ನವದೆಹಲಿ, ಮೇ 2: ಗೂಗಲ್ ಸಂಸ್ಥೆ ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಾ ಬಂದಿರುವ ಉದ್ಯೋಗ ಕಡಿತ (job cut) ಪ್ರಕ್ರಿಯೆ ಮುಂದುವರಿದಿದೆ. ಇತ್ತೀಚೆಗೆ ಗೂಗಲ್ನ ಕೋರ್ ಟೀಮ್ ಅಥವಾ ಪ್ರಮುಖ ತಂತ್ರಜ್ಞರ ತಂಡಗಳಲ್ಲಿ ಸುಮಾರು 200 ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಇವರಲ್ಲಿ ಹೆಚ್ಚಿನವರು ಅಮೆರಿಕದ ಗೂಗಲ್ ಕಚೇರಿಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಪ್ರಧಾನ ಕಚೇರಿಯಲ್ಲಿನ ಎಂಜಿನಿಯರಿಂಗ್ ತಂಡದಿಂದಲೇ 50ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ವೇಳೆ ಬೇರೆ ದೇಶಗಳಲ್ಲಿ ಗೂಗಲ್ ನೇಮಕಾತಿ ಹೆಚ್ಚಿಸುತ್ತಿದೆ. ವರದಿಗಳ ಪ್ರಕಾರ ಮೆಕ್ಸಿಕೋ, ಭಾರತ, ಜರ್ಮನಿ ಮೊದಲಾದೆಡೆ ಗೂಗಲ್ನಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ.
ಈಗ ಲೇ ಆಫ್ ಆಗಿರುವ 200ಕ್ಕೂ ಹೆಚ್ಚು ಮಂದಿಯ ತಂಡ ನುರಿತ ತಂತ್ರಜ್ಞರಿಂದ ಕೂಡಿದ್ದಾಗಿದೆ. ಗೂಗಲ್ನ ಉತ್ಪನ್ನಗಳ ರೂವಾರಿಯೇ ಈ ತಂಡವಾಗಿತ್ತು. ಆದರೆ, ಅಧಿಕ ಸಂಬಳವಿದ್ದ ಕಾರಣ ವೆಚ್ಚ ಕಡಿತಕ್ಕೆ ಗೂಗಲ್ ಈ ಲೇ ಆಫ್ ಕ್ರಮ ಕೈಗೊಂಡಿದೆ. ಈ ವರ್ಷ ಈ ಪ್ರಮುಖ ತಂಡದಲ್ಲಿ ಆಗಿರುವ ಅತಿದೊಡ್ಡ ಲೇ ಆಫ್ ಇದಾಗಿದೆ ಎಂದು ಹೇಳಲಾಗಿದೆ. ಇದು ಉಳಿದ ಉದ್ಯೋಗಿಗಳನ್ನು ನಿರಾಳಗೊಳಿಸಿದೆ.
ಇದನ್ನೂ ಓದಿ: ಶೇ. 5.25ರಿಂದ ಶೇ. 5.50ರಲ್ಲಿ ಬಡ್ಡಿದರ ಮುಂದುವರಿಸಿದ ಅಮೆರಿಕ; ಬಡ್ಡಿ ಹೆಚ್ಚಳ ಸಾಧ್ಯತೆ ಇಲ್ಲ
ಗೂಗಲ್ ಈ ಬಾರಿ ಲೇ ಆಫ್ ಮಾಡಲು ವೆಚ್ಚ ಕಡಿತ ಒಂದು ಕಾರಣವಾಗಿದೆ. ಹಾಗೆಯೇ, ಗೂಗಲ್ನ ರಚನೆಯನ್ನು ಸರಳಗೊಳಿಸುವುದು, ಕಂಪನಿಯೊಳಗಿನ ಬ್ಯೂರೋಕ್ರಸಿ ವ್ಯವಸ್ಥೆ ಕಡಿಮೆ ಮಾಡುವುದು ಇದರ ಉದ್ದೇಶ.
ಗೂಗಲ್ಗೆ ಜಾಹೀರಾತುಗಳಿಂದ ಹೆಚ್ಚು ಆದಾಯ ಬರುತ್ತದೆ. ಇತ್ತೀಚೆಗೆ ಅದು ಕಡಿಮೆ ಆಗಿದೆ. ಇದೇ ಕಾರಣಕ್ಕೆ 2022ರಿಂದ ಈಚೆಗೆ 12,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಗೂಗಲ್ ಕೆಲಸದಿಂದ ತೆಗೆದುಹಾಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ