AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಪರ್ಯಾಯವಾಗಿ 50 ದೇಶಗಳಲ್ಲಿ ರಫ್ತು ಹೆಚ್ಚಳಕ್ಕೆ ಭಾರತ ಯೋಜನೆ

India focusing on 50 countries to boost its exports: ಅಮೆರಿಕದ ಅಧಿಕ ಟ್ಯಾರಿಫ್ ಕಾರಣದಿಂದಾಗಿ ಭಾರತದ ರಫ್ತು ಗಣನೀಯವಾಗಿ ಕುಸಿಯುವ ಎಲ್ಲಾ ಸಾಧ್ಯತೆ ಇದೆ. ಇದನ್ನು ಸರಿದೂಗಿಸಲು ಭಾರತ ಬೇರೆ ಬೇರೆ ದೇಶಗಳಿಗೆ ರಫ್ತು ಹೆಚ್ಚಳಕ್ಕೆ ಮಾರ್ಗೋಪಾಯ ಹುಡುಕುತ್ತಿದೆ. ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಪ್ರದೇಶಗಳಲ್ಲಿರುವ 50 ದೇಶಗಳನ್ನು ತನ್ನ ರಫ್ತು ಗುರಿಗೆ ಆಯ್ದುಕೊಂಡಿದೆ.

ಅಮೆರಿಕಕ್ಕೆ ಪರ್ಯಾಯವಾಗಿ 50 ದೇಶಗಳಲ್ಲಿ ರಫ್ತು ಹೆಚ್ಚಳಕ್ಕೆ ಭಾರತ ಯೋಜನೆ
ಟ್ರೇಡಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 12, 2025 | 6:20 PM

Share

ನವದೆಹಲಿ, ಆಗಸ್ಟ್ 12: ಭಾರತಕ್ಕೆ ಬಹಳ ದೊಡ್ಡ ಮಾರುಕಟ್ಟೆ ಎನಿಸಿದ್ದ ಅಮೆರಿಕ ಈಗ ಟ್ಯಾರಿಫ್ ತಡೆಗೋಡೆ (US Tariffs) ನಿರ್ಮಿಸಿದೆ. ಇದರಿಂದ ಕುಸಿಯಬಹುದಾದ ರಫ್ತನ್ನು ಸರಿದೂಗಿಸಲು ಸರ್ಕಾರ ಸಕಲ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ವರದಿಗಳ ಪ್ರಕಾರ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರದೇಶಗಳಲ್ಲಿನ ಸುಮಾರು 50 ದೇಶಗಳ ಮೇಲೆ ಸರ್ಕಾರ ಗಮನ ಹರಿಸಿದೆ.

ಈ ಐವತ್ತು ದೇಶಗಳು ಭಾರತದ ಜೊತೆ ಉತ್ತಮ ವ್ಯಾವಹಾರಿಕ ಸಂಬಂಧ ಇಟ್ಟುಕೊಂಡಿರುವಂಥವೇ ಆಗಿವೆ. ಭಾರತದ ಶೇ. 90ರಷ್ಟು ರಫ್ತುಗಳು ಈ ಐವತ್ತು ದೇಶಗಳಿಗೆ ಹಂಚಿಕೆ ಆಗುತ್ತಿದೆ. ಈ ದೇಶಗಳಿಗೆ ಭಾರತದ ರಫ್ತನ್ನು ಇನ್ನಷ್ಟು ಏರಿಸುವ ಮಾರ್ಗಗಳನ್ನು ಸರ್ಕಾರ ಅವಲೋಕಿಸುತ್ತಿದೆ.

ಇದನ್ನೂ ಓದಿ: ಎಂಟು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ; ಜುಲೈನಲ್ಲಿ ಶೇ. 1.55ಕ್ಕೆ ಹಣದುಬ್ಬರ ಇಳಿಕೆ

ವಾಣಿಜ್ಯ ಸಚಿವಾಲಯ ಈಗಾಗಲೇ 20 ದೇಶಗಳ ಬಗ್ಗೆ ಗಮನ ಹರಿಸಿದೆ. ಈಗ ಇನ್ನೂ 30 ದೇಶಗಳನ್ನು ಸೇರಿಸಲಾಗಿದೆ. ರಫ್ತು ವಿಚಾರದಲ್ಲಿ ಭಾರತವು ನಾಲ್ಕು ಅಂಶಗಳ ಕಾರ್ಯಸೂಚಿ ಹಾಕಿಕೊಂಡಿದೆ. ರಫ್ತಾಗುವ ಉತ್ಪನ್ನಗಳ ಸಂಖ್ಯೆ ಹೆಚ್ಚಿಸುವುದು, ರಫ್ತಿನ ಸ್ಪರ್ಧಾತ್ಮಕತೆ ಹೆಚ್ಚಿಸುವುದು ಇವು ಸರ್ಕಾರದ ಪ್ರಾಮುಖ್ಯತೆಗಳ ಪೈಕಿ ಇದೆ.

2025ರ ಜೂನ್ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕುಗಳ ರಫ್ತು 35.14 ಬಿಲಿಯನ್ ಡಾಲರ್ ಇತ್ತು. ಜಾಗತಿಕ ಆರ್ಥಿಕ ಅನಿಶ್ಚಿತ ಸ್ಥಿತಿಯಿಂದಾಗಿ ಮಾಮೂಲಿಗಿಂತ ಕಡಿಮೆ ರಫ್ತು ಜೂನ್​ನಲ್ಲಿ ದಾಖಲಾಗಿತ್ತು. ರಫ್ತು ಮಾತ್ರವಲ್ಲ, ಆಮದು ಕೂಡ ಕಡಿಮೆ ಆಗಿತ್ತು. ಇದರಿಂದ ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಕೊರತೆ 18.78 ಬಿಲಿಯನ್ ಡಾಲರ್​ಗೆ ಇಳಿದಿತ್ತು. ಇದು ನಾಲ್ಕು ತಿಂಗಳಲ್ಲೇ ಕಡಿಮೆ ಟ್ರೇಡ್ ಡೆಫಿಸಿಟ್ ಎನಿಸಿದೆ.

ಇದನ್ನೂ ಓದಿ: 6,115 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ; 11,535 ಬೋಗಿಗಳಲ್ಲಿ ಸಿಸಿಟಿವಿ: ರೈಲ್ವೆ ಸಚಿವರಿಂದ ಮಾಹಿತಿ

ಇನ್ನು, ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕದಲ್ಲಿ ರಫ್ತು ಶೇ. 1.92ರಷ್ಟು ಹೆಚ್ಚಾಗಿ 112.17 ಬಿಲಿಯನ್ ಡಾಲರ್​ನಷ್ಟಿತ್ತು. ಆಮದು ಶೇ. 4.24ರಷ್ಟು ಹೆಚ್ಚಾಗಿ 179.44 ಬಿಲಿಯನ್ ಡಾಲರ್ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ