
ಕಳೆದ ಒಂದು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver prices) ಸಿಕ್ಕಾಪಟ್ಟೆ ಏರಿದಷ್ಟು ವೇಗದಲ್ಲಿ ಕೆಲ ದಿನಗಳಿಂದ ಕುಸಿತ ಕಾಣುತ್ತಿವೆ. ಈ ಅಮೂಲ್ಯ ಲೋಹಗಳ ಬೆಲೆಯನ್ನು ಕಟ್ಟಿಹಾಕುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಲ್ಲೇ ಭರ್ಜರಿ ಕುಸಿತ ಆಗಿದೆ. ಹೂಡಿಕೆದಾರರು ಲಾಭಕ್ಕೆ ಮಾರಿಕೊಳ್ಳುತ್ತಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಕಾಮೆಕ್ಸ್ ಮಾರುಕಟ್ಟೆಯಲ್ಲಿ ಪ್ಯಾನಿಕ್ ಸೆಲ್ಲಾಫ್ (Panic Sell-off) ಆಗಿರುವುದು ಕಂಡು ಬಂದಿದೆ. ಪ್ಯಾನಿಕ್ ಸೆಲ್ಲಾಫ್ ಎಂದರೆ ಹೂಡಿಕೆದಾರರು ಯಾವುದೋ ಆತಂಕದಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿರುವುದಾಗಿದೆ.
ಕಮಾಡಿಟಿ ಎಕ್ಸ್ಚೇಂಜ್ ಅಥವಾ ಕಾಮೆಕ್ಸ್ನಲ್ಲಿ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಸಖತ್ ಕುಸಿತ ಕಂಡಿವೆ. ಸೋಮವಾರ ಒಂದೇ ದಿನ ಈ ಡಿರೈವೇಟಿವ್ಸ್ ಟ್ರೇಡಿಂಗ್ನಲ್ಲಿ ಬೆಲೆ ಶೇ. 2ರಿಂದ 5ರಷ್ಟು ಇಳಿಕೆ ಆಗಿದೆ.
ಇಲ್ಲಿಂದ ಶುರುವಾದ ನಡುಕವು ಇಟಿಎಫ್ ಹೂಡಿಕೆದಾರರಿಗೆ ಭಯಭೀತಗೊಳಿಸಿದೆ. ಸಿಲ್ವರ್ ಇಟಿಎಫ್ ಮತ್ತು ಗೋಲ್ಡ್ ಇಟಿಎಫ್ಗಳಿಂದ ಲೆಕ್ಕವಿಲ್ಲದಷ್ಟು ಹೂಡಿಕೆಗಳು ಹೊರ ಹೋಗಿವೆ. ಹೀಗಾಗಿ, ಈ ಎರಡು ಲೋಹಗಳ ಬೆಲೆ ಗಣನೀಯವಾಗಿ ಇಳಿಕೆ ಆಗಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಲು ಕಾರಣವಾಗಿದ್ದೇ ಈ ಇಟಿಎಫ್ಗಳು. ಈಗ ಇದೇ ಇಟಿಎಫ್ಗಳು ಇವೆರೆಡು ಲೋಹಗಳ ಬೆಲೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿವೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ನ ಛೇರ್ಮನ್ ಸ್ಥಾನ ಬದಲಾವಣೆ ಆಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಟ್ರಂಪ್ ಮಾತು ಕೇಳುವ ಕೆವಿನ್ ವಾರ್ಷ್ ಎಂಬುವವರು ಹೊಸ ಛೇರ್ಮನ್ ಆಗಲಿದ್ದಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಬೆಲೆ ವ್ಯತ್ಯಯಕ್ಕೆ ಕಾರಣವಾಯಿತು.
ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…
ವಿಶ್ವದ ಕೆಲ ಪ್ರಮುಖ ಡಿರೈವೇಟಿವ್ ಮಾರುಕಟ್ಟೆಗಳನ್ನು ನಿರ್ವಹಿಸುವ ಸಿಎಂಇ ಗ್ರೂಪ್ ಮೂರು ದಿನದಲ್ಲಿ ಎರಡು ಬಾರಿ ಮೈಂಟೆನೆನ್ಸ್ ಮಾರ್ಜಿನ್ ಅನ್ನು ಹೆಚ್ಚಿಸಿತು. ಟ್ರೇಡರ್ಗಳು ಎಫ್ ಅಂಡ್ ಓ ಟ್ರೇಡಿಂಗ್ ಮಾಡಲು ಪಾವತಿಸಬೇಕಾದ ಠೇವಣಿ ಹಣ ಹೆಚ್ಚಳಗೊಂಡಿತು. ಇದರಿಂದ ಟ್ರೇಡರ್ಗಳು ಫ್ಯೂಚರ್ಸ್ನಿಂದ ನಿರ್ಗಮಿಸತೊಡಗಿದರು. ಇದು ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಕಾರಣವಾಯಿತು. ತತ್ಪರಿಣಾಮವಾಗಿ ಇಟಿಎಫ್ಗಳಲ್ಲೂ ಪ್ಯಾನಿಕ್ ಸೆಲ್ಲಾಫ್ ನಡೆಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ