ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಪಾವತಿ ಮಾಡಿ ದಂಗಾದ ಜರ್ಮನ್ ಮಿನಿಸ್ಟರ್

|

Updated on: Aug 21, 2023 | 11:51 AM

German Digital Minister Uses UPI in Bengaluru: ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಸಚಿವ ವೋಕರ್ ವಿಸ್ಸಿಂಗ್ ಅವರು ಜಿ20 ಸಭೆಗೆಂದು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ತರಕಾರಿ ಅಂಗಡಿಯೊಂದಕ್ಕೆ ಹೋಗಿ ಶಾಪಿಂಗ್ ಮಾಡಿದರು. ಬಳಿಕ ಯುಪಿಐ ಮೂಲಕ ಹಣ ಪಾವತಿಸಿದರು. ಜರ್ಮನ್ ಎಂಬಸಿ ಕಚೇರಿಯು ಈ ಘಟನೆಯ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಷೇರ್ ಮಾಡಿದೆ.

ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಪಾವತಿ ಮಾಡಿ ದಂಗಾದ ಜರ್ಮನ್ ಮಿನಿಸ್ಟರ್
ಬೆಂಗಳೂರಿನಲ್ಲಿ ತರಕಾರಿ ಖರೀದಿಸಿ ಯುಪಿಐ ಮೂಲಕ ಹಣ ಪಾವತಿಸಿದ ವೋಕರ್ ವಿಸ್ಸಿಂಗ್
Follow us on

ನವದೆಹಲಿ, ಆಗಸ್ಟ್ 21: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಎನಿಸಿದ ಯುಪಿಐ ಬಹಳ ದೇಶಗಳ ಗಮನ ಸೆಳೆದಿದೆ. ಹಲವು ದೇಶಗಳು ಯುಪಿಐ ಅನ್ನು ಒಪ್ಪಿಕೊಂಡು ಅಪ್ಪಿಕೊಂಡಿವೆ. ಹಲವು ಯೂರೋಪಿಯನ್ ದೇಶಗಳು ಯುಪಿಐ ಬಗ್ಗೆ ಅತೀವ ಆಸಕ್ತಿ ತೋರಿವೆ. ಇದೀಗ ಜರ್ಮನಿಯ ಸಚಿವರು ಭಾರತದ ಯುಪಿಐ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಜಿ20 ಸಭೆಯೊಂದಕ್ಕೆ ಬಂದಿದ್ದ ಜರ್ಮನಿಯ ಡಿಜಿಟಲ್ ಮತ್ತು ಟ್ರಾನ್ಸ್​ಪೋರ್ಟ್ ಸಚಿವ ವೋಕರ್ ವಿಸ್ಸಿಂಗ್ (Volker Wissing) ಅವರು ತರಕಾರಿ ಅಂಗಡಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಅಚ್ಚರಿಪಟ್ಟರು.

ಸಚಿವ ವಿಸ್ಸಿಂಗ್ ಅವರು ತರಕಾರಿ ಮಾರಾಟಗಾರರಿಗೆ ಯುಪಿಐ ಮೂಲಕ ಹಣ ಪಾವತಿಸಿದ ವಿಡಿಯೋ ಮತ್ತು ಫೋಟೋವನ್ನು ಜರ್ಮನಿಯ ರಾಯಭಾರ ಕಚೇರಿಯವರು (german embassy) ಟ್ವಿಟ್ಟರ್​ಗೆ ಪೋಸ್ಟ್ ಮಾಡಿದ್ದಾರೆ. ‘ಭಾರತದ ಯಶೋಗಾಥೆಗಳಲ್ಲಿ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಒಂದು. ಯುಪಿಐ ಮೂಲಕ ಎಲ್ಲರೂ ಕ್ಷಣಗಳಲ್ಲಿ ವಹಿವಾಟು ನಡೆಸಬಹುದು. ಡಿಜಿಟಲ್ ಮತ್ತು ಟ್ರಾನ್ಸ್​ಪೋರ್ಟ್ ಸಚಿವರು ಯುಪಿಐ ಮೂಲಕ ಖುದ್ದಾಗಿ ಹಣ ಪಾವತಿ ಮಾಡಿ ಅಚ್ಚರಿ ಪಟ್ಟರು’ ಎಂದು ಜರ್ಮನ್ ಎಂಬಸಿ ಟ್ವೀಟ್ ಮಾಡಿದೆ.


ಬೆಂಗಳೂರಿನಲ್ಲಿ ಆಗಸ್ಟ್ 19, ಶನಿವಾರದಂದು ಜಿ20 ಡಿಜಿಟಲ್ ಮಿನಿಸ್ಟರ್ಸ್ ಸಭೆ ಇತ್ತು. ಸಭೆಯಲ್ಲಿ ಪಾಲ್ಗೊಳ್ಳಲು ಸಚಿವ ವೋಕರ್ ವಿಸ್ಸಿಂಗ್ ಅವರು ಬೆಂಗಳೂರಿಗೆ ಆಗಸ್ಟ್ 18ರಂದು ಆಗಮಿಸಿದ್ದರು.

ಇದನ್ನೂ ಓದಿ: ಪ್ರೋಸಸಿಂಗ್ ಶುಲ್ಕ ಇಲ್ಲ; ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದವರಿಗೆ ಯೂನಿಯನ್ ಬ್ಯಾಂಕ್ ಭರ್ಜರಿ ಆಫರ್

ಭಾರತದಲ್ಲಿ ಯುಪಿಐ ಭಾರೀ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಕೋಟ್ಯಂತರ ಜನರು ಡಿಜಿಟಲ್ ವಹಿವಾಟು ವ್ಯವಸ್ಥೆಗೆ ಜೋಡಿಸಿಕೊಂಡಿದ್ದಾರೆ. ಶ್ರೀಲಂಕಾ, ಫ್ರಾನ್ಸ್, ಸಿಂಗಾಪುರ, ಯುಎಐ ದೇಶಗಳು ಯುಪಿಐ ಬಳಕೆಗೆ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಅನಿವಾಸಿ ಭಾರತೀಯರು ತಮ್ಮ ಊರಿನ ಮಂದಿಗೆ ಯುಪಿಐ ಮೂಲಕ ಹಣ ಪಾವತಿಸುವುದು ಸುಲಭವಾಗುತ್ತದೆ.

ಯುಪಿಐ ಅನ್ನು ಬೇರೆ ದೇಶಗಳಿಗೆ ಪ್ರಾಯೋಗಿಕವಾಗಿ ತೋರಿಸಲು ಜಿ20 ಸಭೆಗಳನ್ನು ಭಾರತ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಜಿ20 ಸಭೆಗೆ ಬರುವ ವಿದೇಶೀ ನಿಯೋಗಗಳಿಗೆ ಸ್ಥಳೀಯ ವಹಿವಾಟಿಗೆ ಯುಪಿಐ ವ್ಯವಸ್ಥೆ ಕೊಡಲಾಗಿದೆ. ಇದರಿಂದ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ವಿದೇಶೀ ಗಣ್ಯರು ಖುದ್ದಾಗಿ ಅರಿಯುವ ಅವಕಾಶ ಸಿಗುತ್ತದೆ. ಆ ಮೂಲಕ ಯುಪಿಐ ಪಾವತಿ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಭಾರತದ ಉದ್ದೇಶಕ್ಕೆ ಪುಷ್ಟಿ ಸಿಕ್ಕಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Mon, 21 August 23