ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್ನ್ಯಾಷನಲ್ ಎಲ್ಎಲ್ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್ಟೆಲ್ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್ಟೆಲ್ನಿಂದ ಗೂಗಲ್ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್ಗಳಿಗೆ ಗೂಗಲ್ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು.
ಕಂಪೆನಿಯ ಆದ್ಯತೆ ವಿತರಣೆಗೆ ವಿಶೇಷ ಸಮಿತಿಯ ನಿರ್ದೇಶಕರು 71,176,839 ಈಕ್ವಿಟಿ ಷೇರುಗಳನ್ನು ಪೂರ್ತಿಯಾಗಿ ಪಾವತಿಸಿದ 5 ರೂಪಾಯಿಯ ಮುಖಬೆಲೆಯ ಷೇರನ್ನು ಆದ್ಯತೆಯ ಆಧಾರದಲ್ಲಿ ಗೂಗಲ್ ಇಂಟರ್ನ್ಯಾಷನಲ್ ಎಲ್ಎಲ್ಸಿಗೆ ಇಶ್ಯೂ ಬೆಲೆ ಪ್ರತಿ ಷೇರಿಗೆ ರೂ. 734ರಂತೆ (ಪ್ರತಿ ಷೇರಿಗೆ 729 ರೂಪಾಯಿ ಪ್ರೀಮಿಯಂ ಒಳಗೊಂಡಂತೆ) ವಿತರಿಸಲು ಅನುಮತಿಸಿದ್ದಾರೆ ಎಂದು ಬಿಎಸ್ಇಗೆ ಗುರುವಾರ ತಿಳಿಸಲಾಗಿದೆ.
ಇದರ ಫಲಿತವಾಗಿ ಷೇರು ವಿತರಣೆಯ ನಂತರದಲ್ಲಿ ಕಂಪೆನಿಯ ಶೇ 1.2ರಷ್ಟು- ಪೂರ್ತಿ ಡೈಲ್ಯೂಟ್ ಆದ ಆಧಾರದಲ್ಲಿ ಶೇ 1.17ರಷ್ಟು ಪಾಲನ್ನು ಗೂಗಲ್ ಹೊಂದಿರಲಿದೆ. ಕಳೆದ ವಾರ ಭಾರತದ ಸ್ಪರ್ಧಾ ಆಯೋಗ ಅನುಮತಿ ನೀಡಿದ ಮೇಲೆ ಈ ಘೋಷಣೆ ಬಂದಿದೆ.
ಈ ಹಿಂದೆ 2020ರ ಜುಲೈನಲ್ಲಿ ಗೂಗಲ್ನಿಂದ ರಿಲಯನ್ಸ್ ಜಿಯೋದಲ್ಲಿ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.
Published On - 6:08 pm, Thu, 14 July 22