AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation: ಎಂಟು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ; ಜುಲೈನಲ್ಲಿ ಶೇ. 1.55ಕ್ಕೆ ಹಣದುಬ್ಬರ ಇಳಿಕೆ

Retail Inflation in 2025 July down to 1.55%: ಜೂನ್​ನಲ್ಲಿ ಶೇ. 2.10ರಷ್ಟಿದ್ದ ಹಣದುಬ್ಬರ ಜುಲೈನಲ್ಲಿ ಶೇ. 1.55 ದಾಖಲಾಗಿದೆ. ಸತತವಾಗಿ ಕುಸಿಯುತ್ತಿರುವ ಹಣದುಬ್ಬರ ದರ ಕಳೆದ ಎಂಟು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಬಂದಿದೆ. 2017ರ ಜೂನ್ ಬಳಿಕ ಇದು ಅತಿ ಕಡಿಮೆ ಬೆಲೆ ಏರಿಕೆ ಮಟ್ಟ ಕಂಡ ತಿಂಗಳಾಗಿದೆ. ಮುಂದಿನ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಕೆಗೆ ನಿರ್ಧರಿಸುವ ಸಾಧ್ಯತೆ ಇದೆ.

Inflation: ಎಂಟು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ; ಜುಲೈನಲ್ಲಿ ಶೇ. 1.55ಕ್ಕೆ ಹಣದುಬ್ಬರ ಇಳಿಕೆ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 12, 2025 | 5:20 PM

Share

ನವದೆಹಲಿ, ಆಗಸ್ಟ್ 12: ಭಾರತದಲ್ಲಿ ಬೆಲೆ ಏರಿಕೆ ಮಟ್ಟ ತಿಂಗಳು ಕಳೆದಂತೆ ಸತತವಾಗಿ ಇಳಿಕೆಯಾಗುತ್ತಿದೆ. 2025ರ ಜುಲೈನಲ್ಲಿ ರೀಟೇಲ್ ಹಣದುಬ್ಬರ (Retail Inflation) ಶೇ. 1.55ರಷ್ಟಿದೆ. ಕಳೆದ ಎಂಟು ವರ್ಷದಲ್ಲಿ ಯಾವುದೇ ತಿಂಗಳಲ್ಲಿ ದಾಖಲಾದ ಕನಿಷ್ಠ ಬೆಲೆ ಏರಿಕೆ ಮಟ್ಟ ಇದು. ಆರ್​ಬಿಐ ನಿಗದಿ ಮಾಡಿದ್ದ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 2ಕ್ಕಿಂತಲೂ ಕಡಿಮೆಗೆ ಬಂದಿರುವುದು ಆರು ವರ್ಷದಲ್ಲಿ ಇದೇ ಮೊದಲು. ರಾಯ್ಟರ್ಸ್ ಮೊದಲಾದ ಕೆಲ ಏಜೆನ್ಸಿಗಳು ನಡೆಸಿದ ವಿವಿಧ ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ (poll of economists) ಬಂದ ಸರಾಸರಿ ಅಭಿಪ್ರಾಯದಲ್ಲೂ ಹಣದುಬ್ಬರ ಶೇ. 2ಕ್ಕಿಂತಲೂ ಕಡಿಮೆ ಇರುವ ಅಂದಾಜು ಇತ್ತು.

2017ರ ಜೂನ್ ತಿಂಗಳ ನಂತರ ಅತ್ಯಂತ ಕಡಿಮೆ ಹಣದುಬ್ಬರ ಈಗ ದಾಖಲಾಗಿದೆ. 2025ರ ಜೂನ್ ತಿಂಗಳಲ್ಲಿ, ಅಂದರೆ ಹಿಂದಿನ ತಿಂಗಳಲ್ಲಿ ಹಣದುಬ್ಬರ ಶೇ. 2.10ರಷ್ಟು ದಾಖಲಾಗಿತ್ತು. ಹಿಂದಿನ ವರ್ಷವಾದ 2024ರ ಜುಲೈನಲ್ಲಿ ಹಣದುಬ್ಬರ ಶೇ. 3.54 ಇತ್ತು.

ಇದನ್ನೂ ಓದಿ: ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು

ಮೈನಸ್​ಗೆ ಜಾರಿದ ಆಹಾರ ಹಣದುಬ್ಬರ

ಜುಲೈನಲಲಿ ಹಣದುಬ್ಬರ ಇಳಿಕೆಯಾಗಲು ಆಹಾರವಸ್ತುಗಳ ಸತತ ಬೆಲೆ ಇಳಿಕೆಯೇ ಕಾರಣವಾಗಿದೆ. ಜೂನ್ ತಿಂಗಳಲ್ಲಿ ಆಹಾರ ಹಣದುಬ್ಬರ ಮೈನಸ್ 1.06 ಪ್ರತಿಶತ ಕುಸಿದಿತ್ತು. ಜುಲೈನಲ್ಲಿ ಅದು ಮೈನಸ್ ಶೇ. 1.76 ದಾಖಲಾಗಿದೆ.

ಅನಿಶ್ಚಿತ ಮುಂಗಾರು ಸ್ಥಿತಿ ಇದ್ದರೂ ಈ ಬಾರಿ ಉತ್ತಮ ಬೆಳೆಯಾಗಿದೆ. ಇದರಿಂದ ಆಹಾರ ಬೆಲೆಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದಿವೆ. ಬಹಳ ಅಪರೂಪಕ್ಕೆ ದೇಶವು ಸತತವಾಗಿ ಹಣದುಬ್ಬರ ಕುಸಿತದ ಸ್ಥಿತಿ ಕಾಣುತ್ತಿದೆ.

ಮುಂದಿನ ತಿಂಗಳೂ (ಆಗಸ್ಟ್) ಕೂಡ ಇದೇ ರೀತಿ ಹಣದುಬ್ಬರವು ಶೇ. 2ಕ್ಕಿಂತ ಕಡಿಮೆ ಇದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಆರ್​​ಬಿಐ ಎಂಪಿಸಿ ಸಭೆಯಲ್ಲಿ ಬಡ್ಡಿದರ ಇಳಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

ಫೆಬ್ರುವರಿ ಹಾಗು ನಂತರ ನಡೆದ ಎಂಪಿಸಿ ಸಭೆಗಳಲ್ಲಿ ಸತತ ಮೂರು ಬಾರಿ ರಿಪೋ ದರ ಇಳಿಸಲಾಗಿತ್ತು. ಶೇ. 6.50ರಷ್ಟಿದ್ದ ಬಡ್ಡಿದರ ಶೇ. 5.50ಕ್ಕೆ ಇಳಿದಿದೆ. ಆಗಸ್ಟ್ ತಿಂಗಳಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿತ್ತು.

ಆದರೆ, ಹಣದುಬ್ಬರ ಸಂಪೂರ್ಣವಾಗಿ ಹಿಡಿತದಲ್ಲಿರುವ ಕಾರಣ ರಿಪೋದರವನ್ನು ಮತ್ತಷ್ಟು ಇಳಿಸುವ ಅವಕಾಶವಂತೂ ಇದೆ. ಅಮೆರಿಕದ ಅಸಹಜ ಮಟ್ಟದ ಟ್ಯಾರಿಫ್​ನಿಂದ ಭಾರತದ ಆರ್ಥಿಕತೆ ಅನಿಶ್ಚಿತ ಸ್ಥಿತಿಯತ್ತ ಮುಖ ಮಾಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಇಳಿಸಿ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ತರಲು ಆರ್​ಬಿಐ ಯತ್ನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ