ನವದೆಹಲಿ: ಇನ್ನು ಆರೇಳು ವರ್ಷದೊಳಗೆ ಭಾರತದ ಆರ್ಥಿಕತೆ ವಿಶ್ವದಲ್ಲೇ ನಂಬರ್ 3ನೇ ಸ್ಥಾನಕ್ಕೆ ಏರುತ್ತದೆ ಎಂದು ಉದ್ಯಮಿ ಗೌತಮ್ ಅದಾನಿ ಭವಿಷ್ಯ ನುಡಿದಿದ್ದಾರೆ. ಅದಾನಿ ಗ್ರೂಪ್ನ 2022-23ರ ವಾರ್ಷಿಕ ಹಣಕಾಸು ವರದಿ ಬಿಡುಗಡೆ ಮಾಡುತ್ತಾ ಷೇರುದಾರರೊಂದಿಗೆ ಮಾತನಾಡಿದ ಗೌತಮ್ ಅದಾನಿ, 2030ರೊಳಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗುತ್ತದೆ. 2050ರಷ್ಟರಲ್ಲಿ ಎರಡನೇ ಸ್ಥಾನಕ್ಕೆ ಏರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಆರ್ಥಿಕ ಚಕ್ರಗಳನ್ನು ಅಂದಾಜು ಮಾಡುವುದು ದಿನೇ ದಿನೇ ಕ್ಷಿಷ್ಟಕರವಾಗುತ್ತಿದೆ. ಆದರೂ ಕೂಡ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿರುವ ಭಾರತ 2030ರೊಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುವುದರಲ್ಲಿ ಹೆಚ್ಚು ಅನುಮಾನ ಇಲ್ಲ’ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ಮತ್ತು ಹಲವು ರಚನಾತ್ಮಕ ಸುಧಾರಣೆಗಳ ಜಾರಿಯಾಗಿದ್ದು ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ. ಇದರ ಜೊತೆಗೆ ಭಾರತದ ಕಿರಿಯ ವಯೋಮಾನದ ಜನರ ಸಂಖ್ಯೆ, ಆಂತರಿಕವಾಗಿ ಸತತವಾಗಿ ಹೆಚ್ಚುತ್ತಿರುವ ಬೇಡಿಕೆ, ಇದು ಒಳ್ಳೆಯ ಸಂಯೋಜನೆಯಾಗಿ ಪರಿಣಮಿಸಿದೆ. ಮುಂದಿನ ಮೂರು ದಶಕಗಳಲ್ಲಿ ಭಾರತದಲ್ಲಿ ಅನುಭೋಗದ ಪ್ರಮಾಣ ಹೆಚ್ಚುತ್ತದೆ. ತೆರಿಗೆ ಪಾವತಿಸುವ ಜನರ ಸಂಖ್ಯೆ ಅಗಾಧವಾಗಿ ಬೆಳೆಯುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಇದನ್ನೂ ಓದಿ: PayTM: ಫೀನಿಕ್ಸ್ನಂತೆ ಪುಟಿದೇಳುತ್ತಿದ್ದರೂ ಪೇಟಿಎಂ ಷೇರುಬೆಲೆ ಇಳಿಯುತ್ತೆ ಜೋಕೆ ಎಂದಿದೆ ಮೆಕಾರೀ ಬ್ರೋಕರೇಜ್; ಏನು ಕಾರಣ?
ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ) ಪ್ರಕಾರ 2050ರಲ್ಲಿ ಭಾರತದ ಸರಾಸರಿ ವಯಸ್ಸು ಕೇವಲ 38 ವರ್ಷ ಇರುತ್ತದೆ. ಅಷ್ಟರಲ್ಲಿ ಜನಸಂಖ್ಯೆ 160 ಕೋಟಿಗೆ ಬೆಳೆಯುತ್ತದೆ. ತಲಾದಾಯ ಶೇ. 700ರಷ್ಟು ಬೆಳೆದು 16,000 ಡಾಲರ್ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದನ್ನು ಉಲ್ಲೇಖಿಸಿದ ಗೌತಮ್ ಅದಾನಿ, ಮುಂದಿನ ದಶಕದೊಳಗೆ ಭಾರತದ ಜಿಡಿಪಿಗೆ ಪ್ರತೀ 18 ತಿಂಗಳಿಗೂ 1 ಟ್ರಿಲಿಯನ್ ಡಾಲರ್ ಸೇರುತ್ತಾ ಹೋಗುತ್ತದೆ. ಹೀಗೆ 2050ರಷ್ಟರಲ್ಲಿ ಭಾರತದ ಜಿಡಿಪಿ 25ರಿಂದ 30 ಟ್ರಿಲಿಯನ್ ಡಾಲರ್ ಆಗುತ್ತದೆ ಎಂದಿದ್ದಾರೆ. ಈಗ ಭಾರತದ ಜಿಡಿಪಿ ಸದ್ಯ 3 ಟ್ರಿಲಿಯನ್ ಡಾಲರ್ ಇದೆ. 30 ಟ್ರಿಲಿಯನ್ ಎಂದರೆ ಸುಮಾರು 2,500 ಲಕ್ಷಕೋಟಿ ರೂ ಆಗುತ್ತದೆ.
ಅದಾನಿ ಗ್ರೂಪ್ 2022-23ರ ಹಣಕಾಸು ವರ್ಷದಲ್ಲಿ 1,38,175ಕೋಟಿ ರೂ ಆದಾಯ ದಾಖಲಿಸಿದೆ. ತೆರಿಗೆ ಕಳೆದು ಸಿಕ್ಕಿರುವ ನಿವ್ವಳ ಲಾಭವೇ 2,473 ಕೋಟಿ ರೂ ಇದೆ. 1994ರಲ್ಲಿ 150 ರೂ ಇದ್ದ ಅದಾನಿ ಎಂಟರ್ಪ್ರೈಸಸ್ ಷೇರುಬೆಲೆ 2022-23ರ ಹಣಕಾಸು ವರ್ಷದ ಅಂತ್ಯದಲ್ಲಿ 4,40,000 ರೂಗೆ ಬೆಳೆದಿದೆ ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.
ಇದರ ಪ್ರಕಾರ, 1994ರಲ್ಲಿ ಅದಾನಿ ಎಂಟರ್ಪ್ರೈಸಸ್ನ ಷೇರುಗಳ ಮೇಲೆ ಯಾರಾದರೂ 1 ಲಕ್ಷ ರೂನಷ್ಟು ಹೂಡಿಕೆ ಮಾಡಿದ್ದರೆ 28 ವರ್ಷದಲ್ಲಿ ಅದರ ಮೌಲ್ಯ 30 ಕೋಟಿ ರೂ ಆಗಿರುತ್ತಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ