AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?

PM Suryaghar muft bijli yojana: ಪಿಎಂ ಸೂರ್ಯಘರ್ ಯೋಜನೆ ಫೆಬ್ರುವರಿಯಲ್ಲಿ ಆರಂಭವಾಗಿದ್ದು, ಆರು ತಿಂಗಳಲ್ಲಿ ದೇಶಾದ್ಯಂತ 1.8 ಗಿಗಾವ್ಯಾಟ್​ನಷ್ಟು ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ರೂಫ್​ಟಾಪ್ ಸೋಲಾರ್​ಗಳ ಸ್ಥಾಪನೆಯಾಗಿದೆ. ದೇಶಾದ್ಯಂತ ಮೇಲ್ಛಾವಣಿ ಸೌರ ವಿದ್ಯುತ್ ಅಳವಡಿಕೆ ಆರು ತಿಂಗಳಲ್ಲಿ ಶೇ. 50ರಷ್ಟು ಹೆಚ್ಚಾಗಿದೆ.

ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?
ಪಿಎಂ ಸೂರ್ಯಘರ್ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2024 | 11:22 AM

Share

ನವದೆಹಲಿ, ನವೆಂಬರ್ 1: ಪರಿಸರಸ್ನೇಹಿ ಇಂಧನ ಹೆಚ್ಚಿಸಬೇಕೆನ್ನುವ ಸರ್ಕಾರದ ಗುರಿಯೊಂದಿಗೆ ಚಾಲನೆಯಲ್ಲಿರುವ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಇತ್ತೀಚೆಗೆ ವೇಗವಾಗಿ ವ್ಯಾಪಿಸುತ್ತಿದೆ. ಮಾಳಿಗೆ ಮೇಲಿನ ಸೋಲಾರ್ ಅಳವಡಿಕೆ ಪ್ರಮಾಣ ಕೇವಲ ಆರು ತಿಂಗಳಲ್ಲಿ ಶೇ. 50ರಷ್ಟು ಹೆಚ್ಚಿದೆ. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಇದೇ ಫೆಬ್ರುವರಿ ತಿಂಗಳಲ್ಲಿ ಸರ್ಕಾರವು ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಆರಂಭಿಸಿತು. ಈ ಯೋಜನೆ ಅಡಿ ಇಲ್ಲಿಯವರೆಗೆ ದೇಶಾದ್ಯಂತ ನಾಲ್ಕು ಲಕ್ಷ ಮನೆಗಳ ಛಾವಣಿ ಮೇಲಿನ ಸೌರ ವಿದ್ಯುತ್ ವ್ಯವಸ್ಥೆ ಸ್ಥಾಪಿಸಲಾಗಿದೆ. ಇದರಿಂದ ಒಟ್ಟು 1.8 ಗಿಗಾವ್ಯಾಟ್​ನಷ್ಟು ಸೌರ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ನಿರ್ಮಾಣವಾಗಿದೆ.

ಪಿಎಂ ಸೂರ್ಯಘರ್ ಯೋಜನೆಗೆ ಮುನ್ನ ದೇಶದಲ್ಲಿ ಮನೆಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಇತ್ತು. 2024ರ ಮಾರ್ಚ್​ವರೆಗೂ ಇದ್ದ ಮಾಹಿತಿ ಪ್ರಕಾರ ಭಾರತದಲ್ಲಿ ಮನೆಗಳ ಮೇಲ್ಛಾವಣಿ ಸೌರ ವಿದ್ಯುತ್ ಸಾಮರ್ಥ್ಯ 3.2 ಗಿಗಾವ್ಯಾಟ್​ನಷ್ಟಿತ್ತು. ಪಿಎಂ ಸೂರ್ಯಘರ್ ಯೋಜನೆ ಬಂದ ಬಳಿಕ ಗೃಹ ಮೇಲ್ಛಾವಣಿ ಸೋಲಾರ್ ವ್ಯವಸ್ಥೆಯ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 5 ಗಿಗಾ ವ್ಯಾಟ್​ನಷ್ಟಾಗಿದೆ.

ಇದನ್ನೂ ಓದಿ: ನವೆಂಬರ್ 1ರಿಂದ ಎಸ್​ಬಿಐ ಕ್ರೆಡಿಟ್ ಕಾರ್ಡ್​ನ ವಿವಿಧ ಶುಲ್ಕಗಳಲ್ಲಿ ಬದಲಾವಣೆ, ಗಮನಿಸಿ

ಏನಿದು ಪಿಎಂ ಸೂರ್ಯಘರ್ ಯೋಜನೆ?

ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಸೂರ್ಯನ ಶಾಖದಿಂದ ವಿದ್ಯುತ್ ಸಂಗ್ರಹಿಸುವ ಯೋಜನೆ ಇದು. ಗೃಹಬಳಕೆಗೆ ಅಗತ್ಯ ಇರುವ ವಿದ್ಯುತ್ ಅನ್ನು ಇದರಿಂದಲೇ ಉತ್ಪಾದಿಸುವುದು, ಹಾಗು ಹೆಚ್ಚುವರಿ ವಿದ್ಯುತ್ ಇದ್ದರೆ ಅದನ್ನು ಸರ್ಕಾರಕ್ಕೆ ಮಾರಿ ಅದರಿಂದ ಜನರು ಹೆಚ್ಚುವರಿ ಆದಾಯ ಪಡೆಯುವುದು, ಈ ಯೋಜನೆಯ ಪ್ರಮುಖ ಅಂಶ.

ಒಂದು ಕಿಲೋವ್ಯಾಟ್​ನಿಂದ ಮೂರು ಕಿಲೋವ್ಯಾಟ್​ವರೆಗೂ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಯೂನಿಟ್ ಅನ್ನು ಅಳವಡಿಸುವ ಅವಕಾಶ ಇದೆ. 1-2 ಕಿವ್ಯಾ ಯುನಿಟ್ ಸ್ಥಾಪನೆಗೆ ಸರ್ಕಾರ 30,000ದಿಂದ 60,000 ರೂವರೆಗೂ ಸಬ್ಸಿಡಿ ನೀಡುತ್ತದೆ. ಇದರಲ್ಲಿ 150 ಯುನಿಟ್​ವರೆಗೂ ವಿದ್ಯುತ್ ಉತ್ಪಾದನೆ ಸಾಧ್ಯ.

ಇನ್ನು, 2-3 ಕಿ.ವ್ಯಾಟ್ ಸೌರವಿದ್ಯುತ್ ಘಟಕ ಸ್ಥಾಪನೆ ಮಾಡಿದರೆ 60,000ದಿಂದ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ. ಇದರಲ್ಲಿ 300 ಯೂನಿಟ್​ವರೆಗೂ ವಿದ್ಯುತ್ ಪಡೆಯಲು ಸಾಧ್ಯ.

ಇನ್ನು, ಮೂರು ಕಿ.ವ್ಯಾಟ್​.ಗಿಂತಲೂ ಹೆಚ್ಚು ಸಾಮರ್ಥ್ಯದ ಯೂನಿಟ್ ಸ್ಥಾಪನೆ ಮಾಡಬಹುದಾದರೂ ಸರ್ಕಾರದಿಂದ ಸಿಗುವ ಸಬ್ಸಿಡಿ 78,000 ರೂಗೆ ಮಿತಿಗೊಂಡಿರುತ್ತದೆ.

ಇದನ್ನೂ ಓದಿ: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್​ಗಳ ಮೈಲಿಗಲ್ಲು; ಷೇರುಮಾರುಕಟ್ಟೆಗೊಂದು ಹೊಸ ಗರಿ

ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪಿಎಂ ಸೂರ್ಯಘರ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmsuryaghar.gov.in/
  • ಮುಖ್ಯಪುಟದ ಎಡಬದಿಯಲ್ಲಿ ಇರುವ ‘ಅಪ್ಲೈ ಫಾರ್ ರೂಫ್​ಟಾಪ್ ಸೋಲಾರ್’ ಬಟನ್ ಕ್ಲಿಕ್ ಮಾಡಿ.
  • ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ.
  • ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ಡಿಸ್ಕಾಂ ಕಂಪನಿಯನ್ನು ಆಯ್ದುಕೊಳ್ಳಿ. ನಿಮ್ಮ ವಿದ್ಯುತ್ ಬಿಲ್​ನಲ್ಲಿರುವ ಕಸ್ಟಮರ್ ಅಕೌಂಟ್ ನಂಬರ್ ನಮೂದಿಸಿ, ‘ನೆಕ್ಸ್ಟ್’ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ನಂಬರ್, ಇಮೇಲ್ ನಮೂದಿಸಿ, ಬಳಿಕ ‘ಪ್ರೊಸೀಡ್’ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳು, ಎಲೆಕ್ಟ್ರಿಕ್ ಬಿಲ್, ಮನೆ ಮಾಲಕತ್ವದ ಪ್ರಮಾಣ ಪತ್ರ ಈ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ. ಇವನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.

ನೀವು ರೋಫ್​ಟಾಪ್ ಸೋಲಾರ್​ಗೆ ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಿತ ಡಿಸ್ಕಾಂ ಕಂಪನಿಯಿಂದ ಅನುಮೋದನೆ ದೊರಕಬೇಕು. ಅದಾದ ಬಳಿಕ ಡಿಸ್ಕಾಂನ ನೊಂದಾಯಿತ ವ್ಯಾಪಾರಿಯೊಬ್ಬರ ಮೂಲಕ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಬೇಕು.

ಇದಾದ ಬಳಿಕ, ಆ ಘಟಕದ ವಿವರವನ್ನು ಸಲ್ಲಿಸಿ, ನೆಟ್ ಮೀಟರ್​ಗೆ ಅರ್ಜಿ ಸಲ್ಲಿಸಬೇಕು.

ನೆಟ್ ಮೀಟರ್ ಸ್ಥಾಪನೆಯಾದ ನಂತರ ಡಿಸ್ಕಾಂನಿಂದ ಪರಿಶೀಲನೆಯಾಗುತ್ತದೆ. ಈ ಪ್ರಕ್ರಿಯೆ ಬಳಿಕ ಪೋರ್ಟಲ್​ನಲ್ಲಿ ಕಮಿಷನಿಂಗ್ ಸರ್ಟಿಫಿಕೇಟ್ ಕೊಡಲಾಗುತ್ತದೆ.

ಈ ಸರ್ಟಿಫಿಕೇಟ್ ಪಡೆದ ಬಳಿಕ ನಿಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ಕ್ಯಾನ್ಸಲ್ಡ್ ಚೆಕ್​ನ ಸ್ಕ್ಯಾನ್ಡ್ ಕಾಪಿಯನ್ನು ಸೂರ್ಯಘರ್ ಪೋರ್ಟಲ್​ನಲ್ಲಿ ಸಬ್ಮಿಟ್ ಮಾಡಬೇಕು. ಆಗ ಒಂದು ತಿಂಗಳೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ನಿಗದಿತ ಸಬ್ಸಿಡಿ ಹಣ ಸಂದಾಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ