ಶೇ. 5.25ರಿಂದ ಶೇ. 5.50ರಲ್ಲಿ ಬಡ್ಡಿದರ ಮುಂದುವರಿಸಿದ ಅಮೆರಿಕ; ಬಡ್ಡಿ ಹೆಚ್ಚಳ ಸಾಧ್ಯತೆ ಇಲ್ಲ
US Interest rates maintained at 5.25to 5.50pc: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಕಳೆದ 23 ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿರುವ ಬಡ್ಡಿದರವನ್ನು ಸದ್ಯಕ್ಕೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಫೆಡ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್ ತಳ್ಳಿಹಾಕಿದ್ದಾರೆ. ಇದು ಷೇರುಪೇಟೆಯಲ್ಲಿ ಸಕಾರಾತ್ಮಕವಾದ ಸೂಚನೆಗಳನ್ನು ಕೊಟ್ಟಿದೆ. ಅಲ್ಲಿನ ಷೇರುಗಳು ಬೆಲೆ ಹೆಚ್ಚಳ ಕಾಣುತ್ತಿವೆ. ಬಾಂಡ್ಗಳ ಮೇಲೂ ಹೂಡಿಕೆ ಹೆಚ್ಚುತ್ತಿದೆ.
ವಾಷಿಂಗ್ಟನ್, ಮೇ 2: ಅಮೆರಿಕದಲ್ಲಿ ನಿರೀಕ್ಷೆಯಂತೆ ಬಡ್ಡಿದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ (Federal Reserve) ತನ್ನ ಬಡ್ಡಿದರವನ್ನು ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಿದೆ. ನಿನ್ನೆ ಬುಧವಾರ ನಡೆದ ಎಫ್ಒಎಂಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆಡರಲ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್ (Jerome Powell) ತಮ್ಮ ನೇತೃತ್ವದಲ್ಲಿ ನಡೆದ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಅಮೆರಿಕದಲ್ಲಿರುವ ಈಗಿನ ಬಡ್ಡಿದವವು ಕಳೆದ 23 ವರ್ಷಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ಕಳೆದ ಆರು ಬಾರಿಯ ಸಭೆಯಿಂದಲೂ ದರವನ್ನು ಇಳಿಸಲು ಸಾಧ್ಯವಾಗಿಲ್ಲ. ಫೆಡರಲ್ ರಿಸರ್ವ್ ನಿರೀಕ್ಷಿಸಿದ ರೀತಿಯಲ್ಲಿ ಹಣದುಬ್ಬರವೂ ಕಡಿಮೆ ಆಗುತ್ತಿಲ್ಲ. ಜಿರೋಮ್ ಪೋವೆಲ್ ಅವರು ಹಣದುಬ್ಬರದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ಸದ್ಯ ಅಮೆರಿಕದಲ್ಲಿ ಹಣದುಬ್ಬರ ಶೇ. 3.48ರಷ್ಟಿದೆ. ಇದನ್ನು ಶೇ. 2ಕ್ಕೆ ತರುವುದು ಸರ್ಕಾರದ ಗುರಿ. ಅಧಿಕ ಬಡ್ಡಿದರ ಜಾರಿಯಲ್ಲಿದ್ದರೂ ನಿರೀಕ್ಷಿತ ರೀತಿಯಲ್ಲಿ ಹಣದುಬ್ಬರ ಕಡಿಮೆ ಆಗುತ್ತಿಲ್ಲ. ಇದು ಫೆಡರಲ್ ರಿಸರ್ವ್ಗೆ ಕಳವಳ ತಂದಿದೆ. ಆರ್ಥಿಕತೆಗೆ ಪುಷ್ಟಿ ಕೊಡಲು ಬಡ್ಡಿದರ ಕಡಿಮೆ ಮಾಡಬೇಕು. ಆದರೆ, ಬಡ್ಡಿದರ ಕಡಿಮೆ ಮಾಡಿದರೆ ಹಣದುಬ್ಬರ ಮತ್ತೆ ಏರುತ್ತದೆ. ಒಂದು ರೀತಿಯಲ್ಲಿ ಇದು ಅತ್ತ ಧರಿ ಇತ್ತ ಪುಲಿ ಎನ್ನುವಂಥ ಪರಿಸ್ಥಿತಿ ಇದೆ.
ಆದರೆ, ಈ ಬಾರಿಯೋ ಅಥವಾ ಮುಂದಿನ ಬಾರಿಯೋ ಆಗದಿದ್ದರೂ ಶೀಘ್ರದಲ್ಲಿ ಬ್ಯಾಂಕ್ ಬಡ್ಡಿದರ ಕಡಿಮೆ ಮಾಡುವುದು ನಿಶ್ಚಿತವಾಗಿದೆ. ಹಣದುಬ್ಬರ ಗುರಿಯಂತೆ ಕಡಿಮೆಗೊಂಡರೆ ಬಡ್ಡಿದರ ಬೇಗ ಕಡಿಮೆ ಮಾಡಬಹುದು. ಎಫ್ಒಎಂಸಿಯ ಮುಂದಿನ ಸಭೆ ಜೂನ್ 11 ಮತ್ತು 12ಕ್ಕೆ ನಡೆಯಲಿದೆ.
ಇದನ್ನೂ ಓದಿ: ಭಾರತ ಸೂಪರ್ ಪವರ್ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್ ನಾಯಕ
ಷೇರು ಮಾರುಕಟ್ಟೆಯಿಂದ ಸಕಾರಾತ್ಮಕ ಸ್ಪಂದನೆ
ಈ ಬಾರಿ ಬಡ್ಡಿದರವನ್ನು ಕಡಿಮೆ ಮಾಡದೇ ಹೋದರೂ ಹೆಚ್ಚಳವನ್ನಂತೂ ಮಾಡುವುದಿಲ್ಲ ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ನೀಡಿದೆ. ಇದು ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವ ಜನರನ್ನು ಸಮಾಧಾನಗೊಳಿಸಿದೆ. ಪರಿಣಾಮವಾಗಿ ಅಮೆರಿಕದ ಷೇರುಗಳ ಬೆಲೆ ಏರಿದೆ. ಬಾಂಡ್ಗಳೂ ಕೂಡ ಹೆಚ್ಚುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ