ಜಿಎಸ್ಟಿ
ನವದೆಹಲಿ, ಡಿಸೆಂಬರ್ 22: ರಾಜಸ್ಥಾನದ ಜೈಸಲ್ಮೇರ್ನಲ್ಲಿ ಶನಿವಾರ (ಡಿ. 21) ನಡೆದ 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ಶಿಫಾರಸುಗಳನ್ನು ಮಾಡಲಾಗಿದೆ. ಜಿಎಸ್ಟಿ ತೆರಿಗೆ ವ್ಯವಸ್ಥೆಯಲ್ಲಿ ಒಂದಷ್ಟು ಸರಳೀಕರಣ, ಒಂದಷ್ಟು ಹೊರೆ ಇಳಿಕೆ ಇತ್ಯಾದಿ ಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕೈಗೊಳ್ಳಲಾದ ಕೆಲ ನಿರ್ಧಾರಗಳು ಹಾಗು ತೆರಿಗೆ ವ್ಯತ್ಯಯದಿಂದ ಆಗಬಹುದಾದ ವಿವಿಧ ವಸ್ತುಗಳ ಬೆಲೆ ಏರಿಳಿತಗಳ ವಿವರ ಇಲ್ಲಿದೆ….
55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾಡಲಾದ ಪ್ರಮುಖ ಶಿಫಾರಸುಗಳು
- ಬ್ಯಾಂಕು ಹಾಗೂ ಎನ್ಬಿಎಫ್ಸಿಗಳು ಸಾಲದ ಗ್ರಾಹಕರಿಗೆ ವಿಧಿಸುವ ದಂಡದ ಹಣಕ್ಕೆ ಜಿಎಸ್ಟಿ ವಿಧಿಸಬಹುದು.
- ಪೌಷ್ಟಿಕಾಂಶ ಲೇಪಿತ ಅಕ್ಕಿಯ ಮೇಲಿನ ಜಿಎಸ್ಟಿ ದರ ಶೇ. 5ಕ್ಕೆ ಇಳಿಕೆ
- ಜೀನ್ ಥೆರಪಿಗೆ ಜಿಎಸ್ಟಿಯಿಂದ ವಿನಾಯಿತಿ
- ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (ಐಎಇಎ) ಪರಿಶೀಲನಾ ತಂಡದಿಂದ ಆಮದು ಮಾಡಿಕೊಳ್ಳಲಾಗುವ ಎಲ್ಲಾ ಉಪಕರಣಗಳು ಹಾಗೂ ಬಳಕೆಯೋಗ್ಯ ವಸ್ತುಗಳ ಸ್ಯಾಂಪಲ್ಗಳಿಗೆ ಐಜಿಎಸ್ಟಿಯಿಂದ ವಿನಾಯಿತಿ ನೀಡಬಹುದು.
- ಎಲ್ಲಾ ಹಳೆಯ ಹಾಗೂ ಬಳಸಿದ ವಾಹನಗಳ ಮಾರಾಟದಲ್ಲಿ ಇರುವ ಶೇ. 12ರ ಜಿಎಸ್ಟಿ ದರವನ್ನು ಶೇ. 18ಕ್ಕೆ ಏರಿಸಬಹುದು. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳೂ ಒಳಗೊಳ್ಳುತ್ತವೆ.
- ಶೇ. 50ರಷ್ಟು ಫ್ಲೈ ಆ್ಯಷ್ ಹೊಂದಿರುವ ಎಸಿಸಿ ಕಾಂಕ್ರೀಟ್ ಬ್ಲಾಕ್ಗಳು ಹೆಚ್ಎಸ್ 6815 ಕೆಟಗರಿಗೆ ಸೇರಲಿದ್ದು, ಅವುಗಳಿಗೆ ಶೇ. 12ರಷ್ಟು ಜಿಎಸ್ಟಿ ಇರುತ್ತದೆ.
ಇದನ್ನೂ ಓದಿ: ಸಣ್ಣ ಸಂಸ್ಥೆಗಳಿಗೆ ಸರಳೀಕೃತ ಜಿಎಸ್ಟಿ ನೊಂದಣಿ; ಟ್ರೈನಿಂಗ್ ಪಾರ್ಟರ್ಸ್ಗೆ ವಿನಾಯಿತಿ ಸೇರಿದಂತೆ ವಿವಿಧ ಕ್ರಮಗಳ ಘೋಷಣೆ
- ಕೃಷಿಕರು ಸರಬರಾಜು ಮಾಡುವ ಪೆಪ್ಪರ್ ಮತ್ತು ರೈಸಿನ್ಗಳಿಗೆ ಜಿಎಸ್ಟಿ ಇರುವುದಿಲ್ಲ.
- 25 ಕಿಲೋ ಅಥವಾ 25 ಲೀಟರ್ಗಿಂತ ಕಡಿಮೆ ತೂಕದ ವಸ್ತುಗಳನ್ನು ಹೊಂದಿರುವ ಪ್ಯಾಕೆಟ್ ಅನ್ನು ಪ್ರೀ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಎಂದು ಪರಿಗಣಿಸುವುದು.
- ಉಪ್ಪು ಮತ್ತು ಮಸಲೆಯುಕ್ತವಾದ ಮತ್ತು ತಿನ್ನಲು ಸಿದ್ಧವಾಗಿರುವ ಪಾಪ್ಕಾರ್ನ್ ಅನ್ನು ಪ್ರೀ-ಪ್ಯಾಕೇಜಿಂಗ್ ಇಲ್ಲದೇ ಮಾರಿದರೆ ಶೇ. 5ರಷ್ಟು ಮಾತ್ರವೇ ಜಿಎಸ್ಟಿ ಇರುತ್ತದೆ. ಪ್ರೀ-ಪ್ಯಾಕೇಜಿಂಗ್ ಆಗಿ ಅದನ್ನು ಮಾರಿದರೆ ಶೇ. 12ರಷ್ಟು ಜಿಎಸ್ಟಿ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ