ನವದೆಹಲಿ, ನವೆಂಬರ್ 1: ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆಗಳ ಭರ್ಜರಿ ಫಸಲು ಮುಂದುವರಿದಿದೆ. ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್ಟಿ ತೆರಿಗೆಗಳು ಸರಕಾರಕ್ಕೆ ಸಲ್ಲಿಕೆ ಆಗಿವೆ. ಕಳೆದ ಆರು ತಿಂಗಳಲ್ಲೇ ಅತಿ ಹೆಚ್ಚು ಸಂಗ್ರಹವಾದ ಜಿಎಸ್ಟಿ ಮೊತ್ತ ಇದಾಗಿದೆ. ಕಳೆದ ಎಂಟು ತಿಂಗಳಿಂದಲೂ ಪ್ರತೀ ತಿಂಗಳು ಕನಿಷ್ಠ 1.7 ಲಕ್ಷ ಕೋಟಿ ರೂನಷ್ಟಾದರೂ ಜಿಎಸ್ಟಿ ಸಂಗ್ರಹವಾಗುತ್ತಿರುವುದು ಗಮನಾರ್ಹದ ಸಂಗತಿ.
2024ರ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1,73,240 ಕೋಟಿ ರೂ ಇತ್ತು. 2023ರ ಅಕ್ಟೋಬರ್ ತಿಂಗಳಲ್ಲಿ 1.72 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹ ಆಗಿತ್ತು. ಮಾಸಿಕ ಲೆಕ್ಕದಲ್ಲಿ ಜಿಎಸ್ಟಿ ಸಂಗ್ರಹ ಶೇ. 8.1ರಷ್ಟು ಹೆಚ್ಚಾಗಿದೆ. ವರ್ಷವಾರು ಲೆಕ್ಕದಲ್ಲಿ ಶೇ. 8.9ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ
2024ರ ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 2.1 ಲಕ್ಷ ಕೋಟಿ ರೂನಷ್ಟಿತ್ತು. ಅದು ಇದೂವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಸರಾಸರಿ ಮಾಡಿಕ ತೆರಿಗೆ ಸಂಗ್ರಹ 1.86 ಲಕ್ಷ ಕೋಟಿ ರೂ ಇತ್ತು. ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟೆಂಬರ್ನ ಅವಧಿಯಲ್ಲಿ ಸರಾಸರಿ ಮಾಸಿಕ ತೆರಿಗೆ ಸಂಗ್ರಹ 1.77 ಲಕ್ಷ ಕೋಟಿ ರೂಗೆ ಇಳಿಕೆ ಆಗಿದೆ. ಆದರೆ, ಕಳೆದ ಎಂಟು ತಿಂಗಳಿಂದ ಪ್ರತೀ ತಿಂಗಳು ಕನಿಷ್ಠ 1.7 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ ಆಗುತ್ತಿದೆ.
ಎರಡನೇ ಕ್ವಾರ್ಟರ್ನಲ್ಲಿ ಸರಾಸರಿ ಮಾಸಿಕ ಜಿಎಸ್ಡಿ ಸಂಗ್ರಹ ಕಡಿಮೆ ಆಗಿರುವುದು ಗ್ರಾಹಕ ವೆಚ್ಚ ಮಂದಗೊಂಡಿರುವ ಸಂಕೇತ ಎಂದು ಭಾವಿಸಲಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇತ್ತೀಚಿನ ತಿಂಗಳುಗಳಲ್ಲಿ ಗ್ರಾಹಕ ಅನುಭೋಗ ಪ್ರಮಾಣ ಕಡಿಮೆ ಆಗಿರುವುದು ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?
ಈ ಬಾರಿ ಹಬ್ಬದ ಸೀಸನ್ನಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುವುದರಿಂದ ಜಿಎಸ್ಟಿ ಸಂಗ್ರಹ ಹೆಚ್ಚಾಗಬಹುದಾದರೂ ಒಟ್ಟಾರೆಯಾಗಿ ಮುಂಬರುವ ದಿನಗಳಲ್ಲಿ ಎಚ್ಚರಿಕೆಯಿಂದಿರಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ