ಬೆಂಗಳೂರು ಗುಲಾಬಿ ಈರುಳ್ಳಿ ರಫ್ತಿಗೆ ನಿರ್ಬಂಧ ರದ್ದು; ಸೆ. 29ರಿಂದಲೇ ಅನುಮತಿ; ಆದರೆ ಷರತ್ತುಗಳಿವೆ
Bangalore Rose Onion Exports: ತೀವ್ರ ಘಾಟು ಹೊಂದಿರುವ ಗುಲಾಬಿ ಈರುಳ್ಳಿಯ ಮೇಲೆ ಇದ್ದ ರಫ್ತು ಸುಂಕವನ್ನು ಕೇಂದ್ರ ಸರಕಾರ ಕೈಬಿಟ್ಟಿದೆ. ಬೆಂಗಳೂರು ರೋಸ್ ಈರುಳ್ಳಿಯನ್ನು ರಫ್ತು ಮಾಡುವವರು ಕರ್ನಾಟಕದ ತೋಟಗಾರಿಕೆ ಆಯುಕ್ತರಿಂದ ಪ್ರಮಾಣ ಪತ್ರ ಪಡೆಯಬೇಕು. ರಫ್ತಾಗುವ ಈರುಳ್ಳಿ ಪ್ರಮಾಣ ಮತ್ತು ಗುಣಮಟ್ಟದ ಖಾತ್ರಿ ಒದಗಿಸುವ ಈ ಪ್ರಮಾಣಪತ್ರ ಪಡೆದಿದ್ದರೆ ಮಾತ್ರ ರಫ್ತು ಸುಂಕದಿಂದ ವಿನಾಯಿತಿ ಸಿಗುತ್ತದೆ ಎಂದು ಹಣಕಾಸು ಸಚಿವಾಲಯ ಸೆ. 29ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಬೆಂಗಳೂರು, ಅಕ್ಟೋಬರ್ 1: ತೀವ್ರ ಘಾಟು ಹೊಂದಿರುವ ಗುಲಾಬಿ ಈರುಳ್ಳಿಯ (Bangalore Rose Onion) ಮೇಲೆ ಇದ್ದ ರಫ್ತು ಸುಂಕವನ್ನು ಕೇಂದ್ರ ಸರಕಾರ ಕೈಬಿಟ್ಟಿದೆ. ಕೆಲ ಷರತ್ತುಗಳ ಮೇಲೆ ಬೆಂಗಳೂರು ಗುಲಾಬಿ ಈರುಳ್ಳಿಯ ರಫ್ತಿಗೆ ಪೂರ್ಣಾನುಮತಿ ನೀಡಿ ಕೇಂದ್ರ ಹಣಕಾಸು ಸಚಿವಾಲಯ ಸೆಪ್ಟೆಂಬರ್ 29, ಶುಕ್ರವಾರದಂದು ಅಧಿಸೂಚನೆ ಹೊರಡಿಸಿದೆ. ಈ ಅನುಮತಿ ತತ್ಕ್ಷಣದಿಂದಲೇ ಜಾರಿ ಆಗುತ್ತದೆ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಬೆಂಗಳೂರು ಗುಲಾಬಿ ಈರುಳ್ಳಿಗೆ ರಫ್ತು ಸುಂಕ ವಿನಾಯಿತಿ ಸಿಗಲು ಏನಿದೆ ಷರುತ್ತು?
ಬೆಂಗಳೂರು ರೋಸ್ ಈರುಳ್ಳಿಯನ್ನು ರಫ್ತು ಮಾಡುವವರು ಕರ್ನಾಟಕದ ತೋಟಗಾರಿಕೆ ಆಯುಕ್ತರಿಂದ (Horticulture Department commissioner) ಪ್ರಮಾಣ ಪತ್ರ ಪಡೆಯಬೇಕು. ರಫ್ತಾಗುವ ಈರುಳ್ಳಿ ಪ್ರಮಾಣ ಮತ್ತು ಗುಣಮಟ್ಟದ ಖಾತ್ರಿ ಒದಗಿಸುವ ಈ ಪ್ರಮಾಣಪತ್ರ ಪಡೆದಿದ್ದರೆ ಮಾತ್ರ ರಫ್ತು ಸುಂಕದಿಂದ ವಿನಾಯಿತಿ ಸಿಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗದಂತೆ ಮತ್ತು ಬೆಲೆ ಏರಿಕೆ ಆಗದಂತೆ ನಿಯಂತ್ರಿಸಲು ಇದೇ ಆಗಸ್ಟ್ ತಿಂಗಳಲ್ಲಿ ಸರ್ಕಾರ ಎಲ್ಲಾ ಬಗೆಯ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ ವಿಧಿಸಿದೆ. ಈಗ ಗುಲಾಬಿ ಈರುಳ್ಳಿಗೆ ರಫ್ತು ಸುಂಕದಿಂದ ವಿನಾಯಿತಿ ಕೊಡಲಾಗಿದೆ.
ಘಾಟು ಘಾಟು ಗುಲಾಬಿ ಈರುಳ್ಳಿ
ಬೆಂಗಳೂರು ಸುತ್ತಮುತ್ತ ಬೆಳೆಯುವ ಒಂದು ವಿಧದ ಈರುಳ್ಳಿ ಇದು. ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುಲಾಬಿ ಈರುಳ್ಳಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ಸಣ್ಣಿಗಿರುವ ಈ ಈರುಳ್ಳಿ ಬಹಳ ಘಾಟು ಹೊಂದಿರುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಈರುಳ್ಳಿಗೆ ಅಷ್ಟೇನೂ ಬೇಡಿಕೆ ಇಲ್ಲ. ಆದರೆ, ನಾರಿನಂಶ ಹೆಚ್ಚು ಇರುವ ಈ ತಳಿಯ ಈರುಳ್ಳಿಗೆ ಸಿಂಗಾಪುರ, ಮಲೇಷ್ಯಾ ಮೊದಲಾದ ಕೆಲ ದೇಶಗಳಲ್ಲಿ ಬಹಳ ಬೇಡಿಕೆ ಇದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ
ಹೀಗಾಗಿ, ಗುಲಾಬಿ ಈರುಳ್ಳಿ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರಿ, ಮಾಮೂಲಿಯ ಈರುಳ್ಳಿಯನ್ನು ಖರೀದಿಸಿ ಊರಿಗೆ ಮರಳುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ