PPF Rules: ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಲ್ಲಿ ಗಮನಿಸಬೇಕಾದ ಕೆಲ ನಿಯಮಗಳು
PPF 2025 rules: ಸರ್ಕಾರದ ಬೆಂಬಲದಲ್ಲಿ ನಡೆಯುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಪಿಪಿಎಫ್ ಒಂದು. ಇದು ದೀರ್ಘಾವಧಿ ಹೂಡಿಕೆ ಪ್ಲಾನ್. ಪಿಪಿಎಫ್ನಲ್ಲಿ ಸಾಲ ಎಷ್ಟು ಸಿಗುತ್ತದೆ ಎನ್ನುವ ಲೆಕ್ಕಾಚಾರ ಬದಲಾಗಿದೆ. ಸಾಲಕ್ಕೆ ಬಡ್ಡಿದರ ಇಳಿಸಲಾಗಿದೆ. ಪಿಪಿಎಫ್ ಅಕೌಂಟ್ಗೆ ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂವರೆಗೆ ಹಣ ಹಾಕಬಹುದು.

ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಸದ್ಯ ಜನಸಾಮಾನ್ಯರ ಮುಂದಿರುವ ಸುರಕ್ಷಿತ ಹೂಡಿಕೆ (Investment) ಆಯ್ಕೆಗಳಲ್ಲಿ ಒಂದು. ಇದು ತೆರಿಗೆ ಉಳಿಸಬಲ್ಲುದು, ಬಡ್ಡಿ ಆದಾಯ ತಂದುಕೊಡಬಲ್ಲುವುದು. ದೀರ್ಘಾವಧಿ ಹೂಡಿಕೆಯಾಗಿರುವ ಇದು ಸರ್ಕಾರದಿಂದ ನಡೆಸಲಾಗುತ್ತಿರುವುದರಿಂದ ಹಣಕ್ಕೆ ನೂರಕ್ಕೆ ನೂರು ಗ್ಯಾರಂಟಿ. ಸರ್ಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಪಿಪಿಎಫ್ಗೆ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಸರ್ಕಾರ ಇತ್ತೀಚೆಗೆ ಪಿಪಿಎಫ್ನಲ್ಲಿ ಕೆಲ ಪ್ರಮುಖ ನಿಯಮ ಬದಲಾವಣೆಗಳನ್ನು ಮಾಡಿದೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ:
ಪಿಪಿಎಫ್ನಲ್ಲಿ ಸಾಲ ಎಷ್ಟು ಸಿಗುತ್ತೆ?
ಎಲ್ಐಸಿ, ಎಫ್ಡಿ ಇತ್ಯಾದಿಯಲ್ಲಿಯಂತೆ ಪಿಪಿಎಫ್ನಲ್ಲಿನ ನಿಮ್ಮ ಹೂಡಿಕೆಯ ಆಧಾರದ ಮೇಲೆ ಸಾಲ ಪಡೆಯಲು ಅವಕಾಶ ಇದೆ. ಆದರೆ, ಹೂಡಿಕೆಯಲ್ಲಿರುವ ಅಷ್ಟೂ ಮೊತ್ತವು ಸಾಲವಾಗಿ ಸಿಕ್ಕೋದಿಲ್ಲ. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಎರಡು ವರ್ಷದ ಹಿಂದಿನ ನಿಮ್ಮ ಪಿಪಿಎಫ್ ಅಕೌಂಟ್ನಲ್ಲಿ ಎಷ್ಟು ಬ್ಯಾಲನ್ಸ್ ಇತ್ತು, ಅದರ ಶೇ. 25ರಷ್ಟು ಮಾತ್ರವೇ ಸಾಲವಾಗಿ ಲಭ್ಯ ಇರುತ್ತದೆ.
ಇದನ್ನೂ ಓದಿ: ತಿಂಗಳಿಗೆ 11,000 ಹೂಡಿಕೆ; 9 ಕೋಟಿ ರೂ ಮೊತ್ತಕ್ಕೆ ಎಷ್ಟು ವರ್ಷ ಬೇಕು?
ಪಿಪಿಎಫ್ ಸಾಲಕ್ಕೆ ಕಡಿಮೆ ಬಡ್ಡಿ
ಪಿಪಿಎಫ್ನಲ್ಲಿ ನೀವು ಪಡದ ಸಾಲಕ್ಕೆ ಬಡ್ಡಿ ಕಡಿಮೆ ಇರುತ್ತದೆ. ಪಿಪಿಎಫ್ನಲ್ಲಿನ ಠೇವಣಿಗೆ ಸರ್ಕಾರ ನೀಡುವ ಬಡ್ಡಿಗಿಂತ ಶೇ. 2ರಷ್ಟು ಹೆಚ್ಚು ಬಡ್ಡಿಯು ಸಾಲಕ್ಕೆ ಅನ್ವಯ ಆಗುತ್ತದೆ. ಅಂದರೆ, ಪ್ರಸಕ್ತ ಪಿಪಿಎಫ್ ಠೇವಣಿ ದರ ಶೇ. 7.1 ಇದೆ. ನೀವು ಸಾಲ ಪಡೆದರೆ ಬಡ್ಡಿ ಶೇ. 9.1 ಆಗುತ್ತದೆ. ಈಗ ಸರ್ಕಾರವು ಈ ಹೆಚ್ಚುವರಿ ಬಡ್ಡಿಯನ್ನು ಶೇ. 2ರಿಂದ ಶೇ. 1ಕ್ಕೆ ಇಳಿಸಿದೆ. ಅಂದರೆ, ಶೇ. 9.1 ಬಡ್ಡಿ ಬದಲು ಶೇ. 8.1 ಬಡ್ಡಿ ಮಾತ್ರವೇ ಅನ್ವಯ ಆಗುತ್ತದೆ.
ಮೆಚ್ಯೂರಿಟಿ ಬಳಿಕವೂ ಹೂಡಿಕೆ ಮುಂದುವರಿಸಿ ಬಡ್ಡಿಯನ್ನೂ ಗಳಿಸಿ…
ಪಿಪಿಎಫ್ ಹೂಡಿಕೆ ಅವಧಿ 15 ವರ್ಷ ಇದೆ. ಇದಾದ ಬಳಿಕ ಹೂಡಿಕೆ ನಿಲ್ಲಿಸಿ, ಹಣ ಹಿಂಪಡೆಯದೇ ಹಾಗೇ ಬಿಟ್ಟುಬಿಡಬಹುದು. ಅದಕ್ಕೆ ಬಡ್ಡಿ ಸೇರ್ಪಡೆ ಮುಂದುವರಿಯುತ್ತಾ ಹೋಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್ಎಸ್ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ
ಪಿಪಿಎಫ್ ಠೇವಣಿ, ತಿಂಗಳಿಗೆ ಒಮ್ಮೆ ಪಾವತಿ
ಪಿಪಿಎಫ್ನಲ್ಲಿ ಒಂದು ಹಣಕಾಸು ವರ್ಷದಲ್ಲಿ ಒಂದೂವರೆ ಲಕ್ಷ ರೂವರೆಗೆ ಡೆಪಾಸಿಟ್ ಮಾಡಬಹುದು. ಒಮ್ಮೆಗೇ ಅಷ್ಟೂ ಹಣ ಹಾಕಬಹುದು. ಅಥವಾ ಹಲವು ಬಾರಿ ಸೇರಿ ಹಣ ಡೆಪಾಸಿಟ್ ಮಾಡಬಹುದು. ಆದರೆ, ಒಂದು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಡೆಪಾಸಿಟ್ ಮಾಡಲು ಅವಕಾಶ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




