ನವದೆಹಲಿ: ಡ್ರೀಮ್ ಇಲವೆನ್ ಇತ್ಯಾದಿ ಕಂಪನಿಗಳು ನಡೆಸುವ ಆನ್ಲೈನ್ ಫ್ಯಾಂಟಸಿ ಗೇಮ್ ಉದ್ಯಮಕ್ಕೆ (Online Gaming) ಶೇ. 28ರಷ್ಟು ಜಿಎಸ್ಟಿ ವಿಧಿಸಿದ್ದಕ್ಕೆ ಮತ್ತು ಈ ಕೌಶಲ್ಯದ ಕ್ರೀಡೆಯನ್ನು (Skill Based Game) ಜೂಜಾಟಗಳೊಂದಿಗೆ (Chance Based Game) ಥಳುಕು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 11ರಂದು ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಆನ್ಲೈನ್ ಗೇಮಿಂಗ್ ಸೇರಿದಂತೆ ಒಟ್ಟಾರೆ ಗೇಮಿಂಗ್ ವಲಯಕ್ಕೆ ಶೇ. 28ರಷ್ಟು ಜಿಎಸ್ಟಿ ವಿಧಿಸುತ್ತಿರುವುದಾಗಿ ಘೋಷಿಸಿದರು. ಕ್ರಿಕ್ಪೆ ಎಂಬ ಫ್ಯಾಂಟಸಿ ಸ್ಪೋರ್ಟ್ಸ್ ಲೀಗ್ ಸ್ಥಾಪಕ ಅಶ್ನೀರ್ ಗ್ರೋವರ್ ಕೇಂದ್ರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೇಮಿಂಗ್ ಉದ್ಯಮ ಈಗಾಗಲೇ ಶೇ. 28ರಷ್ಟು ತೆರಿಗೆ ಕಟ್ಟುತ್ತಿದೆ. ಇದರ ಜೊತೆಗೆ ಮತ್ತೆ 28 ಪರ್ಸೆಂಟ್ ಜಿಎಸ್ಟಿ ವಿಧಿಸಿ ಉದ್ಯಮವನ್ನೇ ಕೊಂದುಬಿಟ್ರಿ ಎಂದು ಗ್ರೋವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೇಮಿಂಗ್ನ ಅನುಶಾಸನಗಳು ಪರಿವರ್ತನೆ ಕಂಡಿವೆ. ಆನ್ಲೈನ್ ಗೇಮ್ಗಳು ಜೂಜಾಟ ಅಲ್ಲ ಎಂದು ನಿರೂಪಿಸಿದ್ದೇವೆ. ಸುಪ್ರೀಂಕೋರ್ಟ್ನಲ್ಲಿ ಅಗ್ನಿಪರೀಕ್ಷೆ ಗೆದ್ದಿದ್ದೇವೆ. ಆನ್ಲೈನ್ ಗೇಮಿಂಗ್ ಎಂಬುದು ಕೌಶಲ್ಯತೆ ಬೇಡುವ ಆಟ ಎಂದು ಆಶ್ನೀರ್ ಗ್ರೋವರ್ ಸಿಡಿಮಿಡಿಗೊಂಡಿದ್ದಾರೆ.
‘ಜಿಎಸ್ಟಿ ದರ ಹೆಚ್ಚಿಸುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಆಗುವುದಿಲ್ಲ. ನೀವು ಈ ನಿರ್ಧಾರ ಹಿಂಪಡೆಯದಿದ್ದರೆ ಇಡೀ ಉದ್ಯಮವೇ ಅಂತ್ಯಗೊಳ್ಳುತ್ತದೆ’ ಎಂದು ಕ್ರಿಕ್ಪೇ ಸಂಸ್ಥಾಪಕರು ವ್ಯಾಕುಲಗೊಂಡಿದ್ದಾರೆ.
ಇದನ್ನೂ ಓದಿ: Lithium Mining: ಲಿಥಿಯಂ ಮೈನಿಂಗ್ ಹರಾಜಿಗೆ ಕೇಂದ್ರ ಅನುಮೋದನೆ; ಆರು ಖನಿಜಗಳ ಗಣಿಗಾರಿಕೆಗೆ ಇದ್ದ ನಿಷೇಧ ಹಿಂತೆಗೆತ
ಆಶ್ನೀರ್ ಗ್ರೋವರ್ ಮಾತ್ರವಲ್ಲ ಮೋಹನ್ ದಾಸ್ ಪೈ ಸೇರಿದಂತೆ ಇತರ ವಲಯದ ಬಹಳಷ್ಟು ಉದ್ಯಮಿಗಳು ಗೇಮಿಂಗ್ ಉದ್ಯಮಕ್ಕೆ ಶೇ. 28ರಷ್ಟು ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕೇಂದ್ರದ ನಿರ್ಧಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗೇಮಿಂಗ್ ಉದ್ಯಮದಲ್ಲಿ ಪೂರ್ಣ ಫೇಸ್ ವ್ಯಾಲ್ಯೂ ಮೇಲೆ ಶೇ. 28ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇಲ್ಲಿ ಫೇಸ್ವ್ಯಾಲ್ಯೂ ಎಂದರೆ ಗೇಮ್ ಆಡಲು ಆಟಗಾರ ತೆರುವ ಬೆಟ್ ಅಥವಾ ಎಂಟ್ರಿ ಫೀ ಅಂಥ ಯಾವುದಾದರೂ ಶುಲ್ಕ. ಈಗಿರುವ ವ್ಯವಸ್ಥೆಯಲ್ಲಿ ಗೇಮಿಂಗ್ ಕಂಪನಿಗಳು ಪ್ಲಾಟ್ಫಾರ್ಮ್ ಶುಲ್ಕವಾಗಿ ಶೇ. 18ರಷ್ಟು ತೆರಿಗೆ ಪಾವತಿಸುತ್ತಿವೆ. ಈಗ ಮಾಡಲಾಗುತ್ತಿರುವ ಬದಲಾವಣೆ ಪ್ರಕಾರ ಇಡೀ ಗೇಮಿಂಗ್ ಹಣಕ್ಕೆ ಶೇ. 28ರಷ್ಟು ಜಿಎಸ್ಟಿ ಇರುತ್ತದೆ.
ಇಲ್ಲಿ ಒಬ್ಬ ವ್ಯಕ್ತಿ ಕ್ಯಾಸಿನೋ, ಕುದುರೆ ಜೂಜು ಅಥವಾ ಆನ್ಲೈನ್ ಗೇಮಿಂಗ್ನಲ್ಲಿ ಗೆಲ್ಲುವ ಹಣಕ್ಕೆ ಪ್ರತ್ಯೇಕ ಶೇ. 30ರಷ್ಟು ಟಿಡಿಎಸ್ ಇರುತ್ತದೆ. ಅದರ ಜೊತೆಗೆ ಈಗ ಶುಲ್ಕ ಹಣಕ್ಕೆ ಶೇ. 28ರಷ್ಟು ಜಿಎಸ್ಟಿಯೂ ಸೇರುತ್ತದೆ.
ಇದನ್ನೂ ಓದಿ: Cess: ಎಸ್ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್ಯುವಿ ಕಾರುಗಳು?
ಜಿಎಸ್ಟಿ ಹೆಚ್ಚಳದಿಂದ ನಾವು ಆನ್ಲೈನ್ ಗೇಮಿಂಗ್ ಆಗಲೀ, ಕ್ಯಾಸಿನೋ, ಕುದುರೆ ರೇಸಿಂಗ್ ಉದ್ಯಮವನ್ನಾಗಲೀ ಕೊಲ್ಲಲು ಹೊರಟಿಲ್ಲ. ಈ ಗೇಮ್ಗಳು ಬಹಳ ಸಂಕೀರ್ಣಗೊಂಡಿವೆ. ಪಾರದರ್ಶಕತೆ ಇಲ್ಲದ ಈ ಉದ್ಯಮದ ಮುಸುಕನ್ನು ತೆಗೆಯುವುದು ಕಷ್ಟಸಾಧ್ಯ. ಅದ್ದರಿಂದ ನಾವು ಗೇಮಿಂಗ್ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಮೊನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ ಗೇಮಿಂಗ್ ಅನ್ನು ಜೂಜಾಟಗಳ ಜೊತೆ ಸೇರಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ತೆರಿಗೆ ಉದ್ದೇಶಕ್ಕೆ ಮಾತ್ರ ಈ ವರ್ಗೀಕರಣ ಮಾಡಿದ್ದೇವೆಯೇ ಹೊರತು ಆನ್ಲೈನ್ ಗೇಮಿಂಗ್ ಅನ್ನು ಜೂಜಾಟವೆಂದು ವ್ಯಾಖ್ಯಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ಆನ್ಲೈನ್ ಗೇಮಿಂಗ್ ಉದ್ಯಮ ಸದ್ಯ 1.5 ಬಿಲಿಯನ್ ಡಾಲರ್ನಷ್ಟು ಬೃಹತ್ತಾಗಿದೆ. ಅಂದರೆ 12,000 ಕೋಟಿ ರೂ ಮೊತ್ತದ ಉದ್ಯಮ ಇದು. ಡ್ರೀಮ್11 ಸೇರಿದಂತೆ ಸಾವಿರಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟಪ್ಗಳಿವೆ. ಜಾಗತಿಕವಾಗಿ 200 ಬಿಲಿಯನ್ ಡಾಲರ್ನಷ್ಟು ಬೃಹತ್ತಾಗಿರುವ ಆನ್ಲೈನ್ ಗೇಮಿಂಗ್ ಉದ್ಯಮ ಭಾರತದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಬೆಳೆಯುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Thu, 13 July 23