ಅಡವಿಟ್ಟ ಚಿನ್ನ, ಲಾಕರ್ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್
What happens when customer's gold is lost by bank: ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಲ್ಲಿ ನೀವು ಸಾಲಕ್ಕಾಗಿ ಅಡವಿಟ್ಟ ಚಿನ್ನವು ಕಳುವಾಗಿ ಹೋದರೆ ಗ್ರಾಹಕರು ತೀರಾ ತಲೆಕೆಡಿಸಿಕೊಳ್ಳುವ ಹಂಗಿಲ್ಲ. ಚಿನ್ನದ ಮೌಲ್ಯದಷ್ಟು ಹಣವನ್ನು ನಿಮ್ಮ ಸಾಲಕ್ಕೆ ವಜಾ ಹಾಕಲಾಗುತ್ತದೆ. ಒಂದು ವೇಳೆ ಬ್ಯಾಂಕ್ ಲಾಕರ್ ಕಳುವಾದಲ್ಲಿ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಹಣವನ್ನು ಗ್ರಾಹಕರು ಪಡೆಯಲು ಸಾಧ್ಯ.

ಬೆಂಗಳೂರು, ಜೂನ್ 4: ಕೆನರಾ ಬ್ಯಾಂಕ್ನಲ್ಲಿ ಮೊನ್ನೆ 59 ಕಿಲೋ ಚಿನ್ನದ ಕಳ್ಳತನವಾದ (Gold burglary) ಪ್ರಕರಣ ಗಮನಿಸಿರಬಹುದು. ಅದು ಸಾಲಕ್ಕಾಗಿ ಅಡವಿಟ್ಟಿದ್ದ ಚಿನ್ನ. ಬ್ಯಾಂಕುಗಳಲ್ಲಿ ಹೀಗೆ ಅಡವಿಡಲಾದ ಸಾಕಷ್ಟು ಚಿನ್ನ, ಆಸ್ತಿಪತ್ರಗಳು ಇರುತ್ತವೆ. ಹಾಗೆಯೇ, ಗ್ರಾಹಕರು ಲಾಕರ್ಗಳಲ್ಲೂ (bank lockers) ಬೆಲೆ ಬಾಳುವ ವಸ್ತುಗಳನ್ನು ಇರಿಸುತ್ತಾರೆ. ಈ ರೀತಿ ಇಟ್ಟ ಚಿನ್ನ ಇತ್ಯಾದಿ ವಸ್ತುಗಳು ಕಳುವಾದಾಗ ಏನಾಗುತ್ತದೆ? ಕಳುವಿಗೆ ಬ್ಯಾಂಕೇ ಹೊಣೆ. ಆದರೆ, ಎಷ್ಟು ಹೊಣೆ ಎಂಬುದು ಪ್ರಶ್ನೆ. ಈ ಬಗ್ಗೆ ಉತ್ತರ…
ಅಡವಿಟ್ಟ ಚಿನ್ನ ಕಳುವಾದಾಗ ಏನು?
ಕೆನರಾ ಬ್ಯಾಂಕ್ ಪ್ರಕರಣದಲ್ಲಾದಂತೆ, ನೀವು ಚಿನ್ನ ಅಡ ಇಟ್ಟು ಸಾಲ ಪಡೆದಾಗ ಅಕಸ್ಮಾತ್ ಆ ಚಿನ್ನವು ಕಳ್ಳತನ ಆಗಿ ಹೋದರೆ ಏನಾಗುತ್ತದೆ? ನಿಯಮಗಳ ಪ್ರಕಾರ, ನೀವು ಚಿನ್ನ ಅಡ ಇಟ್ಟಾಗ ಸಾಲ ಮರಳುವವರೆಗೂ ಅದು ಬ್ಯಾಂಕ್ ಆಸ್ತಿಯೇ ಆಗಿರುತ್ತದೆ. ಗ್ರಾಹಕರು ಚಿನ್ನಕ್ಕೆ ಪರ್ಯಾಯವಾಗಿ ಚಿನ್ನವನ್ನು ಪಡೆಯಲು ಆಗುವುದಿಲ್ಲ.
ನೀವು ಗೋಲ್ಡ್ ಲೋನ್ ಪಡೆಯುವಾಗ ಚಿನ್ನದ ಮೌಲ್ಯಮಾಪನ ಅಥವಾ ಅಸೆಸ್ಮೆಂಟ್ ಮಾಡಲಾಗುತ್ತದೆ. ಚಿನ್ನದ ಶುದ್ಧತೆ, ತೂಕ, ಹಾಗೂ ಅದರ ಮೌಲ್ಯವನ್ನು ರಸೀದಿಯಲ್ಲಿ ನಮೂದಿಸಲಾಗಿರುತ್ತದೆ. ಅದು ಬಹಳ ಮುಖ್ಯವಾದ ದಾಖಲೆ. ನಿಮ್ಮ ಚಿನ್ನ ಕಳುವಾದಾಗ ಈ ದಾಖಲೆಯೇ ನಿಮಗೆ ಆಧಾರ. ಇದರಲ್ಲಿ ನಮೂದಿಸಲಾಗಿರುವ ಮೌಲ್ಯದ ಹಣವನ್ನು ನೀವು ಕ್ಲೇಮ್ ಮಾಡಬಹುದು. ಬ್ಯಾಂಕ್ ಈ ಹಣವನ್ನು ನಿಮ್ಮ ಬಾಕಿ ಸಾಲಕ್ಕೆ ವಜಾ ಹಾಕಿ, ಉಳಿದದ್ದನ್ನು ಮರಳಿಸಬಹುದು.
ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್
ನೀವು ಅಡವಿಟ್ಟು ಒಂದು ವರ್ಷದ ಮೇಲಾಗಿದ್ದು, ಅದರ ಮಾರುಕಟ್ಟೆ ಮೌಲ್ಯ ಈಗ ಬಹಳಷ್ಟು ಹೆಚ್ಚಾಗಿದ್ದಾಗ ಬ್ಯಾಂಕ್ನಲ್ಲಿ ಕೇಳಲು ಸಾಧ್ಯ. ಆದರೆ, ಇದಕ್ಕೆ ಬ್ಯಾಂಕ್ ಒಪ್ಪಬೇಕೆಂಬ ನಿಯಮ ಇಲ್ಲ.
ಲಾಕರ್ನಲ್ಲಿ ಇಟ್ಟ ಚಿನ್ನ ಕಳ್ಳತನ ಆದರೆ?
ಮನೆಯಲ್ಲಿ ಇಡುವುದು ಸುರಕ್ಷಿತವಲ್ಲ ಎಂದು ನೀವು ಬ್ಯಾಂಕ್ನ ಲಾಕರ್ನಲ್ಲಿ ಚಿನ್ನ ಇಟ್ಟಿರಬಹುದು. ಒಂದು ವೇಳೆ ಲಾಕರ್ ಕಳ್ಳತನವಾಗಿಯೋ ಅಥವಾ ಪ್ರಕೃತಿ ವಿಕೋಪದಿಂದ ನಾಶವಾಗಿಯೂ ಆ ಚಿನ್ನ ಕಳೆದುಹೋದರೆ ಮುಂದೇನು?
ಈ ಸಂದರ್ಭದಲ್ಲಿ ಲಾಕರ್ನ ವಾರ್ಷಿಕ ಬಾಡಿಗೆಯ 100 ಪಟ್ಟು ಹಣ ಮಾತ್ರವೇ ನಿಮಗೆ ಸಿಗಬಹುದು. ಒಂದು ವೇಳೆ, ನೀವು 50 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಲಾಕರ್ನಲ್ಲಿ ಇಟ್ಟಿದ್ದರೆ, ಅಷ್ಟಕ್ಕೂ ನಿಮಗೆ ಪರಿಹಾರ ಸಿಕ್ಕೋದಿಲ್ಲ.
ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್
ಇನ್ಷೂರೆನ್ಸ್ ಮಾಡಿಸಿರಬೇಕು…
ನೀವು ಲಾಕರ್ನಲ್ಲಿರುವ ವಸ್ತುಗಳಿಗೆ ಪ್ರತ್ಯೇಕವಾಗಿ ಇನ್ಷೂರೆನ್ಸ್ ಮಾಡಿಸಿರಬೇಕು. ಲಾಕರ್ನಲ್ಲಿರುವ ವಸ್ತುಗಳು ನಿಮ್ಮವು ಎನ್ನುವುದಕ್ಕೆ ದಾಖಲೆಗಳು ಬೇಕು. ಚಿನ್ನ ಇರಿಸಿದ್ದರೆ ಅದನ್ನು ಎಲ್ಲಿ ಖರೀದಿಸಿದ್ದೀರಿ, ಅದರ ರಸೀದಿ ಇರಬೇಕು. ಹೀಗಿದ್ದಾಗ ನಿಮ್ಮ ವಸ್ತುಗಳ ಮೌಲ್ಯದಷ್ಟು ಹಣವನ್ನು ವಿಮಾ ಕಂಪನಿಗಳು ಭರಿಸಬಹುದು.
ಬ್ಯಾಂಕುಗಳು ಸಾಮಾನ್ಯವಾಗಿ ಚಿನ್ನ ಇತ್ಯಾದಿ ವಸ್ತುಗಳಿಗೆ ಇನ್ಷೂರೆನ್ಸ್ ಮಾಡಿಸುತ್ತವೆ. ಇದರ ಮೂಲಕ ಬ್ಯಾಂಕುಗಳು ಒಂದಷ್ಟು ಪರಿಹಾರ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








