ನವದೆಹಲಿ: ವಿಶ್ವದ ಟೆಕ್ನಾಲಜಿ ದೈತ್ಯ ಕಂಪನಿ ಗೂಗಲ್ನ (Google LLC) ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೂಗಲ್ ಎಂಟರ್ಪ್ರೈಸಸ್ ಪ್ರೈ ಲಿ ಎಂಬ ಕನ್ಸಲ್ಟೆನ್ಸಿ ಸಂಸ್ಥೆ ಮತ್ತದರ ಅಂಗ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ಗೂಗಲ್ ಎಂಟರ್ಪ್ರೈಸಸ್ ಸಂಸ್ಥೆಗೂ ಗೂಗಲ್ ಎಲ್ಎಲ್ಸಿಗೂ ಯಾವುದೇ ಸಂಬಂಧ ಇಲ್ಲ. ತಾನು ಗೂಗಲ್ನ ಭಾಗ ಎಂದು ಬಿಂಬಿಸಿಕೊಂಡು, ಅದರ ಟ್ರೇಡ್ಮಾರ್ಕನ್ನು ಬಳಸಿಕೊಂಡು ಗೂಗಲ್ ಎಂಟರ್ಪ್ರೈಸಸ್ ವಂಚನೆ ಎಸಗುತ್ತಿತ್ತು ಎಂಬುದು ಆರೋಪ. ಈ ಬಗ್ಗೆ ಗೂಗಲ್ ಎಲ್ಎಲ್ಸಿ ಕಾನೂನು ಮೊಕದ್ದಮೆ ಹಾಕಿತ್ತು. ದೆಹಲಿ ಹೈಕೊರ್ಟ್ನಲ್ಲಿ ವಿಚಾರಣೆ ನಡೆದು, ಗೂಗಲ್ ಎಂಟರ್ಪ್ರೈಸಸ್ ಮೇಲಿನ ಆರೋಪ ನಿಜವೆಂದು ಸಾಬೀತಾಯಿತು. ಟ್ರೇಡ್ಮಾರ್ಕ್ ದುರುಪಯೋಗದಿಂದ ಗೂಗಲ್ ಎಲ್ಎಲ್ಸಿಗೆ ಹಾನಿ ಆಗಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ ಪರಿಹಾರ ಕೊಡಬೇಕು ಎಂದು ದೆಹಲಿ ಹೈಕೋರ್ಟ್ ಗೂಗಲ್ ಎಂಟರ್ಪ್ರೈಸಸ್ ಹಾಗೂ ಅದರ ಅಂಗಸಂಸ್ಥೆಗಳಿಗೆ ಆದೇಶ ಹೊರಡಿಸಿತು.
ಹಾಗೆಯೇ, ಗೂಗಲ್ ಡೊಮೈನ್ ಹೆಸರಲ್ಲಿ ರಚಿಸಲಾಗಿರುವ ಗೂಗಲ್ ಎಂಟರ್ಪ್ರೈಸಸ್ ವೆಬ್ಸೈಟ್ ಪ್ರಕಟವಾಗದಂತೆ ತಡೆಹಿಡಿಯಬೇಕೆಂದು ಎಲ್ಲಾ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಗಳು (ಐಎಸ್ಪಿ) ಮತ್ತು ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ಹೊರಡಿಸುವಂತೆ ದೂರಸಂಪರ್ಕ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ.
ದೆಹಲಿ ಹೈಕೋರ್ಟ್ನಲ್ಲಿ ಗೂಗಲ್ ಎಲ್ಎಲ್ಸಿ ಹಾಕಲಾಗಿದ್ದ ಕಾನೂನು ಮೊಕದ್ದಮೆಯಲ್ಲಿ, ಆರೋಪಿ ಸಂಸ್ಥೆಗಳು ಯಾವ ರೀತಿ ವಂಚನೆ ಎಸಗುತ್ತಿದ್ದವು ಎಂಬ ಕುತೂಹಲಕಾರಿ ಮಾಹಿತಿ ಇದೆ. ಕೋರ್ಟ್ ಕೂಡ ಈ ವಿಚಾರವನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ: Toll Rates: ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ತೆರಿಗೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ
ಮೊದಲ ಆರೋಪಿ ಎನಿಸಿರುವ ಸಂಸ್ಥೆಯಲ್ಲಿ (ಗೂಗಲ್ ಎಂಟರ್ಪ್ರೈಸಸ್) ಹಣ ಠೇವಣಿ ಇರಿಸಿದರೆ ಅರ್ಜಿದಾರರಿಗೆ (ಗೂಗಲ್ ಎಲ್ಎಲ್ಸಿ) ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಹೊಂದಬಹುದು ಎಂದು ಸಾರ್ವಜನಿಕರನ್ನು ನಂಬಿಸುವುದು ಆರೋಪಿ ಸಂಸ್ಥೆಗಳ ಕಾರ್ಯತಂತ್ರವಾಗಿತ್ತು ಎಂದು ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾ| ಸಂಜೀವ್ ನರುಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳು ಈ ತೀರ್ಪು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿ ಗೂಗಲ್ ಎಂಟರ್ಪ್ರೈಸಸ್ ಪ್ರೈ ಲಿ ಸಂಸ್ಥೆ ಆರೋಪಿ ನಂಬರ್ ಒನ್ ಆಗಿತ್ತು. ಇ ಕುಟಿರ್ ಟೆಕ್ನಾಲಜಿ ಮತ್ತು ಎಕ್ಸ್ಟೆನ್ಷನ್ ಮ್ಯಾನೇಜ್ಮೆಂಟ್ ಲಿ ಮತ್ತರದ ನಿರ್ದೇಶಕ ಚಂದರ್ ಶೇಖರ್ ಅವರು ಎರಡು ಮತ್ತು ಮೂರನೇ ಆರೋಪಿಗಳೆನಿಸಿದ್ದರು. 2011ರಲ್ಲಿ ಡೆಸ್ಕ್ ಜಾಬ್ಗಳಿಗೆ ಗೂಗಲ್ ಇಂಡಿಯಾ ಮತ್ತು ಈ ಆರೋಪಿ ಸಂಸ್ಥೆಗಳ ಮಧ್ಯೆ ಸಹಕಾರ ಒಪ್ಪಂದ ಆಗಿದೆ ಎನ್ನುವಂತಹ ಸುದ್ದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಗೂಗಲ್ ಎಲ್ಎಲ್ಸಿ ಕೋರ್ಟ್ ಮೆಟ್ಟಿಲೇರಿತ್ತು. ಇ ಕುಟಿರ್ ಟೆಕ್ನಾಲಜಿ ಈಗಲೂ ಕೂಡ ತಾನು ಗೂಗಲ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸಂಸ್ಥೆಗಳಿಗೆ ಚಾನಲ್ ಪಾರ್ಟ್ನರ್ ಎಂದು ತನ್ನ ಟ್ವಿಟ್ಟರ್ ಪ್ರೊಫೈಲ್ನಲ್ಲಿ ಹೇಳಿಕೊಂಡಿದೆ.
ಇದನ್ನೂ ಓದಿ: SBI WECARE: ಎಸ್ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?
ಮೂರು ಆರೋಪಿ ಸಂಸ್ಥೆಗಳು ಗೂಗಲ್ನ ಟ್ರೇಡ್ಮಾರ್ಕ್ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸುವ ಕೆಲಸ ಮಾಡಿದ್ದವು. ಗೂಗಲ್ ಎಂಟರ್ಪ್ರೈಸಸ್ನ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಗೂಗಲ್ ಜೊತೆ ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಭರವಸೆ ನೀಡಿದ್ದವು. ಇದನ್ನು ನಂಬಿ ಹಲವು ಸಾರ್ವಜನಿಕರು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಗೂಗಲ್ ಎಂಟರ್ಪ್ರೈಸಸ್ ಮತ್ತಿತರ ಆರೋಪಿ ಸಂಸ್ಥೆಗಳು ಈ ಆರೋಪ ಆಧಾರರಹಿತ ಎಂದು ತಳ್ಳಿಹಾಕಿದರೂ, ಈ ಸಂಸ್ಥೆಗಳ ವೆಬ್ಸೈಟ್ಗಳಲ್ಲಿ ಗೂಗಲ್ನ ಟ್ರೇಡ್ಮಾರ್ಕ್ಗಳನ್ನು ಬಳಸಿರುವುದು ನಿಚ್ಚಲವಾಗಿತ್ತು. ಇದೇ ಪ್ರಮುಖ ಸಾಕ್ಷ್ಯಾಧಾರವಾಗಿದ್ದರಿಂದ ದೆಹಲಿ ಹೈಕೋರ್ಟ್ ಈ ಆರೋಪಿ ಸಂಸ್ಥೆಗಳಿಗೆ 10 ಲಕ್ಷ ರೂ ದಂಡ ವಿಧಿಸಿದೆ.