ನವದೆಹಲಿ: ಈ ಕಂಪನಿ ನೂರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಉಳಿದುಕೊಂಡಿರುವ ಉದ್ಯೋಗಿಗಳಿಗೆ ತಿಂಗಳುಗಳಿಂದ ಸಂಬಳ ಇಲ್ಲ. ಕಂಪನಿಗೆ ತಿಂಗಳಿಗೆ ಕೋಟಿಗಟ್ಟಲೆ ಆದಾಯ ಬಂದರೂ ಎಲ್ಲವೂ ಮಾಲೀಕರಿಗೆ ಸ್ವಾಹ ಅಗುತ್ತಿದೆ. ಈ ಸ್ಟಾರ್ಟಪ್ಗೆ ಬಂದ ಫಂಡಿಂಗ್ ಹಣ ಏನಾಗುತ್ತದೋ ಆ ದೇವರೇ ಬಲ್ಲ…! ಇದು ಗ್ಲಾಮ್ಯೋ ಹೆಲ್ತ್ (Glamyo Health) ಎಂಬ ಸ್ಟಾರ್ಟಪ್ ಕಂಪನಿಯ ಕರ್ಮಕಾಂಡದ ಒಂದು ಸ್ಯಾಂಪಲ್. ಇದನ್ನು ಕಂಪನಿಯ ಸ್ವತಃ ಉದ್ಯೋಗಿಗಳೇ ಅಲರ್ಟ್ ಹೊರಡಿಸಿದ್ದಾರೆ. ಅಷ್ಟೇ ಅಲ್ಲ, ಗ್ಲಾಮ್ಯೋ ಹೆಲ್ತ್ ಕಂಪನಿ ಸದ್ಯದಲ್ಲೇ ದಿವಾಳಿ ಅರ್ಜಿ (Bankruptcy) ಸಲ್ಲಿಸಲಿದೆ. ಮಾಲೀಕರು ಎಲ್ಲವನ್ನೂ ನುಂಗಿ ವಿದೇಶಕ್ಕೆ ಪರಾರಿಯಾಗುವ ಪ್ಲಾನ್ ಮಾಡಿದ್ದಾರೆ ಅಂತಲೂ ಒಬ್ಬ ಉದ್ಯೋಗಿ ದೂರು ನೀಡಿದ್ದಾರೆ. ದೂರು ಕೊಟ್ಟಿರುವುದಷ್ಟೇ ಅಲ್ಲ, ಕಳೆದ ವಾರ ಇವರು ನವದೆಹಲಿಯಲ್ಲಿರುವ ಕಂಪನಿ ಕಚೇರಿ ಬಳಿ ಪ್ರತಿಭಟನೆ ಕೂಡ ನಡೆಸಿದ್ದರು. ಬಾರಾಖಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಲಾಮ್ಯೋ ಹೆಲ್ತ್ ಕಂಪನಿಯು ಸರ್ಜರಿ ಮತ್ತು ಕಾಸ್ಮೆಟಿಕ್ ಚಿಕಿತ್ಸೆಗೆ ವಿವಿಧ ಆಸ್ಪತ್ರೆ ಮತ್ತು ಕ್ಲಿನಿಕ್ಗಳ ಜೊತೆ ಸಹಭಾಗಿತ್ವದಲ್ಲಿ ವ್ಯವಹಾರ ನಡೆಸುತ್ತದೆ. ಅರ್ಚಿತ್ ಗರ್ಗ್ ಮತ್ತು ಪ್ರೀತ್ ಪಾಲ್ ಠಾಕೂರ್ ಈ ಸಂಸ್ಥೆಯ ಸಹ–ಸಂಸ್ಥಾಪಕರು. ವೈದ್ಯರು ಹಾಗೂ ಇತರ ವೃತ್ತಿಪರರು ಈ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಪ್ರಕಾರ ಗ್ಲಾಮ್ಯೋ ಹೆಲ್ತ್ ಇತ್ತೀಚೆಗೆ 160ಕ್ಕೂ ಹೆಚ್ಚು ಉದ್ಯೋಗಿಗಳನ್ನು ಯಾವುದೇ ನೋಟೀಸ್ ಕೊಡದೇ ಲೇ ಆಫ್ ಮಾಡಿದೆಯಂತೆ. ಹಲವು ತಿಂಗಳಿಂದ ಅವರ ಸಂಬಳ ಕೂಡ ನೀಡಿಲ್ಲ.
ಇದನ್ನೂ ಓದಿ: Cyber Fraud: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ
ಈ ಉದ್ಯೋಗಿಗಳು ನೀಡಿರುವ ದೂರಿನ ಪ್ರಕಾರ ಈ ಸ್ಟಾರ್ಟಪ್ ಕಂಪನಿ ತಿಂಗಳಿಗೆ 5 ಕೋಟಿ ರೂ ಆದಾಯ ಗಳಿಸುತ್ತದೆ. ಇದರ ಸಂಸ್ಥಾಪಕರು ಎಲ್ಲಾ ಹಣವನ್ನು ತಮ್ಮ ಜೇಬಿಗೆ ಇಳಿಸುತ್ತಾರೆ. ಅಜಿಲಿಟಿ ವೆಂಚರ್ಸ್, ಆನಿಕಟ್ ಕ್ಯಾಪಿಟಲ್, ಲೆಟ್ಸ್ವೆಂಚರ್ ಮೊದಲಾದ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಬಂದಿವೆ. 7 ಮಿಲಿಯನ್ ಡಾಲರ್ (58 ಕೋಟಿ ರೂ) ಹೂಡಿಕೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 6 ಮಿಲಿಯನ್ ಡಾಲರ್ನಷ್ಟು ಫಂಡಿಂಗ್ ಬರುತ್ತಿದೆ. ಆದರೂ ಗ್ಲಾಮ್ಯೋ ಹೆಲ್ತ್ ಆರೋಗ್ಯ ಸುಧಾರಣೆ ಆಗಿಲ್ಲ. ಇದಕ್ಕೆ ಅದರ ಸಂಸ್ಥಾಪಕರೇ ಕಾರಣ ಎಂಬುದು ಉದ್ಯೋಗಿಗಳ ತರ್ಕ.
ಅಷ್ಟೇ ಅಲ್ಲ, ಕಂಪನಿಯ ಈ ಇಬ್ಬರು ಮಾಲೀಕರು ಬ್ಯಾಂಕ್ರಪ್ಟ್ಸಿ ಅರ್ಜಿ ಸಲ್ಲಿಸಿ ದೇಶ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದರು ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ