Tax Collections: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

Govt gets Rs 17 lakh crore net direct taxes this FY: ಈ ವರ್ಷ ಇಲ್ಲಿಯವರೆಗೆ (2025ರ ಏಪ್ರಿಲ್ 1ರಿಂದ ಡಿ. 17) ಸರ್ಕಾರಕ್ಕೆ 20 ಲಕ್ಷ ಕೋಟಿ ರೂಗೂ ಅಧಿಕ ನೇರ ತೆರಿಗೆ ಸಿಕ್ಕಿದೆ. ಇದರಲ್ಲಿ ರೀಫಂಡ್​ಗಳನ್ನು ಕಳೆದು ಉಳಿಯುವ ನಿವ್ವಳ ನೇರ ತೆರಿಗೆ 17.04 ಲಕ್ಷ ಕೋಟಿ ರೂ ಆಗಿದೆ. ಬಹುತೇಕ ಅರ್ಧದಷ್ಟು ತೆರಿಗೆಯು ಕಾರ್ಪೊರೇಟ್ ಟ್ಯಾಕ್ಸ್ ರೂಪದಲ್ಲಿ ಸರ್ಕಾರಕ್ಕೆ ಸಿಕ್ಕಿದೆ.

Tax Collections: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ
ಡೈರೆಕ್ಟ್ ಟ್ಯಾಕ್ಸ್

Updated on: Dec 19, 2025 | 3:25 PM

ನವದೆಹಲಿ, ಡಿಸೆಂಬರ್ 19: ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (2025ರ ಏಪ್ರಿಲ್ 1ರಿಂದ) ಭಾರತದಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಆಗಿರುವುದು ಕಂಡು ಬಂದಿದೆ. ಸರ್ಕರವೇ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಈ ವರ್ಷ ಇಲ್ಲಿಯವರೆಗೆ (ಡಿ. 17) ಸಂಗ್ರಹವಾದ ನಿವ್ವಳ ನೇರ ತೆರಿಗೆಯು (Net Direct Taxes) 17.04 ಲಕ್ಷ ಕೋಟಿ ರೂಗಿಂತಲೂ ಅಧಿಕ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಿಕ್ಕಿದುದಕ್ಕಿಂತಲೂ ಶೇ. 8ರಷ್ಟು ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಆಗಿದೆ.

ಈ ವರ್ಷದ ತೆರಿಗೆ ಸಂಗ್ರಹದಲ್ಲಿ ಏರಿಕೆ ಆಗಲು ಕಾರ್ಪೊರೇಟ್ ಟ್ಯಾಕ್ಸ್ ಕಲೆಕ್ಷನ್ ಏರಿರುವುದೂ ಒಂದು ಪ್ರಮುಖ ಕಾರಣವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ ನಿವ್ವಳ ಕಾರ್ಪೊರೇಟ್ ಟ್ಯಾಕ್ಸ್ 7.39 ಲಕ್ಷ ಕೋಟಿ ರೂ ಇತ್ತು. ಈ ವರ್ಷ ಅದು 8.17 ಲಕ್ಷ ಕೋಟಿ ರೂ ಆಗಿದೆ. ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್​ನಲ್ಲಿ ಬಹುತೇಕ ಅರ್ಧದಷ್ಟು ಪಾಲು ಕಾರ್ಪೊರೇಟ್ ಟ್ಯಾಕ್ಸ್​ನಿಂದ ಹೋಗಿದೆ.

ಇದನ್ನೂ ಓದಿ: ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ?

ಈ ಬಾರಿ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಲು ಮತ್ತೊಂದು ಕಾರಣವೆಂದರೆ ರೀಫಂಡ್ ಕಡಿಮೆ ಆಗಿರುವುದು. ಈ ವರ್ಷ ರೀಫಂಡ್ ಆಗಿರುವುದು 2.97 ಲಕ್ಷ ಕೋಟಿ ರೂ ಮಾತ್ರ. ಕಳೆದ ವರ್ಷದಕ್ಕೆ ಹೋಲಿಸಿದರೆ ರೀಫಂಡ್ ಶೇ. 13.52ರಷ್ಟು ಕಡಿಮೆಗೊಂಡಿದೆ. ರೀಫಂಡ್ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋದರೆ, ಒಟ್ಟೂ ನೇರ ತೆರಿಗೆಯಲ್ಲಿ ಆಗಿರುವ ಹೆಚ್ಚಳ ಶೇ. 4.16 ಮಾತ್ರ.

2025ರ ಏಪ್ರಿಲ್ 1ರಿಂದ ಡಿಸೆಂಬರ್ 17ರವರೆಗಿನ ನೇರ ತೆರಿಗೆ ಸಂಗ್ರಹ

  • ಒಟ್ಟು ನೇರ ತೆರಿಗೆ ಸಂಗ್ರಹ: 20,01,794 ಕೋಟಿ ರೂ
  • ರೀಫಂಡ್​ಗಳು: 2,97,069 ಕೋಟಿ ರೂ
  • ನಿವ್ವಳ ತೆರಿಗೆ: 17,04,725 ಕೋಟಿ ರೂ

ನಿವ್ವಳ ನೇರ ತೆರಿಗೆಯಲ್ಲಿ ಯಾವುದಕ್ಕೆಷ್ಟು?

  • ಕಾರ್ಪೊರೆಟ್ ಟ್ಯಾಕ್ಸ್: 8,17,310 ಕೋಟಿ ರೂ
  • ನಾನ್-ಕಾರ್ಪೊರೇಟ್ ಟ್ಯಾಕ್ಸ್: 8,46,905 ಕೋಟಿ ರೂ
  • ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್: 40,195 ಕೋಟಿ ರೂ

ಅಡ್ವಾನ್ಸ್ ಟ್ಯಾಕ್ಸ್ ಸುಮಾರು 7,88,388 ಕೋಟಿ ರೂ ಸಿಕ್ಕಿದೆ. ಇದರಲ್ಲಿ ಕಾರ್ಪೊರೇಟ್ ಅಡ್ವಾನ್ಸ್ ಟ್ಯಾಕ್ಸೇ 6 ಲಕ್ಷ ಕೋಟಿ ರೂಗೂ ಅಧಿಕ ಇದೆ. ಕಾರ್ಪೊರೇಟ್ ಅಲ್ಲದವರ ಅಡ್ವಾನ್ಸ್ ಟ್ಯಾಕ್ಸ್ ಬಂದಿರುವುದು 1,81,088 ಕೋಟಿ ರೂ ಮಾತ್ರವೇ. ಇಲ್ಲಿ ನೇರ ತೆರಿಗೆ ಎಂದರೆ ಇನ್ಕಮ್ ಟ್ಯಾಕ್ಸ್. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆದಾಯಕ್ಕೆ ನಿಗದಿತ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ವ್ಯಕ್ತಿಗಳೂ ಕೂಡ ತಮ್ಮ ಆದಾಯಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಇನ್ನು, ಡೈರೆಕ್ಟ್ ಟ್ಯಾಕ್ಸ್ ಅಲ್ಲದೇ, ಇನ್​ಡೈರೆಕ್ಟ್ ಟ್ಯಾಕ್ಸ್ ಸಿಸ್ಟಂ ಇದೆ. ಜಿಎಸ್​ಟಿ ಇತ್ಯಾದಿಯವು ಈ ಪರೋಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತವೆ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಕಳೆದ ವರ್ಷವಾದ 2024-25ರಲ್ಲಿ, ಅಂದರೆ 2024ರ ಎಪ್ರಿಲ್​ನಿಂದ 2025ರ ಮಾರ್ಚ್ 31ರವರೆಗೆ ಸಂಗ್ರಹವಾದ ಒಟ್ಟು ನೇರ ತೆರಿಗೆ 27.02 ಲಕ್ಷ ಕೋಟಿ ರೂ. ರೀಫಂಡ್​ಗಳನ್ನು ಕಳೆದು ಉಳಿಯುವ ನಿವ್ವಳ ನೇರ ತೆರಿಗೆ ಸಂಗ್ರಹ 22.26 ಲಕ್ಷ ಕೋಟಿ ರೂ ಆಗಿತ್ತು. ಈ ವರ್ಷ ಡಿಸೆಂಬರ್ 17ರವರೆಗೆಯೇ 17 ಲಕ್ಷ ಕೋಟಿ ರೂ ನಿವ್ವಳ ತೆರಿಗೆ ಆದಾಯವು ಸರ್ಕಾರಕ್ಕೆ ಸಿಕ್ಕಿದೆ. ಇನ್ನೂ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಬಾಕಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ