ಐಫೋನ್ ಬಿಡಿಭಾಗಗಳ ತಯಾರಿಕೆ; ಭಾರತ್ ಫೋರ್ಜ್ನೊಂದಿಗೆ ಆ್ಯಪಲ್ ಮಾತುಕತೆ
Apple talks with Bharat Forge: ವಿಶ್ವದ ಪ್ರಮುಖ ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್ ತನ್ನ ಉತ್ಪನ್ನಗಳ ತಯಾರಿಕೆಯ ಇಕೋಸಿಸ್ಟಂ ಅನ್ನು ಭಾರತದಲ್ಲಿ ವಿಸ್ತರಿಸಲು ಗಂಭೀರ ಪ್ರಯತ್ನ ಮಾಡುತ್ತಿದೆ. ಭಾರತದ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿದ ಭಾರತ್ ಫೋರ್ಜ್ ಜೊತೆ ಆ್ಯಪಲ್ ಮಾತುಕತೆ ನಡೆಸುತ್ತಿದೆ. ಆ್ಯಪಲ್ನ ಕೆಲ ಮೆಕ್ಯಾನಿಕಲ್ ಭಾಗಗಳನ್ನು ತಯಾರಿಸಿಕೊಡಲು ಈ ಮಾತುಕತೆ ನಡೆಸುತ್ತಿರುವುದು ತಿಳಿದುಬಂದಿದೆ.
ನವದೆಹಲಿ, ಜನವರಿ 27: ಭಾರತದ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಲ್ಲಿ ಒಂದೆನಿಸಿದ, ಮತ್ತು ಕಲ್ಯಾಣಿ ಗ್ರೂಪ್ಗೆ ಸೇರಿದ ಭಾರತ್ ಫೋರ್ಜ್ ಸಂಸ್ಥೆಯನ್ನು ತನ್ನ ಸಪ್ಲೈ ಚೈನ್ ನೆಟ್ವರ್ಕ್ನ ಭಾಗವಾಗಿಸಿಕೊಳ್ಳಲು ಆ್ಯಪಲ್ ಆಸಕ್ತಿ ತೋರಿದೆ. ಐಫೋನ್ ಅಸೆಂಬ್ಲಿಂಗ್, ಸ್ಕ್ರೀನ್ ಗಾರ್ಡ್ ಇತ್ಯಾದಿ ಕಾರ್ಯಗಳಿಗೆ ಭಾರತೀಯ ಕಂಪನಿಗಳನ್ನು ಜೋಡಿಸಿಕೊಂಡಿರುವ ಆ್ಯಪಲ್ ಸಂಸ್ಥೆ, ತನ್ನ ಹಲವು ಬಿಡಿಭಾಗಗಳ ತಯಾರಿಕೆಗೆ ಮತ್ತಷ್ಟು ಭಾರತೀಯ ಕಂಪನಿಗಳನ್ನು ಒಳಗೊಳ್ಳಲು ಮುಂದಾಗಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಭಾರತ್ ಫೋರ್ಜ್ ಸಂಸ್ಥೆ ಜೊತೆ ಆ್ಯಪಲ್ ಮಾತುಕತೆ ನಡೆಸುತ್ತಿದೆ.
ಈ ಮಾತುಕತೆ ಫಲಪ್ರದವಾದಲ್ಲಿ ಭಾರತ್ ಫೋರ್ಜ್ ಆ್ಯಪಲ್ನ ಕೆಲ ಬಿಡಿಭಾಗಗಳನ್ನು ತಯಾರಿಸಿ, ಪೂರೈಕೆ ಮಾಡಬಹುದು. ಪ್ರಿಸಿಶನ್ ಎಂಜಿನಿಯರಿಂಗ್ ಉತ್ಪನ್ನಗಳಲ್ಲಿ ಪಳಗಿರುವ ಭಾರತ್ ಫೋರ್ಜ್ ಆ್ಯಪಲ್ನ ಕೆಲ ಮೆಕ್ಯಾನಿಕಲ್ ಭಾಗಗಳನ್ನು ತಯಾರಿಸಬಹುದು.
ಟಾಟಾ ಗ್ರೂಪ್, ಮದರ್ಸನ್ ಗ್ರೂಪ್, ಏಕಸ್ (Aequs) ಈಗಾಗಲೇ ಆ್ಯಪಲ್ಗೆ ಕೆಲಸ ಮಾಡಿಕೊಡುತ್ತಿರುವ ಭಾರತೀಯ ಕಂಪನಿಗಳಾಗಿದ್ದು, ಈ ಪಟ್ಟಿಗೆ ಕಲ್ಯಾಣಿ ಗ್ರೂಪ್ ಕೂಡ ಸೇರಬಹುದು.
ಚೀನಾದಿಂದ ಹೊರಗೆ ಇಕೋಸಿಸ್ಟಂ ನಿರ್ಮಿಸಲು ಆ್ಯಪಲ್ ಬದ್ಧ…
ಕೆಲ ವರ್ಷಗಳ ಹಿಂದೆ ಐಫೋನ್ ಸೇರಿದಂತೆ ಆ್ಯಪಲ್ನ ಶೇ 98ರಷ್ಟು ಉತ್ಪನ್ನಗಳು ಹಾಗೂ ಬಿಡಿಭಾಗಗಳೆಲ್ಲವೂ ಚೀನಾದಲ್ಲೇ ತಯಾರಾಗುತ್ತಿದ್ದವು. ಕೋವಿಡ್ ಬಳಿಕ ಆ್ಯಪಲ್ ಸಂಸ್ಥೆ ತನ್ನ ಉತ್ಪನ್ನಗಳ ತಯಾರಿಕೆಗೆ ಭಾರತ ಹಾಗೂ ಇತರ ದೇಶಗಳನ್ನು ಪರ್ಯಾಯ ಸ್ಥಳವಾಗಿ ಆಯ್ದುಕೊಳ್ಳುತ್ತಿದೆ. ಹಂತ ಹಂತವಾಗಿ ಇಕೋಸಿಸ್ಟಂ ಅನ್ನು ವಿಸ್ತರಿಸುತ್ತಿದೆ. ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಕಾರ್ಯ ನಡೆಯುತ್ತಿದೆ. ಫಾಕ್ಸ್ಕಾನ್, ಪೆಗಾಟ್ರಾನ್, ಟಾಟಾ ಗ್ರೂಪ್ ಕಂಪನಿಗಳು ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಮಾಡುತ್ತಿವೆ.
ಇದನ್ನೂ ಓದಿ: 2019ರಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಇವಿಗಳ ಸಂಖ್ಯೆ ಶೇ. 1; 2030ರಲ್ಲಿ ಶೇ. 30ಕ್ಕೇರುವ ನಿರೀಕ್ಷೆ: ವರದಿ
ಸನ್ವೋಡಾ ಎನ್ನುವ ಭಾರತೀಯ ಕಂಪನಿಯು ಆ್ಯಪಲ್ನ ಬ್ಯಾಟರಿ ಪ್ಯಾಕ್ಗಳನ್ನು ತಯಾರಿಸುತ್ತಿದೆ. ಫಾಕ್ಸ್ಲಿಂಕ್ ಎನ್ನುವ ಕಂಪನಿಯು ಕೇಬಲ್ಗಳನ್ನು ತಯಾರಿಸುತ್ತದೆ. Aequs ಕಂಪನಿಯು ಎನ್ಕ್ಲೋಶರ್ಗಳನ್ನು ತಯಾರಿಸುತ್ತದೆ. ಆ್ಯಪಲ್ನ ಹಳೆಯ ಸಪ್ಲೈಯರ್ ಕಂಪನಿಯಾದ ಸ್ಯಾಲ್ಕಾಂಪ್ ಈಗ ಕಾಯಿಲ್, ಪವರ್ ಪ್ಯಾಕ್ ಜೊತೆಗೆ ಮ್ಯಾಗ್ನೆಟಿಕ್ಸ್ ಅನ್ನೂ ತಯಾರಿಸಿ ಕೊಡುತ್ತಿದೆ. ಆಂಪರೆಕ್ಸ್ ಟೆಕ್ನಾಲಜಿ ಸಂಸ್ಥೆ ಆ್ಯಪಲ್ಗೆ ಬ್ಯಾಟರಿ ಸೆಲ್ಗಳನ್ನು ತಯಾರಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ