಿ ನಾಲ್ಕು ವರ್ಷ ಸೆಬಿ ಮುಖ್ಯಸ್ಥರಾಗಿದ್ದರು. ಯು.ಕೆ. ಸಿನ್ಹಾ ಅವರು ಆರು ವರ್ಷ ಆ ಹುದ್ದೆಯಲ್ಲಿ ಇದ್ದರು.
ಮಾಧಬಿ ಪುರಿ ಬುಚ್ ಅವರ ಮೂರು ವರ್ಷಗಳಿಂದ ಅತ್ಯುಚ್ಚ ಹುದ್ದೆ ಹೊಂದಿದ್ದಾರೆ. 2017ರಿಂದ 2022ರವರೆಗೂ ಅವರು ಸೆಬಿಯಲ್ಲಿ ಪೂರ್ಣಾವಧಿ ಸದಸ್ಯೆಯಾಗಿದ್ದರು. 2022ರಲ್ಲಿ ಛೇರ್ಮನ್ ಆಗಿದ್ದರು. ಒಟ್ಟು ಎಂಟು ವರ್ಷದಿಂದ ಅವರು ಸೆಬಿಯಲ್ಲಿದ್ದಾರೆ. ಮಾಧಬಿ ಪುರಿ ಅವರು ಮೂರು ವರ್ಷ ಮಾತ್ರ ಸೆಬಿ ಮುಖ್ಯಸ್ಥೆಯಾಗಿರುವರಾದರೂ, ಆ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ ಎನ್ನುವ ದಾಖಲೆಯನ್ನಂತೂ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಹಾಗೆಯೇ, ಖಾಸಗಿ ವಲಯದಿಂದ ಸೆಬಿ ಮುಖ್ಯಸ್ಥ ಸ್ಥಾನ ಅಲಂಕರಿಸಿದ ಮೊದಲ ವ್ಯಕ್ತಿಯೂ ಅವರಾಗಿದ್ದಾರೆ.
ವಿವಾದಗಳು ಮೆತ್ತಿಕೊಂಡಿರುವ ಮಾಧವಿ ಪುರಿ ಬುಚ್
ಸೆಬಿ ಮುಖ್ಯಸ್ಥೆಯಾದ ಬಳಿಕ ಮಾಧಬಿ ಪುರಿ ಬುಚ್ ಕೆಲ ಗಂಭೀರ ಆರೋಪಗಳನ್ನು ಕೇಳಬೇಕಾಯಿತು. ಸೆಬಿಯೊಂದಿಗೆ ಇದ್ದರೂ ತನ್ನ ಹಿಂದಿನ ಕಂಪನಿಯಿಂದ ಸಂಬಳ ಪಡೆಯುತ್ತಿದ್ದಾರೆ ಎನ್ನುವುದು ಆರೋಪಗಳಲ್ಲಿ ಒಂದು. ಹಿಂಡನ್ಬರ್ಗ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಮಾಡಿದ್ದ ಆರೋಪದ ಮೇಲೆ ಸೆಬಿ ತನಿಖೆ ನಡೆಸುತ್ತಿದೆ. ಆದರೆ, ಮಾಧಬಿ ಪುರಿ ಅವರು ಅದಾನಿ ಗ್ರೂಪ್ಗೆ ಕೃಪೆ ತೋರುತ್ತಿದ್ದಾರೆ. ಅದಾನಿ ಗ್ರೂಪ್ ಜೊತೆ ಅವರು ಹಿತಾಸಕ್ತಿ ಹೊಂದಿದ್ದಾರೆ ಎನ್ನುವ ಗಂಭೀರ ಆರೋಪ ಇದೆ. ಮಾಧವಿ ಅವರು ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ