
ನವದೆಹಲಿ, ಜೂನ್ 5: ಜಿಎಸ್ಟಿ ಟ್ಯಾಕ್ಸ್ ಸ್ಲ್ಯಾಬ್ ರಚನೆಯಲ್ಲಿ (GST slabs) ಬದಲಾವಣೆ ತರುವ ಸಂಭವ ಇದೆ. ಶೇ. 12ರ ಸ್ಲ್ಯಾಬ್ ಅನ್ನೇ ತೆಗೆದುಹಾಕಲು ಯೋಜಿಸಲಾಗಿದೆ. ಇದೇನಾದರೂ ನಡೆದಲ್ಲಿ ನಾಲ್ಕು ತೆರಿಗೆಗಳಿರುವ ಟ್ಯಾಕ್ಸ್ ಸ್ಲ್ಯಾಬ್ ಮೂರು ತೆರಿಗೆಗಳಿಗೆ ಇಳಿಯಬಹುದು. ಸದ್ಯ, ಜಿಎಸ್ಟಿ ತೆರಿಗೆ ವ್ಯವಸ್ಥೆಯಲ್ಲಿ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಟ್ಯಾಕ್ಸ್ ಸ್ಲ್ಯಾಬ್ಗಳಿವೆ. ಇದರಲ್ಲಿ ಶೇ. 12ರ ದರ ಸದ್ಯದ ಮಟ್ಟಿಗೆ ಅಪ್ರಸ್ತುತವೆನಿಸಿದೆ. ಹೀಗಾಗಿ, ಈ ದರವನ್ನು ತೆಗೆದುಹಾಕಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಕೆಲ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ ತೆಗೆದುಹಾಕುವ ನಿರ್ಧಾರಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆಯಂತೆ. ಹೆಚ್ಚಿನ ರಾಜ್ಯಗಳ ಅಧಿಕಾರಿಗಳು, ವಿವಿಧ ತಜ್ಞರು, ಗ್ರೂಪ್ ಆಫ್ ಮಿನಿಸ್ಟರ್ಸ್ ಪ್ರತಿನಿಧಿಗಳು ಈ ಟ್ಯಾಕ್ಸ್ ರದ್ದು ಮಾಡುವ ನಿರ್ಧಾರಕ್ಕೆ ಬೆಂಬಲ ನೀಡಿರುವುದು ತಿಳಿದುಬಂದಿದೆ. ಒಂದು ವೇಳೆ, ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ ರದ್ದುಗೊಳಿಸಿದ್ದೇ ಆದಲ್ಲಿ, ಆ ತೆರಿಗೆ ಹೊಂದಿರುವ ವಸ್ತುಗಳನ್ನು ಶೇ. 5 ಅಥವಾ ಶೇ. 18ರ ಟ್ಯಾಕ್ಸ್ ಸ್ಲ್ಯಾಬ್ಗಳಿಗೆ ಮರುವಿಂಗಡಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಗಗನಕ್ಕೇರಿತಾ ಆರ್ಸಿಬಿ ಬ್ರ್ಯಾಂಡ್ ಮೌಲ್ಯ? ಜಾಗತಿಕ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ಹೇಗಿದೆ ರಾಯಲ್ ಚಾಲೆಂಜರ್ಸ್?
ಸಾಂದ್ರೀಕೃತ ಹಾಲು, 20 ಲೀಟರ್ ಕುಡಿಯುವ ನೀರಿನ ಬಾಟಲ್, ವಾಕಿ ಟಾಕಿ, ಬ್ಯಾಟಲ್ ಟ್ಯಾಂಕ್, ಕಾಂಟ್ಯಾಕ್ಟ್ ಲೆನ್ಸ್, ಬೆಣ್ಣೆ, ಖರ್ಜೂರ, ಡ್ರೈಫ್ರೂಟ್, ಫ್ರೋಜನ್ ತರಕಾರಿಗಳು, ಜ್ಯಾಮ್, ಜೆಲ್ಲಿ, ಹಣ್ಣಿನ ಜ್ಯೂಸ್, ಟೂತ್ ಪೌಡರ್, ಫೀಡಿಂಗ್ ಬಾಟಲ್, ಕಾರ್ಪೆಟ್, ಛತ್ರಿ, ಟೊಪ್ಪಿ, ಸೈಕಲ್, ಕೆಲ ಗೃಹೋಪಕರಣಗಳು, ಮರದ ಮೇಜು, ಪೆನ್ಸಿಲ್, ಕ್ರೇಯಾನ್, ಹ್ಯಾಂಡ್ ಬ್ಯಾಗ್, ಕಾಟನ್ನಲ್ಲಿ ಮಾಡಿದ ಶಾಪಿಂಗ್ ಬ್ಯಾಗ್, 1,000 ರೂ ಒಳಗಿನ ಪಾದರಕ್ಷೆ, ಡಯಾಗ್ನಾಸ್ಟಿಕ್ ಕಿಟ್, ಗ್ರಾನೈಟ್ ಬ್ಲಾಕ್ ಇತ್ಯಾದಿ ವಸ್ತುಗಳು ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ನಲ್ಲಿವೆ.
ಕೆಲ ವರ್ಗದ ಸೇವೆಗಳನ್ನು ಶೇ. 12 ಟ್ಯಾಕ್ಸ್ ಸ್ಲ್ಯಾಬ್ನಲ್ಲಿ ಒಳಗೊಳ್ಳಲಾಗಿದೆ. ಎಕನಾಮಿ ಅಲ್ಲದ ಕ್ಲಾಸ್ಗಳಲ್ಲಿನ ವಿಮಾನ ಪ್ರಯಾಣಕ್ಕೂ ಈ ತೆರಿಗೆ ಇದೆ.
ಇದನ್ನೂ ಓದಿ: ಅಡವಿಟ್ಟ ಚಿನ್ನ, ಲಾಕರ್ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್
ಮುಂಬರುವ ಜಿಎಸ್ಟಿ ಕೌನ್ಸಿಲ್ ಸಭೆ ಈ ತಿಂಗಳು ಅಥವಾ ಮುಂದಿನ ತಿಂಗಳು (ಜುಲೈ) ನಡೆಯುವ ಸಾಧ್ಯತೆ ಇದೆ. ಟ್ಯಾಕ್ಸ್ ಸ್ಲ್ಯಾಬ್ ಪರಿಷ್ಕರಣೆ ಸೇರಿದಂತೆ ಇನ್ನೂ ಕೆಲ ಮಹತ್ವದ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಬಹುದು. ಕೇಂದ್ರ ಹಣಕಾಸು ಸಚಿವೆ ಹಾಗೂ ವಿವಿಧ ರಾಜ್ಯಗಳ ಹಣಕಾಸು ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ