ನವದೆಹಲಿ: ಬೆಂಗಳೂರು ಮೂಲದ ಗೃಹೋಪಕರಣ ತಯಾರಕ ಸಂಸ್ಥೆ ಗ್ರೀನ್ಚೆಫ್ ಅಪ್ಲಾಯನ್ಸಸ್ (Greechef Appliances) ಮೊದಲ ಬಾರಿಗೆ ನಡೆಸಿದ ಐಪಿಒದಲ್ಲಿ ನಿರೀಕ್ಷಿತ 53.62 ಕೋಟಿ ರೂ ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಹಣವನ್ನು ತುಮಕೂರಿನ ವಸಂತನರಸಪುರ ಬಳಿ ಸ್ಥಾಪನೆಯಾಗುತ್ತಿರುವ ಹೊಸ ಫ್ಯಾಕ್ಟರಿಗೆ ಬಳಸಲು ಸಂಸ್ಥೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ 3 ಸೇರಿದಂತೆ ಸದ್ಯ ಒಟ್ಟು 4 ಘಟಕಗಳನ್ನು ಹೊಂದಿರುವ ಗ್ರೀನ್ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಶುಕ್ರವಾರ (ಜುಲೈ 6) ಷೇರುಪೇಟೆಯಲ್ಲಿ ಭರ್ಜರಿಯಾಗಿ ಪ್ರವೇಶ ಮಾಡಿತು. ಐಪಿಒದಲ್ಲಿ 87 ರೂ ಬೆಲೆ ಹೊಂದಿದ್ದ ಗ್ರೀನ್ಚೆಫ್ನ ಷೇರು ಎನ್ಎಸ್ಇ ಎಮರ್ಜ್ ಪ್ಲಾಟ್ಫಾರ್ಮ್ನಲ್ಲಿ (NSE Emerge) 104 ರೂನಂತೆ ಲಿಸ್ಟ್ ಆಯಿತು. ಷೇರುಪೇಟೆ ವ್ಯವಹಾರ ಅಂತ್ಯಗೊಂಡ ಅಂದು ಸಂಜೆ ಅದರ ಷೇರುಬೆಲೆ ಇನ್ನೂ ಹೆಚ್ಚಾಗಿ 109.20 ರೂಗೆ ಹೋಗಿದೆ.
ಗ್ರೀನ್ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಐಪಿಒಗೆ ಹೋಗಿದ್ದು ಇದೇ ಮೊದಲು. 2023ರ ಜೂನ್ 23ರಿಂದ 27ರವರೆಗೂ ಐಪಿಒ ಆಫರ್ ಇತ್ತು. ಶೇ 60ರಷ್ಟು ಹೆಚ್ಚು ಮಂದಿ ಐಪಿಒ ಆಫರ್ಗೆ ಮುಗಿಬಿದ್ದಿದ್ದರು. ಅಷ್ಟರಮಟ್ಟಿಗೆ ಗ್ರೀನ್ಚೆಫ್ ಸಂಸ್ಥೆಯ ಷೇರಿಗೆ ಬೇಡಿಕೆ ಸೃಷ್ಟಿಯಾಗುವ ಸೂಚನೆ ಅದಾಗಿತ್ತು. ನಿರೀಕ್ಷಿಸಿದಂತೆ ಮೊದಲ ದಿನವೇ ಅದರ ಷೇರಿನ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಎನ್ಎಸ್ಇ ವಿನಿಮಯ ಕೇಂದ್ರದ ಎಮರ್ಜ್ ಪ್ಲಾಟ್ಫಾರ್ಮ್ನಲ್ಲಿ ಗ್ರೀನ್ಚೆಫ್ ಲಿಸ್ಟ್ ಆಗಿದೆ.
ಇದನ್ನೂ ಓದಿ: GST Share: ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಯಾಕೆ ಕಡಿಮೆ? ಜಿಎಸ್ಟಿ ಹಂಚಿಕೆ ಸೂತ್ರ ಏನು? ಇಲ್ಲಿದೆ ಡೀಟೇಲ್ಸ್
ಪೀಣ್ಯದಲ್ಲಿ ಮುಖ್ಯ ಘಟಕ ಹೊಂದಿರುವ ಗ್ರೀನ್ಟೆಕ್ ಅಪ್ಲಾಯನ್ಸಸ್ ಲಿಮಿಟೆಡ್ ಸಂಸ್ಥೆ ಹಲವು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತದೆ. ಗ್ಯಾಸ್ ಸ್ಟೌವ್, ಮಿಕ್ಸರ್ ಗ್ರೈಂಡರ್, ಪ್ರೆಷರ್ ಕುಕರ್, ಇಂಡಕ್ಷನ್ ಕುಕ್ಟಾಪ್, ರೈಸ್ ಕುಕರ್, ವೆಟ್ ಗ್ರೈಂಡರ್, ಸ್ಟೈನ್ಲೆಸ್ ಸ್ಟೀಲ್ ಉಪಕರಣಗಳು ಮೊದಲಾದ ಉತ್ಪನ್ನಗಳನ್ನು ಅದು ತಯಾರಿಸುತ್ತದೆ.
ಬೆಂಗಳೂರಿನಲ್ಲಿ 3 ಫ್ಯಾಕ್ಟರಿಗಳನ್ನು ಹೊಂದಿದೆ. ಹಿಮಾಚಲಪ್ರದೇಶದಲ್ಲಿ ಒಂದು ಫ್ಯಾಕ್ಟರಿ ಇದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ್ ಮತ್ತು ಬಿಹಾರ ರಾಜ್ಯಗಳಿಗೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸುವ ಆಲೋಚನೆಯಲ್ಲಿ ಗ್ರೀನ್ಟೆಕ್ ಇದೆ.
ತುಮಕೂರಿನ ವಸಂತನರಸಾಪುರದಲ್ಲಿ 15 ಎಕರೆಯಷ್ಟು ವಿಶಾಲ ಜಮೀನಿನಲ್ಲಿ ಗ್ರೀನ್ಚೆಫ್ ಸಂಸ್ಥೆಯ ಹೊಸ ಕಾರ್ಖಾನೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಐಪಿಒದಲ್ಲಿ ಸಂಗ್ರಹವಾದ ಹೂಡಿಕೆಯ ಕೆಲ ಭಾಗವನ್ನು ತುಮಕೂರಿನ ಫ್ಯಾಕ್ಟರಿಗೆ ವ್ಯಯಿಸಲು ಸಂಸ್ಥೆ ನಿರ್ಧರಿಸಿದೆ. ಆ ಕಾರ್ಖಾನೆ 2023ರ ಡಿಸೆಂಬರ್ನಿಂದ 2024ರ ಮಾರ್ಚ್ನೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Sun, 9 July 23