ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ (Karnataka Budget 2023) ವೇಳೆ ಜಿಎಸ್ಟಿ ಪಾಲು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಾರಿಬಾರಿ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳ ಈ ಟೀಕೆ ಸರ್ವೇಸಾಮಾನ್ಯ. ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತಿತರ ಕೆಲ ರಾಜ್ಯಗಳು ಅತಿಹೆಚ್ಚು ತೆರಿಗೆ ಸಂಗ್ರಹ ಮಾಡುತ್ತವೆ. ಆದರೆ, ತೆರಿಗೆ ಪಾಲು ವಿಚಾರಕ್ಕೆ ಬಂದರೆ ಕೇಂದ್ರದಿಂದ ಅತಿಹೆಚ್ಚು ಪಾಲು ಹಂಚಿಕೆಯಾಗುವುದು (GST Share) ಉತ್ತರಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಗೆ. ನಮ್ಮ ಪಾಲಿನ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ವಿತರಿಸುವುದು ಯಾಕೆ ಎಂದು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಕೇಳುವುದರಲ್ಲಿ ನ್ಯಾಯ ಇದೆ ಎಂದನಿಸಬಹುದು. ಆದರೆ, ಅಸಲು ವಿಚಾರ ಬೇರೆ. ಇದನ್ನು ತಿಳಿಯಲು ಜಿಎಸ್ಟಿ ತೆರಿಗೆ ಏನು, ಅದರ ಹಂಚಿಕೆ ಹೇಗೆ ಆಗುತ್ತದೆ ಎಂಬುದನ್ನು ತಿಳಿಯುವುದು ಉತ್ತಮ.
ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದ ಏಕರೂಪದ ಪರೋಕ್ಷ ತೆರಿಗೆ ಪದ್ಧತಿಯೇ ಜಿಎಸ್ಟಿ. ಹಿಂದೆ ಇದ್ದ 17 ಇನ್ಡೈರೆಕ್ಟ್ ಟ್ಯಾಕ್ಸ್ಗಳ ಬದಲಿಗೆ ಜಿಎಸ್ಟಿ ಬಂದಿತು. ಇದರಲ್ಲಿ ನಾಲ್ಕು ಭಾಗಗಳಿವೆ. ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಮತ್ತು ಯುಜಿಎಸ್ಟಿ. ಈಗ ಒಂದು ರಾಜ್ಯದೊಳಗೆ ನಡೆಯುವ ಒಂದು ವಹಿವಾಟಿನಲ್ಲಿ ಶೇ. 18ರಷ್ಟು ಜಿಎಸ್ಟಿ ಇದೆ ಎಂದಾದರೆ ಅದಕ್ಕೆ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿಗೆ ತಲಾ ಶೇ. 9ರಷ್ಟು ತೆರಿಗೆ ಹೋಗುತ್ತದೆ. ಇಲ್ಲಿ ಸಿಜಿಎಸ್ಟಿ ಎಂಬುದು ಕೇಂದ್ರದ ಪಾಲು. ಎಸ್ಜಿಎಸ್ಟಿ ಎಂಬುದು ರಾಜ್ಯದ ಪಾಲು. ಎಸ್ಜಿಎಸ್ಟಿ ತೆರಿಗೆ ಹಣ ನೇರವಾಗಿ ರಾಜ್ಯ ಸರ್ಕಾರಕ್ಕೆ ಸಂದಾಯವಾಗುತ್ತದೆ.
ಇಲ್ಲಿ ಐಜಿಎಸ್ಟಿ ಎಂಬ ಜಿಎಸ್ಟಿಯ ಮತ್ತೊಂದು ಭಾಗ ಇದೆ. ಇಂಟರ್ಸ್ಟೇಟ್ ವ್ಯವಹಾರದಲ್ಲಿ, ಅಂದರೆ ಅಂತರ್ರಾಜ್ಯ ವ್ಯವಹಾರದಲ್ಲಿ ಅನ್ವಯ ಆಗುವ ತೆರಿಗೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಉತ್ಪಾದಕರೊಬ್ಬರು ಆಂಧ್ರದ ಚಿತ್ತೂರಿನಲ್ಲಿರುವವರಿಗೆ ಒಂದು ವಸ್ತು ಮಾರಿದಾಗ ಶೇ. 18ರಷ್ಟು ಜಿಎಸ್ಟಿ ಕಟ್ಟಬೇಕು. ಇದರಲ್ಲಿ ಅರ್ಧಭಾಗವು ಕೇಂದ್ರಕ್ಕೆ ಹೋಗುತ್ತದೆ. ಇನ್ನರ್ಧ ಭಾಗವನ್ನು ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಎತ್ತಿ ಇಡುತ್ತದೆ. ಈ ಹಣವೇ ಜಿಎಸ್ಟಿ ಕಾಂಪೆನ್ಸೇಶನ್ ರೂಪದಲ್ಲಿ ರಾಜ್ಯಗಳಿಗೆ ಹಂಚಿಕೆ ಆಗುವುದು.
ಇದನ್ನೂ ಓದಿ: Original Documents: ಬ್ಯಾಂಕ್ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು
ಸರ್ಕಾರಗಳ ಸಾಮಾಜಿಕ ನ್ಯಾಯದ ಸೂತ್ರ ಪರೋಕ್ಷವಾಗಿ ಜಿಎಸ್ಟಿ ಹಂಚಿಕೆಯಲ್ಲಿ ಅಳವಡಿಕೆ ಆಗಿದೆ. ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳು ಹೆಚ್ಚು ತಯಾರಿಕಾ ಶಕ್ತಿ ಹೊಂದಿದವಾಗಿದ್ದು, ಅವುಗಳನ್ನು ಹೆಚ್ಚು ಸಿರಿವಂತ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ. ಕಡಿಮೆ ತೆರಿಗೆ ಕಟ್ಟಲಾಗುತ್ತಿದೆ ಎಂದರೆ ಅಲ್ಲಿ ಉತ್ಪಾದನೆ ಪ್ರಮಾಣ ಕಡಿಮೆ ಆಗಿದ್ದು, ಅಂಥ ರಾಜ್ಯಗಳನ್ನು ಬಡ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ. ಮಾರಾಟಕ್ಕಿಂತ ಖರೀದಿ ಹೆಚ್ಚು ಮಾಡುವ ಇಂಥ ಬಡ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಕೊಡುವ ಒಂದು ಸೂತ್ರ ರಚಿಸಲಾಗಿದೆ. ಅದೇ ಜಿಎಸ್ಟಿ ಕಾಂಪೆನ್ಸೇಶನ್ ಹಂಚಿಕೆ.
ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗುವುದು ಮಹಾರಾಷ್ಟ್ರದಲ್ಲಿ. ಜೂನ್ ತಿಂಗಳಲ್ಲಿ 26,098 ಕೋಟಿ ರೂ ಜಿಎಸ್ಟಿ ಸಂಗ್ರಹ ಮಾಡಿತ್ತು ಮಹಾರಾಷ್ಟ್ರ. ಕರ್ನಾಟಕ 11,193; ಗುಜರಾತ್ 10,119; ತಮಿಳುನಾಡು 9,600 ಕೋಟಿ ರೂ ಜಿಎಸ್ಟಿ ಕಲೆಕ್ಷನ್ ಮಾಡಿವೆ. ಒಟ್ಟು ಅ ತಿಂಗಳು ಆದ ಜಿಎಸ್ಟಿ ಸಂಗ್ರಹ 1,61,497 ಕೋಟಿ ರೂ. ಇದರಲ್ಲಿ ಕೇಂದ್ರ ಪಾಲು, ರಾಜ್ಯ ಪಾಲು ಬಿಟ್ಟು ಐಜಿಎಸ್ಟಿ ಸಂಗ್ರಹ ಆಗಿದ್ದು 80,292 ಕೋಟಿ ರೂ. ಈ ಐಜಿಎಸ್ಟಿ ಮೊತ್ತದಲ್ಲಿ ಕೇಂದ್ರದ ಪಾಲು 36,224 ಕೋಟಿ ರೂ ಆದರೆ, ರಾಜ್ಯಗಳ ಪಾಲು 30,269 ಕೋಟಿ ರೂ.
ಐಜಿಎಸ್ಟಿಯ ರಾಜ್ಯಗಳ ಪಾಲಾದ 30,269 ಕೋಟಿ ರೂ ಹಣವನ್ನು ಹಂಚಿಕೆ ಮಾಡಲಾಗಿದೆ. ಅದರ ಪ್ರಕಾರ 11,193 ಕೋಟಿ ತೆರಿಗೆ ಸಂಗ್ರಹಿಸಿರುವ ಕರ್ನಾಟಕ್ಕೆ ಸಿಕ್ಕಿರುವ ಐಜಿಎಸ್ಟಿ ಪರಿಹಾರ 2,688 ಕೋಟಿ ರೂ. 26 ಸಾವಿರ ಕೋಟಿ ರೂ ಜಿಎಸ್ಟಿ ಸಂಗ್ರಹಿಸಿದ ಮಹಾರಾಷ್ಟ್ರಕ್ಕೆ ಸಿಕ್ಕಿದ್ದು 3484 ಕೋಟಿ ರೂ ಮಾತ್ರವೇ. ಇನ್ನು, 8,104 ರೂನಷ್ಟು ಜಿಎಸ್ಟಿ ಸಂಗ್ರಹಿಸಿದ ಉತ್ತರಪ್ರದೇಶಕ್ಕೆ ಸಿಕ್ಕ ಪರಿಹಾರ 3,236 ರೂ.
ಗಮನಿಸಿ, ಈ ಮೇಲಿನ ಜಿಎಸ್ಟಿ ಪರಿಹಾರವು ಕೇವಲ ಐಜಿಎಸ್ಟಿಯದ್ದು ಮಾತ್ರ. ರಾಜ್ಯದ ಪಾಲಿನ ಎಸ್ಜಿಎಸ್ಟಿ ತೆರಿಗೆ ಆಯಾ ರಾಜ್ಯಗಳಿಗೆ ಸರಿಪ್ರಮಾಣದಲ್ಲಿ ಸಂದಾಯವಾಗಿರುತ್ತದೆ. ಅಂತಾರಾಜ್ಯ ವಹಿವಾಟಿನ ತೆರಿಗೆಯಲ್ಲಿನ ಪಾಲು ಹಂಚಿಕೆಯಲ್ಲಿ ಈ ವ್ಯತ್ಯಯ ಇರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Fri, 7 July 23