ಜುಲೈನಲ್ಲಿ ಒಟ್ಟು ಜಿಎಸ್ಟಿ 1.96 ಲಕ್ಷ ಕೋಟಿ ರೂ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ
GST collections of Rs 1.96 lakh crore in 2025 July: 2025ರ ಜುಲೈ ತಿಂಗಳಲ್ಲಿ ಭಾರತದಲ್ಲಿ 1.96 ಲಕ್ಷ ಕೋಟಿ ರೂ ಒಟ್ಟು ಜಿಎಸ್ಟಿ ಸಂಗ್ರಹವಾಗಿದೆ. 27,147 ಕೋಟಿ ರೂ ರೀಫಂಡ್ ಆಗಿದ್ದು, 1.69 ಲಕ್ಷ ಕೋಟಿ ರೂ ನಿವ್ವಳ ಜಿಎಸ್ಟಿ ಉಳಿದಿದೆ. ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂನಷ್ಟು ದಾಖಲೆ ಪ್ರಮಾಣದಲ್ಲಿ ಜಿಎಸ್ಟಿ ಸಂಗ್ರಹವಾಗಿತ್ತು.

ನವದೆಹಲಿ, ಆಗಸ್ಟ್ 1: ಜುಲೈ ತಿಂಗಳಲ್ಲಿ ಭಾರತದಲ್ಲಿ 1.96 ಲಕ್ಷ ಕೋಟಿ ರೂ ಮೊತ್ತದ ಜಿಎಸ್ಟಿ (GST) ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಶೇ. 7.5ರಷ್ಟು ಹೆಚ್ಚಾಗಿದೆ. ಹಿಂದಿನ ತಿಂಗಳಾದ ಜೂನ್ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ ವಸೂಲಿಯಾಗಿತ್ತು. ಅದಕ್ಕೆ ಹೋಲಿಸಿದರೆ ಜುಲೈನಲ್ಲಿ ಅಲ್ಪ ಹೆಚ್ಚಳ ಆಗಿದೆ.
ಸದ್ಯ ಜುಲೈನಲ್ಲಿ ಸಂಗ್ರಹವಾದ 1.96 ಲಕ್ಷ ಕೋಟಿ ರೂ ಜಿಎಸ್ಟಿ ಪೈಕಿ ಭಾರತದೊಳಗೆ ಸಂಗ್ರಹವಾದ ತೆರಿಗೆ 1.43 ಲಕ್ಷ ಕೋಟಿ ರೂ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಇದರಲ್ಲಿ ಶೇ. 6.7ರಷ್ಟು ಹೆಚ್ಚು ಸಿಕ್ಕಿದೆ. ಇನ್ನು, ಆಮದು ವಸ್ತುಗಳಿಂದ ಸಿಕ್ಕ ಜಿಎಸ್ಟಿ 52,712 ಕೋಟಿ ರೂ. ಹಿಂದಿನ ವರ್ಷದಕ್ಕಿಂತ ಇದು ಶೇ. 9.5ರಷ್ಟು ಹೆಚ್ಚಿದೆ.
ಇದನ್ನೂ ಓದಿ: ಮಿತ್ರದೇಶಗಳಿಗೂ ಟ್ರಂಪ್ ಟ್ಯಾರಿಫ್ ಬರೆ; ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿದ ಸುಂಕಗಳ ಪಟ್ಟಿ
ಜಿಎಸ್ಟಿ ರೀಫಂಡ್ ಶೇ. 66 ಹೆಚ್ಚಳ
ಜುಲೈನಲ್ಲಿ 27,147 ಕೋಟಿ ರೂ ಮೊತ್ತದ ಜಿಎಸ್ಟಿ ರೀಫಂಡ್ ಆಗಿದೆ. ಇದನ್ನು ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಆದಾಯವು 1.69 ಲಕ್ಷ ಕೋಟಿ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ತೆರಿಗೆ ಸಂಗ್ರಹ ಹೆಚ್ಚಾಗಿರುವುದು ಶೇ. 1.7 ಮಾತ್ರ. ಜುಲೈನಲ್ಲಿ ಅತ್ಯಧಿಕ ಜಿಎಸ್ಟಿ ರೀಫಂಡ್ ಆಗಿರುವುದರಿಂದ ನಿವ್ವಳ ಜಿಎಸ್ಟಿ ಪ್ರಮಾಣ ಕಡಿಮೆ ಆಗಿದೆ. ಆದರೆ, ರೀಫಂಡ್ ಶೇ 66ರಷ್ಟು ಹೆಚ್ಚಳ ಆಗಿರುವುದನ್ನು ಉದ್ಯಮ ವಲಯ ಸ್ವಾಗತಿಸಿದೆ. ಈ ರೀಫಂಡ್ಗಳಿಂದಾಗಿ ಸಣ್ಣ ಉದ್ದಿಮೆಗಳಿಗೆ ಅನುಕೂಲವಾಗಿದೆ ಮತ್ತು ಪುಷ್ಟಿ ಸಿಕ್ಕಂತಾಗಿದೆ ಎನ್ನುವ ಅಭಿಪ್ರಾಯ ಇದೆ.
ಏಪ್ರಿಲ್ನಲ್ಲಿ ದಾಖಲೆಯ ಜಿಎಸ್ಟಿ ಕಲೆಕ್ಷನ್
2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ ಆಗಿತ್ತು. 2024ರ ಏಪ್ರಿಲ್ನಲ್ಲಿ ಸಿಕ್ಕಿದ್ದ ತೆರಿಗೆಗೆ ಹೋಲಿಸಿದರೆ ಶೇ. 12.6ರಷ್ಟು ಹೆಚ್ಚಿತ್ತು. ಈ 2.37 ಲಕ್ಷ ಕೋಟಿ ರೂ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ದಾಖಲೆ ಮಾಡಿದೆ.
ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ
11.78 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ
ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಜಿಎಸ್ಟಿ ಆದಾಯದಲ್ಲಿ ಶೇ. 11ರಷ್ಟು ಹೆಚ್ಚಾಗಬಹುದು. 11.78 ಲಕ್ಷ ಕೋಟಿ ರೂ ಸಂಗ್ರಹವಾಗಬಹುದು ಎಂದು ಬಜೆಟ್ನಲ್ಲಿ ಅಂದಾಜಿಸಲಾಗಿತ್ತು. ಈ ತೆರಿಗೆ ಆದಾಯದಲ್ಲಿ ಕೇಂದ್ರದ ಜಿಎಸ್ಟಿ ಮತ್ತು ಕಾಂಪೆನ್ಸೇಶನ್ ಸೆಸ್ ಒಳಗೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




