T-bill SIP: ಸರ್ಕಾರದ ಟ್ರೆಷರಿ ಬಿಲ್ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ; ಆರ್ಬಿಐ ರಿಟೇಲ್ ಡೈರೆಕ್ಟ್ನಲ್ಲಿ ಅವಕಾಶ
SIP in treasury bills: ಆರ್ಬಿಐನ ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ನಲ್ಲಿ ಎಸ್ಐಪಿ ಮೂಲಕ ಸರ್ಕಾರದ ಟ್ರೆಷರಿ ಬಿಲ್ಗಳಲ್ಲಿ ಹೂಡಿಕೆ ಮಾಡಬಹುದು. ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ನಲ್ಲಿ ಟಿ ಬಿಲ್ ಮಾತ್ರವಲ್ಲ, ಬಾಂಡ್ ಇತ್ಯಾದಿ ಸರ್ಕಾರದ ಸೆಕ್ಯುರಿಟಿಗಳನ್ನು ಖರೀದಿಸಬಹುದು. ಟ್ರೆಷರಿ ಬಿಲ್ಗಳು 14, 91, 182 ಮತ್ತು 364 ದಿನಗಳ ಮೆಚ್ಯುರಿಟಿ ಡೇಟ್ ಹೊಂದಿದ್ದು, ವಾರ್ಷಿಕ ಶೇ. 5.50ರ ಆಸುಪಾಸಿನಲ್ಲಿ ಲಾಭ ನೀಡುತ್ತವೆ.

ನವದೆಹಲಿ, ಆಗಸ್ಟ್ 6: ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿಯು ಆಗಸ್ಟ್ ತಿಂಗಳ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅವುಗಳ ಪೈಕಿ ಆರ್ಬಿಐನ ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ (RBI Retail Direct) ಅನ್ನು ಅಪ್ಗ್ರೇಡ್ ಮಾಡಲಾಗಿರುವುದೂ ಒಂದು. ರೀಟೇಲ್ ಹೂಡಿಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಅಪ್ಗ್ರೇಡ್ ಮಾಡಲಾಗಿದೆ. ಈ ಪ್ಲಾಟ್ಫಾರ್ಮ್ನಲ್ಲಿ ರೀಟೇಲ್ ಹೂಡಿಕೆದಾರರು ಎಸ್ಐಪಿ ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಟ್ರೆಷರಿ ಬಿಲ್ಗಳಲ್ಲಿ ಹೂಡಿಕೆ ಮಾಡಬಹುದು.
ಏನಿದು ಟ್ರೆಷರಿ ಬಿಲ್ ಅಥವಾ ಟಿ-ಬಿಲ್?
ಸರ್ಕಾರಿ ಬಾಂಡ್ ಅಥವಾ ಸಾಲಪತ್ರದ ರೀತಿ ಟ್ರೆಷರಿ ಬಿಲ್ ಕೂಡ ಸರ್ಕಾರದ ಒಂದು ಬಗೆಯ ಸಾಲಪತ್ರ. ಸರ್ಕಾರಕ್ಕೆ ಕಿರು ಅವಧಿಗೆ ಸಾಲದ ಅವಶ್ಯಕತೆ ಇದ್ದಾಗ ಸಾರ್ವಜನಿಕವಾಗಿ ಹಣ ಸಂಗ್ರಹಿಸಲು ಟ್ರೆಷರಿ ಬಿಲ್ಗಳನ್ನು ನೀಡುತ್ತದೆ. ಯಾರು ಬೇಕಾದರೂ ಈ ಟಿ-ಬಿಲ್ಗಳನ್ನು ಖರೀದಿಸಬಹುದು.
ಟ್ರೆಷರಿ ಬಿಲ್ಗಳು ಸಾಮಾನ್ಯವಾಗಿ ನಾಲ್ಕು ಮೆಚ್ಯುರಿಟಿ ದಿನಾಂಕಗಳನ್ನು ಹೊಂದಿರುತ್ತವೆ. 14 ದಿನ, 91 ದಿನ, 182 ದಿನ ಹಾಗೂ 364 ದಿನಗಳ ಮೆಚ್ಯುರಿಟಿ ಡೇಟ್ ಇರುತ್ತದೆ.
ಟಿ-ಬಿಲ್ಗಳಿಂದ ಎಷ್ಟು ಲಾಭ ಸಿಗುತ್ತದೆ?
ಟ್ರೆಷರಿ ಬಿಲ್ಗಳು ನೂರಕ್ಕೆ ನೂರು ಸುರಕ್ಷಿತ ಹೂಡಿಕೆ ಆಗಿದೆ. ಆದರೆ, ಗವರ್ನ್ಮೆಂಟ್ ಬಾಂಡ್, ಎಫ್ಡಿ ಇತ್ಯಾದಿಯಂತೆ ಬಡ್ಡಿ ಇರುವುದಿಲ್ಲ. ಡಿಸ್ಕೌಂಟ್ ದರದಲ್ಲಿ ನೀವು ಟಿ-ಬಿಲ್ ಖರೀದಿಸಬಹುದು.
ಉದಾಹರಣೆಗೆ, 91 ದಿನಗಳಿಗೆ ಮೆಚ್ಯೂರ್ ಆಗುವ 130 ಫೇಸ್ ವ್ಯಾಲ್ಯೂ ಇರುವ ಟ್ರೆಷರಿ ಬಿಲ್ ಅನ್ನು ಸರ್ಕಾರ 2 ರೂ ಡಿಸ್ಕೌಂಟ್ಗೆ ನಿಮಗೆ ಆಫರ್ ಮಾಡಲಾಗುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು 130 ರೂ ಮೌಲ್ಯದ ಟಿ-ಬಿಲ್ ಅನ್ನು 128 ರೂಗೆ ಪಡೆಯುತ್ತೀರಿ. 91 ದಿನಗಳಾದ ಮೇಲೆ ನಿಮಗೆ 130 ರೂ ಸಿಗುತ್ತದೆ. ನಿಮ್ಮ 128 ರೂ ಹೂಡಿಕೆಯು ಮೂರು ತಿಂಗಳಲ್ಲಿ 130 ರೂ ಆಗುತ್ತದೆ. ಇದು ಉದಾಹರಣೆ ಮಾತ್ರ.
ಟಿ-ಬಿಲ್ಗಳಲ್ಲಿ ಕನಿಷ್ಠ ಹೂಡಿಕೆ 25,000 ರೂ ಇದೆ. ಈಗ ಎಸ್ಐಪಿ ಮೂಲಕ ಹೂಡಿಕೆಗೆ ಅವಕಾಶ ಕೊಡಲಾಗಿದೆ. ನಿಯಮಿತವಾಗಿ ಹೂಡಿಕೆ ಮಾಡಬಹುದು. ಆರ್ಬಿಐ ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ನಲ್ಲಿ ಈ ಅವಕಾಶ ಇದೆ.
ಇದನ್ನೂ ಓದಿ: RBI Repo Rate: ಆರ್ಬಿಐ ರಿಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 5.5 ಬಡ್ಡಿದರ ಮುಂದುವರಿಸಿದ ರಿಸರ್ವ್ ಬ್ಯಾಂಕ್
ಆರ್ಬಿಐ ರೀಟೇಲ್ ಡೈರೆಕ್ಟ್ನಲ್ಲಿ ಇನ್ನೂ ಏನೇನಿದೆ?
ಆರ್ಬಿಐನ ರೀಟೇಲ್ ಡೈರೆಕ್ಟ್ ವೆಬ್ಸೈಟ್ನಲ್ಲಿ ಸರ್ಕಾರದ ವಿವಿಧ ಸೆಕ್ಯುರಿಟಿಗಳು ಅಥವಾ ಸಾಲಪತ್ರಗಳನ್ನು ಖರೀದಿಸಲು ಅವಕಾಶ ಇದೆ. ಯಾವ ಬ್ರೋಕರ್ಗಳ ಅಗತ್ಯ ಇಲ್ಲದೇ ನೇರವಾಗಿ ಹೂಡಿಕೆ ಮಾಡಬಹುದು. ಸರ್ಕಾರಿ ಬಾಂಡ್, ಸಾವರಿನ್ ಗೋಲ್ಡ್ ಬಾಂಡ್, ಟ್ರೆಷರಿ ಬಿಲ್, ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಈ ಪ್ಲಾಟ್ಫಾರ್ಮ್ನಲ್ಲಿ ಖರೀದಿಸಬಹುದು.
ಟ್ರೆಷರಿ ಬಿಲ್ಗಳಿಂದ ಸಾಮಾನ್ಯವಾಗಿ ವರ್ಷಕ್ಕೆ ಶೇ. 5.50ರ ದರದಲ್ಲಿ ರಿಟರ್ನ್ ನಿರೀಕ್ಷಿಸಬಹುದು. ಇದರ ಹಣ ಹಿಂಪಡೆಯಲು ಮೆಚ್ಯೂರಿಟಿ ಡೇಟ್ವರೆಗೂ ಕಾಯಬೇಕಾಗುತ್ತದೆ. ಸೆಕೆಂಡರಿ ಮಾರುಕಟ್ಟೆ ಅಥವಾ ಷೇರು ವಿನಿಮಯ ಕೇಂದ್ರದಲ್ಲಿ ಈ ಟಿ-ಬಿಲ್ಗಳನ್ನು ಮಾರಲು ಅವಕಾಶ ಇರುತ್ತದೆ. ಅಲ್ಲಿ ಮಾರಲು ಸಾಧ್ಯವಾದರೆ ಮೆಚ್ಯೂರಿಟಿಗಿಂತ ಮುನ್ನವೇ ಹಣ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆ, ಎಫ್ಡಿಗೆ ಹೋಲಿಸಿದರೆ ಟಿ ಬಿಲ್ಗಳು ಕಡಿಮೆ ಲಾಭ ನೀಡುತ್ತವಾದರೂ ನೂರಕ್ಕೆ ನೂರು ಸುರಕ್ಷಿತ ಹೂಡಿಕೆ ಎನಿಸುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




