Sundar Pichai: ಉದ್ಯೋಗ ಕಡಿತ ಸಮರ್ಥಿಸಿದ ಸುಂದರ್ ಪಿಚೈ; ಕೊಟ್ಟ ಕಾರಣ ಇಲ್ಲಿದೆ

|

Updated on: Jan 24, 2023 | 11:21 AM

ಕಂಪನಿಯ ಸ್ಥಾಪಕರು ಮತ್ತು ಮಂಡಳಿಯ ಜತೆ ಸಮಾಲೋಚನೆ ನಡೆಸಿದ ಬಳಿಕವೇ ಶೇ 6ರ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ, ಮುಂಚಿತವಾಗಿಯೇ ನಿರ್ಧಾರ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಹೀಗಾಗಿ ನಾನು ಕಠಿಣ ನಿರ್ಧಾರ ಕೈಗೊಳ್ಳಲೇಬೇಕಾಯಿತು ಎಂದು ಸುಂದರ್ ಪಿಚೈ ಹೇಳಿದ್ದಾರೆ.

Sundar Pichai: ಉದ್ಯೋಗ ಕಡಿತ ಸಮರ್ಥಿಸಿದ ಸುಂದರ್ ಪಿಚೈ; ಕೊಟ್ಟ ಕಾರಣ ಇಲ್ಲಿದೆ
ಸುಂದರ್ ಪಿಚೈ
Follow us on

ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್​​ (Google) ಸುಮಾರು 12,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿರುವುದನ್ನು (Layoffs) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸುಂದರ್ ಪಿಚೈ (Sundar Pichai) ಸಮರ್ಥಿಸಿಕೊಂಡಿದ್ದಾರೆ. ಕಂಪನಿಯ ಬೆಳವಣಿಗೆ ನಿಧಾನಗೊಳ್ಳುತ್ತಿದ್ದಂತೆ ನಿರ್ಣಾಯಕವಾದ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ಅವರು ಉದ್ಯೋಗಿಗಳನ್ನು ಉದ್ದೇಶಿಸಿ ತಿಳಿಸಿದ್ದಾರೆ. ಕಂಪನಿಯ ಆಂತರಿಕ ಸಭೆ ನಡೆಸಿದ ಅವರು, ಕಂಪನಿಯ ಸ್ಥಾಪಕರು ಮತ್ತು ಮಂಡಳಿಯ ಜತೆ ಸಮಾಲೋಚನೆ ನಡೆಸಿದ ಬಳಿಕವೇ ಶೇ 6ರ ಉದ್ಯೋಗ ಕಡಿತದ ನಿರ್ಧಾರ ಕೈಗೊಳ್ಳಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ, ಮುಂಚಿತವಾಗಿಯೇ ನಿರ್ಧಾರ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಹೀಗಾಗಿ ನಾನು ಕಠಿಣ ನಿರ್ಧಾರ ಕೈಗೊಳ್ಳಲೇಬೇಕಾಯಿತು ಎಂದು ಹೇಳಿರುವುದಾಗಿ ‘ಬ್ಲೂಮ್​ಬರ್ಗ್’ ವರದಿ ಮಾಡಿದೆ.

ಬೋನಸ್ ಎಂಬುದು ಕಂಪನಿಯ ಕಾರ್ಯನಿರ್ವಹಣೆ ಜತೆ ಸಂಬಂಧ ಹೊಂದಿದೆ. ಕಾರ್ಯನಿರ್ವಹಣೆಗೆ ನಾಯಕತ್ವವೂ ಹೊಣೆಯಾಗಬೇಕಾಗುತ್ತದೆ. ಎಲ್ಲ ಹಿರಿಯ ಉಪಾಧ್ಯಕ್ಷರ ವಾರ್ಷಿಕ ಬೋನಸ್​​ನಲ್ಲಿ ಈ ವರ್ಷ ಹೆಚ್ಚಿನ ಕಡಿತವಾಗಲಿದೆ ಎಂದು ಪಿಚೈ ಹೇಳಿದ್ದಾರೆ. ಗೂಗಲ್​ನಲ್ಲಿ ಸುಮಾರು 30,000 ಮ್ಯಾನೇಜರ್​ಗಳಿದ್ದಾರೆ. ಇತರ ಕಂಪನಿಗಳಂತಲ್ಲದೆ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Alphabet Layoff: ಗೂಗಲ್‌ನಿಂದ ವಜಾಗೊಂಡ ಉದ್ಯೋಗಿಗಳಿಗೆ ಏನೇನು ಸೌಲಭ್ಯ ಸಿಗಲಿದೆ?; ಇಲ್ಲಿದೆ ಸುಂದರ್ ಪಿಚೈ ಸಂದೇಶದ ಪೂರ್ಣಪಾಠ

ಗೂಗಲ್ ಕಂಪನಿಯು 2023ರಲ್ಲಿ ಉದ್ಯೋಗ ಕಡಿತ ಮಾಡಲಿದೆ ಎಂಬ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಊಹಾಪೋಹಗಳು ಹರಿದಾಡಿದ್ದವು. ಅಂತಿಮವಾಗಿ, 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಾಗಿ ಗೂಗಲ್ ಶುಕ್ರವಾರ ಘೋಷಿಸಿತ್ತು. ಹಲವು ವರ್ಷಗಳ ಉದ್ಯಮ ಬೆಳವಣಿಗೆ, ನೇಮಕಾತಿಗಳ ಬಳಿಕ ಮೊದಲ ಬಾರಿಗೆ ಗೂಗಲ್ ಇಂಥ ಕ್ರಮ ಕೈಗೊಂಡಿತ್ತು. ಅದರ ಬೆನ್ನಲ್ಲೇ, ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳನ್ನು ಉದ್ದೇಶಿಸಿ ಇ-ಮೇಲ್ ಸಂದೇಶ ಕಳುಹಿಸಿದ್ದರು. ಕಂಪನಿಯ ಎಲ್ಲ ತಂಡಗಳ ಮೇಲೆ ಉದ್ಯೋಗ ಕಡಿತದ ಪ್ರಭಾವ ಆಗಲಿದೆ ಎಂದೂ ಅಮೆರಿಕದ ಸಿಬ್ಬಂದಿಯ ಮೇಲೆ ತಕ್ಷಣವೇ ಪರಿಣಾಮ ಬೀರಲಿದೆ ಎಂದೂ ಅವರು ಇ-ಮೇಲ್​ನಲ್ಲಿ ಉಲ್ಲೇಖಿಸಿದ್ದರು.

ಸುಂದರ್ ಪಿಚೈ ಅವರು ಗೂಗಲ್​ನ ಕೆಲವೊಂದು ಉನ್ನತ ಹುದ್ದೆಗಳನ್ನೂ ಕಡಿತಗೊಳಿಸಿದ್ದು, ವಾರ್ಷಿಕ 5 ಲಕ್ಷ ಡಾಲರ್​ನಿಂದ 10 ಲಕ್ಷ ಡಾಲರ್ ವರೆಗೆ ಪಡೆಯುತ್ತಿದ್ದ ವ್ಯವಸ್ಥಾಪಕ ಸ್ಥಾನಗಳಲ್ಲಿದ್ದ ಉದ್ಯೋಗಿಗಳೂ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Tue, 24 January 23